ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾರ್ಥಿಗಳಿಗೆ ವರ್ತನೆ, ಕೌಶಲ್ಯ ಮತ್ತು ಜ್ಞಾನ ಮುಖ್ಯ ಎಂದು ಕವಿ, ಬಸಪ್ಪ ಸಿ. ಸಾಲುಂಡಿ ಹೇಳಿದರು.ಕನಕದಾಸನಗರದ ವಿಶ್ವಪ್ರಜ್ಞ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಇತರರಿಗಿಂತ ಭಿನ್ನವಾಗಿ ಆಲೋಚಿಸುವ ಸಾಮರ್ಥ್ಯ ಇದ್ದಲ್ಲಿ ಸಾಧನೆ ಮಾಡಬಹುದು ಎಂದು ಹೇಳಿದರು.
ವಿದ್ಯಾರ್ಥಿಗಳು ಕೇವಲ ಪ್ರದರ್ಶನ ಮಾಡುವುದಕ್ಕಿಂತ ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕು. ಕಲಿಕೆಯ ಬಗ್ಗೆ ಆಸಕ್ತಿ ಇದ್ದರೆ ಸಾಕು, ಬುದ್ಧಿವಂತಿಕೆ ತಾನೆತಾನಾಗಿ ಬರುತ್ತದೆ. ವಿದ್ಯಾರ್ಥಿಗಳು ವೇಳಾಪಟ್ಟಿ ಸಿದ್ದಪಡಿಸಿಕೊಂಡು ಓದಬೇಕು. ಸಂವಹನ ಕೌಶಲ್ಯ ಬೆಳೆಸಿಕೊಳ್ಳಬೇಕು. ಅಂಕ ಗಳಿಕೆ ಜೊತೆಗೆ ಕೌಶಲ್ಯವಿದ್ದಲ್ಲಿ ಮಾತ್ರ ತಾವು ಅಂದುಕೊಂಡು ಗುರಿ ತಲುಪಬಹುದು ಎಂದು ಹೇಳಿದರು.ಗಾಯಕ ನಿಶ್ಚಯ್ ಜೈನ್ ಮಾತನಾಡಿ, ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ. ಗುರುಗಳ ಪ್ರತಿ ಸಲಹೆಯನ್ನು ಒಂದೊಂದು ಮೆಟ್ಟಿಲು ಮಾಡಿಕೊಂಡು ಮೇಲೆ ಬನ್ನಿ ಎಂದು ಸಲಹೆ ಮಾಡಿದರು
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಕೇವಲ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಮಾತ್ರವಲ್ಲದೇ ಮೂಲ ವಿಜ್ಞಾನ, ನರ್ಸಿಂಗ್, ಕೃಷಿ, ತೋಟಗಾರಿಕೆ, ಅರಣ್ಯ ಮತ್ತಿತರ ಕೋರ್ಸುಗಳನ್ನು ಕೂಡ ಕಲಿಯಬಹುದು .ಇವುಗಳಲ್ಲಿ ಉದ್ಯೋಗವಕಾಶಗಳು ಹೆಚ್ಚಿವೆ. ಜೊತೆಗೆ ಯುಪಿಎಸ್ಸಿ, ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ತೆಗೆದುಕೊಳ್ಳಬೇಕು ಎಂದು ಹೇಳಿದರು.ಶೈಕ್ಷಣಿಕ ನಿರ್ದೇಶಕ ವೈಭವ್ ವಿ ಬಾಡಕರ ಮಾತನಾಡಿ, ಇತರರಿಗಿಂತ ನಿಮ್ಮ ಉತ್ತರಗಳು ಭಿನ್ನವಾಗಿರಬೇಕು. ಸ್ಪುಟವಾಗಿರಬೇಕು. ಆಗ ಮಾತ್ರ ಸಾಧಿಸಿ ತೋರಿಸಬಹುದು. ಪರಿಸರ ಹಾಗೂ ಆಧ್ಯಾತ್ಮಿಕತೆಗೆ ಒತ್ತು ನೀಡಿ, ಇತರಗಿಂತ ಭಿನ್ನವಾಗಿ ಚಿತ್ರಿಸಿದ್ದರಿಂದಲೇ ''''''''ಕಾಂತಾರ'''''''' ಸಿನಿಮಾ ಯಶಸ್ವಿಯಾಯಿತು ಎಂದು ಹೇಳಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಎಂ.ಮಹೇಂದ್ರ ಪ್ರಾಸ್ತಾವಿಕ ಭಾಷಣ ಮಾಡಿ, ಕಳೆದ ಎರಡು ವರ್ಷಗಳಿಂದ ಸಂಸ್ಥೆ 20 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ 10 ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯ್ತಿ ನೀಡಿದೆ. ಭವಿಷ್ಯದಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಮಹೋದ್ದೇಶ ಹೊಂದಿದೆ ಎಂದರು.ಕಾರ್ಯಕ್ರಮದಲ್ಲಿ ಸಮರ್ಥ ಜ್ಞಾನಾಶ್ರಯ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಎಚ್.ಸಿ. ಸುನಿಲ್ ರಾಜ್, ಆಡಳಿತಾಧಿಕಾರಿ ಎಂ.ಆರ್. ಸುಧೀಂದ್ರ, ಪ್ರಾಂಶುಪಾಲ ಆರ್.ವಿ. ಮನೋಹರ ಬಾಬು ಉಪಸ್ಥಿತರಿದ್ದರು. ಲಕ್ಷ್ಮೀ ಮತ್ತು ಮೋನಿಷಾ ಪ್ರಾರ್ಥಿಸಿ, ಸ್ಫೂರ್ತಿ ಸ್ವಾಗತಿಸಿ, ಎಲ್.ಎಸ್. ಸುಬ್ಬಲಕ್ಷ್ಮಿ, ಎ.ರೋಹಿಣಿ, ಆರ್. ಸಮರ್ಥ್ ಅತಿಥಿಗಳನ್ನು ಪರಿಚಯಿಸಿದರು. ವೈ.ಚೈತನ್ಯಾ ವಂದಿಸಿದರು. ಎಂ. ಸಿಂಚನಾ ಹಾಗೂ ಮಿಥುನ್ ಎಸ್. ಗೌಡ ಕಾರ್ಯಕ್ರಮ ನಿರೂಪಿಸಿದರು.
ಸಂಸ್ಥೆಯಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಶೇಷಗಿರಿರಾವ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಹಾಡಿ ರಂಜಿಸಿದ ನಿಶ್ಚಯ್ ಜೈನ್
ಗಾಯಕ ಹಾಗೂ ಕಿರುತೆರೆ ನಟ ನಿಶ್ಚಯ್ ಜೈನ್ ಅವರು ಪುನೀತ್ ರಾಜ್‌ಕುಮಾರ್ ಅಭಿನಯದ ನೀನೆ ರಾಜಕುಮಾರ ಚಿತ್ರದ ಗೊಂಬೆ ಹೇಳುತೈತೆ... ಸೇರಿದಂತೆ ಕೆಲವು ಗೀತೆಗಳನ್ನು ಹಾಡಿ, ರಂಜಿಸಿದರು. ವಿದ್ಯಾರ್ಥಿಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.;Resize=(128,128))
;Resize=(128,128))
;Resize=(128,128))