ವಿದ್ಯಾರ್ಥಿಗಳ ವಿಜ್ಞಾನ ಮಾದರಿ ಕ್ರಿಯಾಶೀಲತೆಗೆ ಸಾಕ್ಷಿ

| Published : Dec 27 2023, 01:30 AM IST

ವಿದ್ಯಾರ್ಥಿಗಳ ವಿಜ್ಞಾನ ಮಾದರಿ ಕ್ರಿಯಾಶೀಲತೆಗೆ ಸಾಕ್ಷಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಭವಿಷ್ಯ ಸರಿಯಾದ ಕೈಯಲ್ಲಿವೆ ಎಂದು ವಿದ್ಯಾರ್ಥಿಗಳು ಮಾಡಿದ ಚಂದ್ರಯಾನ ಮಾದರಿಯನ್ನು ನೋಡಿ ತಿಳಿದುಬಂದಿದೆ.

ಹೊನ್ನಾಳಿ: ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳು ತುಂಬಾ ಚೆನ್ನಾಗಿ ಮಾದರಿಗಳನ್ನು ತಯಾರು ಮಾಡಿದ್ದಾರೆ ಇದು ಮಕ್ಕಳಲ್ಲಿನ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದು ಬಿಇಒ ಎಸ್.ಸಿ.ನಂಜರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ಸಾಸ್ವೆಹಳ್ಳಿ ಹೋಬಳಿಯ ವಿಂಪನ ಸೆಂಟ್ರಲ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಜ್ಞಾನ ವಸ್ತುಪ್ರದರ್ಶನವನ್ನು ಚಂದ್ರಯಾನ-3ರ ಮಾದರಿಯ ವಿಕ್ರಂ ಲ್ಯಾಂಡರ್, ರೋವರ್ ಪ್ರಗ್ಯಾನ್ , ಮಾರ್ಕ್ 3 ಉಪಗ್ರಹ ಉಡಾವಣೆಯನ್ನು ಉಡಾಯಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ತಾಂತ್ರಿಕ ಜಗತ್ತಿಗೆ ಮಕ್ಕಳನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಶಾಲೆಯ ಆಡಳಿತ ಮಂಡಳಿಯವರು ಪ್ರಥಮ ಹೆಜ್ಜೆಯಾಗಿ ವಿಜ್ಞಾನ ವಸ್ತುಪ್ರದರ್ಶನವನ್ನು ಹಮ್ಮಿಕೊಂಡಿದ್ದು ಶ್ಲಾಘನೀಯ ಕಾರ್ಯವೆಂದರು. ಖಾಸಗಿ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಿ ದೇಶಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ಕೊಡುವ ನಿಟ್ಟಿನಲ್ಲಿ ಶಿಕ್ಷಣ ನೀಡಬೇಕೆಂದು ಸೂಚಿಸಿದರು.

ಮೈಸೂರಿನ ಗ್ರಾವಿಟಿ ಸೈನ್ಸ್ ಫೌಂಡೇಶನ್‍ನ ವಿಜ್ಞಾನಿ ಎ.ಎಸ್.ಅಭಿಷೇಕ್ ಮಾತನಾಡಿ, ಚಟುವಿಟಿಕೆಯಾಧಾರಿತ ಕಲಿಕೆ ಬಹಳಷ್ಟು ಪರಿಣಾಮಕಾರಿಯಾಗಿರುತ್ತದೆ. ಪೋಷಕರು-ಶಿಕ್ಷಕರು ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವನೆಯನ್ನು ಬೆಳೆಸಬೇಕು. ಮಕ್ಕಳಿಗೆ ಕ್ರಿಯಾತ್ಮಕವಾಗಿ ಕಲಿಸುವುದರ ಜೊತೆಗೆ ವಿಭಿನ್ನವಾಗಿ ಯೋಚಿಸುವುದನ್ನು ಕಲಿಸಬೇಕಿದೆ ಎಂದರು.

ವಿಜ್ಞಾನ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾತ್ರವೇ ಸೀಮಿತವಾಗಿರಿದೆ ಅದರ ಬದಲಾಗಿ ವಿಜ್ಞಾನವನ್ನು ಜನಸಾಮಾನ್ಯರಿಗೂ ತಲುಪಿಸುವುದರ ಜೊತೆಗೆ ಸಮಾಜದಲ್ಲಿ ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.

ವಿಂಪನ ಸೆಂಟ್ರಲ್ ಶಾಲೆಯ ಅಧ್ಯಕ್ಷ ಡಿ.ಪಿ.ಪವನ್ ಮಾತನಾಡಿ, ಶಾಲೆಯಲ್ಲಿ ಮಗುವಿನ ಸರ್ವಾಂಗೀಣ ಬೆಳವಣೆಗೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿ ವಿಭಿನ್ನ ರೀತಿಯ ಕಲಿಕಾ ವ್ಯವಸ್ಥೆ ಮಾಡಲಾಗಿದೆ ಎಂದರು. ಮುಂಬರುವ ವರ್ಷದಿಂದ ಚಟುವಟಿಕೆಯಾಧಾರಿತ ಶಿಕ್ಷಣ ಕಲಿಸುವ ನಿಟ್ಟಿನಲ್ಲಿ ವಿಜ್ಞಾನಿ ಅಭಿಷೇಕ್ ಅವರ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಮಕ್ಕಳು ತರಗತಿಯಲ್ಲಿನ ವಿಷಯಗಳನ್ನು ಪ್ರಾಯೋಗಿಕವಾಗಿ ಕಲಿಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಐ ಮಾಸ್ಟರ್ ಸಂಸ್ಥೆಯ ವಿರೇಶ್ ಮಾತನಾಡಿ, ಜಿಲ್ಲೆಯಲ್ಲಿಯೇ ವಿಂಪನ ಸೆಂಟ್ರಲ್ ಶಾಲೆಯಲ್ಲಿ ಇನ್ನೋವೇಟಿವ್ ಶಿಕ್ಷಣವನ್ನು ನೀಡುವ ಮೂಲಕ ಹೊಸ ಶಿಕ್ಷಣ ವ್ಯವಸ್ಥೆಗೆ ಭದ್ರ ಬುನಾದಿ ಹಾಕಲಾಗುತ್ತಿದೆ. ಇದಕ್ಕೆ ಪೋಷಕರ ಸಲಹೆ-ಸಹಕಾರ ಅತ್ಯಗತ್ಯವಾಗಿಬೇಕಿದ್ದು, ಮಕ್ಕಳು ಮುಕ್ತವಾಗಿ ಕಲಿಯುವ ವಾತಾವರಣವನ್ನು ಶಾಲೆಯಲ್ಲಿ ಸೃಷ್ಟಿಸಲಾಗಿದೆ ಎಂದು ವಿವರಿಸಿದರು.

ವಿಜ್ಞಾನ, ಗಣಿತ, ಕನ್ನಡ, ಹಿಂದಿ, ಕಂಪ್ಯೂಟರ್, ಸಮಾಜ ವಿಜ್ಞಾನ ಮತ್ತು ಸಾಮಾನ್ಯ ವಿಜ್ಞಾನಕ್ಕೆ ವಿಷಯಗಳಿಗೆ ಸಂಬಂಧಪಟ್ಟ ವಿದ್ಯಾರ್ಥಿಗಳು ತಯಾರು ಮಾಡಿದ ಮಾಡೆಲ್‍ಗಳು ಪೋಷಕರ ಮತ್ತು ಸಾರ್ವಜನಿಕರ ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶೃತಿಪವನ್, ಶಾಲೆಯ ಮುಖ್ಯೋಪಾಧ್ಯಾಯಿನಿ ಭಾರತಿ, ಮೈಸೂರಿನ ಗ್ರಾವಿಟಿ ಸೈನ್ಸ್ ಫೌಂಡೇಶನ್‍ನ ಸೋಮರಾಜ್ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.