ಕಾರ್ಮಿಕರ ಶ್ರಮದಿಂದ ಸಮಾಜ ಸುವ್ಯವಸ್ಥಿತವಾಗಿ ನಡೆಯುತ್ತಿದೆ: ನ್ಯಾ.ಎಂ.ಎಸ್.ಸಂತೋಷ್

| Published : Sep 21 2024, 01:56 AM IST

ಕಾರ್ಮಿಕರ ಶ್ರಮದಿಂದ ಸಮಾಜ ಸುವ್ಯವಸ್ಥಿತವಾಗಿ ನಡೆಯುತ್ತಿದೆ: ನ್ಯಾ.ಎಂ.ಎಸ್.ಸಂತೋಷ್
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದಲ್ಲಿ ಕಾರ್ಮಿಕರಿಗೆ ಸರ್ಕಾರ ಜಾರಿಗೊಳಿಸಿರುವ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಮಾಲೀಕರು, ಕಾರ್ಮಿಕರಿಗೆ ಅರಿವು ಮೂಡಿಸುವ ಕಾರ್ಯಾಗಾರಕ್ಕೆ ನ್ಯಾ.ಎಂ.ಎಸ್. ಸಂತೋಷ್ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾರ್ಮಿಕರ ಶ್ರಮದಿಂದ ಸಮಾಜ ಸುವ್ಯವಸ್ಥಿತವಾಗಿ ನಡೆಯುತ್ತಿದೆ. ಅದೇ ರೀತಿಯಲ್ಲಿ ಕಾರ್ಮಿಕರು ನೆಮ್ಮದಿಯಾಗಿರಲೆಂದು ಸರ್ಕಾರ ಅವರಿಗಾಗಿ ಅನೇಕ ಯೋಜನೆಗಳು, ಸೌಲಭ್ಯಗಳನ್ನು ಜಾರಿಗೊಳಿಸಿದ್ದು, ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ಎಂ.ಎಸ್.ಸಂತೋಷ್ ಹೇಳಿದರು.

ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಹಾಗೂ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಕಾರ್ಮಿಕ ಇಲಾಖೆ ಅನುಷ್ಠಾನ ಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳು ಮತ್ತು ಅಸಂಘಟಿತ ಕಾರ್ಮಿಕರಿಗೆ ಲಭ್ಯವಿರುವ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಮಾಲೀಕರು ಮತ್ತು ಕಾರ್ಮಿಕ ವರ್ಗಕ್ಕೆ ಶುಕ್ರವಾರ ಏರ್ಪಡಿಸಲಾಗಿದ್ದ ಅರಿವು ಮೂಡಿಸುವ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜ ಎಂಬ ದೊಡ್ಡ ಯಂತ್ರ ಕಾರ್ಮಿಕರೆಂಬ ಇನ್ನೊಂದು ಯಂತ್ರದಿಂದ ಸುಗಮವಾಗಿ ನಡೆದುಕೊಂಡು ಹೋಗುತ್ತಿದೆ. ಒಂದು ಪಕ್ಷ ಕಾರ್ಮಿಕ ಯಂತ್ರ ಸರಿಯಾಗಿ ಕಾರ್ಯನಿರ್ವಹಿಸದೆ ಹೋದರೆ ಅನೇಕ ರೀತಿಯಲ್ಲಿ ತೊಂದರೆ ಎದುರಾಗುತ್ತದೆ. ಆದ್ದರಿಂದ ಕಾರ್ಮಿಕರು ಪ್ರೀತಿ ಮತ್ತು ಶಿಸ್ತಿನಿಂದ ತಮ್ಮ ಕೆಲಸದಲ್ಲಿ ತೊಡಗಿ ಸಮಾಜ ಸುಸ್ಥಿತಿಯಲ್ಲಿ ಕಾರ್ಯ ನಿರ್ವಹಣೆ ಮಾಡಲು ಅನುಕೂಲ ಮಾಡಿಕೊಡಬೇಕು ಎಂದರು.

ಇಂತಹ ಕಾರ್ಮಿಕ ವರ್ಗದವರ ಜೀವನ ಮಟ್ಟ ಉತ್ತಮವಾಗಿರಲೆಂದು ಸರ್ಕಾರ ಹಲವಾರು ಯೋಜನೆಗಳನ್ನು ಅವರಿಗಾಗಿ ನೀಡಿದೆ. ಆನ್‌ಲೈನ್ ಮೂಲಕ ನೋಂದಣಿಗೆ ಅವಕಾಶ ಮಾಡಿಕೊಟ್ಟು, ಕಾರ್ಮಿಕ ಇಲಾಖೆ ಅವರಿಗೆ ಸಹಕಾರ ನೀಡಲು ಸಜ್ಜಾಗಿದೆ. ಕಾರ್ಮಿಕರು ತಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಬ್ಯಾಂಕ್ ವಿವರ, ಕೆಲಸದ ವಿವರಗಳನ್ನು ನೀಡಿ ಯೋಜನೆಗಳ ಫಲ ಪಡೆಯಬಹುದು ಎಂದು ಹೇಳಿದರು.

ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲು ಕಾರ್ಮಿಕ ಇಲಾಖೆ ಇದೆ. ವಿವಿಧ ಸೌಲಭ್ಯಗಳು, ಅವುಗಳನ್ನು ಪಡೆಯುವ ಕುರಿತು ಅರಿವು ಮೂಡಿಸಲು ಕೈಪಿಡಿ, ವೆಬ್ ಸೈಟ್‌ಗಳು ಲಭ್ಯವಿದೆ. ಹಾಗೂ ಕಾಲಕಾಲಕ್ಕೆ ಮಾಹಿತಿ ನೀಡುವ ಕಾರ್ಯಾಗಾರಗಳು ನಡೆಯುತ್ತಿದ್ದು, ಕಾರ್ಮಿಕರು ಇಂತಹ ವೇದಿಕೆಯನ್ನು ಸದುಪಯೋಗಪಡಿಸಿ ಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಅಧಿಕಾರಿ ಎಂ.ಪಿ.ವೇಣುಗೋಪಾಲ್ ಮಾತನಾಡಿ, ಇಂದಿನ ಕಾರ್ಯಾಗಾರದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳು ಕಾರ್ಮಿಕ ಇಲಾಖೆ ಸೇರಿದಂತೆ ಸರ್ಕಾರದಿಂದ ಕಾರ್ಮಿಕರಿಗೆ ಲಭ್ಯವಿರುವ ವಿವಿಧ ಯೋಜನೆಗಳು, ಕಾರ್ಯಕ್ರಮಗಳು, ಕಾನೂನುಗಳ ಕುರಿತು ಸವಿವರವಾಗಿ ಮಾಹಿತಿ ನೀಡಲಿದ್ದಾರೆ. ಇದರ ಸದುಪಯೋಗವನ್ನು ಎಲ್ಲ ಕಾರ್ಮಿಕರು ಪಡೆಯಬೇಕೆಂದು ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ 1 ನೇ ವೃತದ ಕಾರ್ಮಿಕ ನಿರೀಕ್ಷಕ ಎಂ.ಕೃಷ್ಣ, ಇಎಸ್‌ಐ ಆಸ್ಪತ್ರೆಯ ಡಾ.ಸಂಜನಾ ಮಾಹಿತಿ ನೀಡಿದರು.

ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ರಘುನಾಥ ನಿರೂಪಿಸಿದರು. 1ನೇ ವೃತ್ತದ ಕಾರ್ಮಿಕ ನಿರೀಕ್ಷಕಿ ಜೆ.ವಿ.ಸುಪ್ರಿತ, ಶಿಕಾರಿಪುರ ವೃತ್ತದ ಕಾರ್ಮಿಕ ನಿರೀಕ್ಷಕ ಫಕೀರಪ್ಪ ಗೋಡಿ, ಭದ್ರಾವತಿ 2 ನೇ ವೃತ್ತದ ಕಾರ್ಮಿಕ ನಿರೀಕ್ಷಕ ಬಿ.ಎಂ.ರಕ್ಷಿತ್, ಸಾಗರ ವೃತ್ತದ ಕಾರ್ಮಿಕ ನಿರೀಕ್ಷಕಿ ಬಿ.ಶಿಲ್ಪ, ಕಾರ್ಮಿಕ ಸಂಘದ, ಮಾಲೀಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಅಸಂಘಟಿತ ಕಾರ್ಮಿಕರು ಹಾಜರಿದ್ದರು.