ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ‘ಬರ ಪರಿಹಾರ ಹಣಕ್ಕಾಗಿ ಬರಗಾಲ ಬರಲಿ ಎಂದು ರೈತರು ಕಾಯುತ್ತಾರೆ’... ಎಂದು ರೈತ ಸಮುದಾಯದ ಬಗ್ಗೆ ಲಘುವಾಗಿ ಮಾತನಾಡಿರುವ ಸಚಿವ ಶಿವಾನಂದ ಪಾಟೀಲ್ ರಾಜೀನಾಮೆಗೆ ಆಗ್ರಹಿಸಿ ಕಾವೇರಿ ಹೋರಾಟಗಾರರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು,
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಕಾವೇರಿ ಹೋರಾಟಗಾರರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಚಿವ ಶಿವಾನಂದ ಪಾಟೀಲ್ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.ಸಚಿವ ಶಿವಾನಂದ ಪಾಟೀಲ್‌ಗೆ ರೈತರು ಎದುರಿಸುತ್ತಿರುವ ಸಂಕಷ್ಟದ ಅರಿವಿಲ್ಲ, ರೈತರ ಬದುಕಿನ ಬಗ್ಗೆ ತಿಳಿವಳಿಕೆಯೂ ಇಲ್ಲ. ಅಧಿಕಾರದ ಮದದಲ್ಲಿ ದುರಹಂಕಾರದ ಮಾತುಗಳನ್ನಾಡುತ್ತಿದ್ದಾರೆ. ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಯೋಗ್ಯತೆ ಇಲ್ಲದಿದ್ದರೂ ರೈತರ ಬಗ್ಗೆ ನಾಲಿಗೆಯನ್ನು ಹರಿಯಬಿಡುತ್ತಿದ್ದಾರೆ. ಇಂತಹವರು ಸಚಿವ ಸ್ಥಾನದಲ್ಲಿರುವುದಕ್ಕೆ ಅಯೋಗ್ಯರು. ಕೂಡಲೇ ಮುಖ್ಯಮಂತ್ರಿಗಳು ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಹಿಂದೆಯೂ ಸಹ ಲಕ್ಷ ಲಕ್ಷ ಪರಿಹಾರ ಹಣ ಸಿಗುತ್ತದೆಂಬ ಕಾರಣಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಶಿವಾನಂದ ಪಾಟೀಲ್ ಅವಮಾನಿಸಿದ್ದರು, ರೈತರ ಬಗ್ಗೆ ಕೀಳು ಮನೋಭಾವ ಹೊಂದಿರುವ ಪಾಟೀಲ್‌ರಂತಹವರು ಜನಪ್ರತಿನಿಧಿಯಾಗಲು ಯೋಗ್ಯರಲ್ಲ. ಇವರನ್ನು ಆ ಕ್ಷೇತ್ರದ ಜನರೂ ಮುಂಬರುವ ಚುನಾವಣೆಯಲ್ಲಿ ತಿರಸ್ಕರಿಸುವಂತೆ ಮನವಿ ಮಾಡಿದರು.ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಆಳುವ ಸರ್ಕಾರಕ್ಕೆ ಕಣ್ಣು ಇಲ್ಲ, ಕಿವಿಯು ಇಲ್ಲ, ಕಾವೇರಿ ಹೋರಾಟ ನಿರಂತರವಾಗಿ ನಡೆಯುತ್ತಿದ್ದರೂ ನೀರು ಉಳಿಸಿಕೊಳ್ಳುವ ಪ್ರಯತ್ನ ಮಾಡಲೇ ಇಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಜಾಣ ಪೆದ್ದನ ರೀತಿ ವರ್ತಿಸುತ್ತಿದ್ದಾರೆ. ರೈತರನ್ನ ಅವಮಾನಿಸಿರುವ ಸಚಿವನನ್ನು ಇನ್ನೂ ಸಹ ಸಂಪುಟದಲ್ಲಿ ಉಳಿಸಿಕೊಂಡಿರುವುದೇ ದೊಡ್ಡ ದುರಂತ ಎಂದು ಟೀಕಿಸಿದರು.
ಸ್ವಾಭಿಮಾನದಿಂದ ಬದುಕುತ್ತಿರುವ ರೈತ ಶ್ರಮದಿಂದಲೇ ಜೀವನ ಮಾಡುತ್ತಾನೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥದಿಂದ ಭೂಮಿಯನ್ನು ನಂಬಿ ಕೃಷಿ ಮಾಡುವ ರೈತನ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡಿರುವ ಸಚಿವ ಶಿವಾನಂದ ಪಾಟೀಲ್ ಯೋಗ್ಯನಲ್ಲ, ಈತನನ್ನು ತಕ್ಷಣ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕೃಷ್ಣಪ್ರಕಾಶ್, ಎಂ.ವಿ ಕೃಷ್ಣ, ಜೈ ಕರ್ನಾಟಕ ಪರಿಷತ್‌ನ ಎಸ್.ನಾರಾಯಣ್,ಸುಶೀಲಮ್ಮ ನೇತೃತ್ವ ವಹಿಸಿದ್ದರು.
ಉಪವಾಸ ಮುಂದುವರಿಕೆ:ಕಾವೇರಿ ಕೊಳ್ಳದ ಜಲಾಶಯ ಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸರದಿ ಉಪವಾಸ ಮುಂದುವರೆದಿದೆ.
ನಗರದ ಸರ್ ಎಂ.ವಿ.ಪ್ರತಿಮೆ ಎದುರು ಸರದಿ ಉಪವಾಸದಲ್ಲಿ ನಿವೃತ್ತ ಎಂಜಿನಿಯರ್ ಕೆಂಪೇಗೌಡ, ಹುಳ್ಳೇನಹಳ್ಳಿ ಎಚ್.ಸಿ. ಚನ್ನೇಗೌಡ, ಕೀಲಾರ ಕೆ.ಬಿ.ಕೆಂಪೇಗೌಡ, ಕೋಣನಹಳ್ಳಿ ಕರಿಯಪ್ಪ, ಸಿದ್ದಯ್ಯನ ಕೊಪ್ಪಲು ಎಸ್ ಎಲ್ ಸಿದ್ದೇಗೌಡ ಹಾಗೂ ಮಂಡ್ಯ ಕಾವೇರಿ ನಗರದ ಎಸ್.ಪಿ.ನಾರಾಯಣಸ್ವಾಮಿ ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))