ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ಸದನದಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಅಥವಾ ಹೈ ಕೋರ್ಟ್ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದರು.ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ರಾಜಕಾರಣಿಗಳು, ಉದ್ಯಮಿಗಳು ಹಾಗೂ ಮಠಾಧೀಶರನ್ನು ಗುರಿಯಾಗಿಸಿ ಅವರ ಹೆಸರಿಗೆ ಕಳಂಕ ತರುವ ಹೇಯ ಕೃತ್ಯವಾಗಿದೆ. ಇಂತಹ ಕೆಲವು ಪ್ರಕರಣಗಳಲ್ಲಿ ಕೆಲವು ರಾಜಕಾರಣಿಗಳೂ ಕುಮ್ಮಕ್ಕು ನೀಡುತ್ತಿದ್ದಾರೆ. ಆದ್ದರಿಂದ ಸಮಗ್ರ ತನಿಖೆ ಆಗಬೇಕು ಎಂದರು.
ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಸರ್ಕಾರದ ಡಿಜಿಪಿ ಮಟ್ಟದ ಉನ್ನತ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ, ತನಿಖೆ ನಡೆಸಿ ತನಿಖಾ ವರದಿ ಸೋರಿಕೆ ಆಗದಂತೆ ಗೌಪ್ಯತೆ ಕಾಪಾಡಿಕೊಂಡು ಆರು ತಿಂಗಳ ಒಳಗಾಗಿ ನ್ಯಾಯಮೂರ್ತಿಗಳಿಗೆ ತನಿಖಾ ವರದಿ ಸಲ್ಲಿಸಬೇಕು. ಅದರನ್ವಯ ವಿಚಾರಣೆ ನಡೆಸಿ ಹನಿಟ್ರ್ಯಾಪ್‌ನಲ್ಲಿ ಪಾಲ್ಗೊಂಡಿರುವ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.ಹನಿಟ್ರ್ಯಾಪ್ ಗಂಭೀರ ಸ್ವರೂಪದ ದ್ರೋಹವಾಗಿರುತ್ತದೆ. ಇದು ಕಾನೂನಿನ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧವಾಗಿರುತ್ತದೆ. ಹನಿಟ್ರ್ಯಾಪ್ ಮಾಡಿ ಅಕ್ರಮವಾಗಿ ಹಣ ಸಂಪಾದಿಸುವ ಕಾನೂನುಬಾಹಿರ ಕೃತ್ಯಗಳಲ್ಲಿ ಕೆಲವು ಬಲಿಷ್ಠ ರಾಜಕಾರಣಿಗಳು, ಕೆಲವು ಪೊಲೀಸರು, ಕೆಲವು ಪತ್ರಕರ್ತರು ಹಾಗೂ ದಾರಿತಪ್ಪಿದ ಕೆಲವು ಸಮಾಜಘಾತುಕ ಶಕ್ತಿಗಳು ಹಾಗೂ ಯುವ ಜನರು ಹಾಗೂ ಕೆಲವು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚಾಗಿ ಹನಿಟ್ರ್ಯಾಪ್ ನಂತಹ ಗಂಭೀರ ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಳ್ಳುವ ಮೂಲಕ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂತಹ ಕೃತ್ಯಗಳಲ್ಲಿ ಸಕ್ರಿಯವಾಗಿದ್ದಾರೆ ಎಂದು ಸೊಗಡು ಶಿವಣ್ಣ ಹೇಳಿದರು.
ಆರೋಪಿತರು, ರಾಜಕಾರಣಿಗಳು, ಅವರ ಕುಟುಂಬದವರು, ಸರ್ಕಾರಿ ಅಧಿಕಾರಿಗಳು, ಇವರ ಕುಟುಂಬದವರನ್ನು, ಮಠಾಧೀಶರು, ಚಿನ್ನದ ಅಂಗಡಿ ಮಾಲೀಕರು, ನ್ಯಾಯಾಧೀಶರು, ನ್ಯಾಯವಾದಿಗಳು, ಶ್ರೀಮಂತ ಉದ್ಯಮಿಗಳು ಹೀಗೆ ಹಲವರನ್ನು ಗುರಿಯಾಗಿಸಿಕೊಂಡು ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ. ರಾಜ್ಯದಲ್ಲಿ ಹನಿಟ್ರ್ಯಾಪ್ ಒಂದು ಕ್ರಿಮಿನಲ್ ಉದ್ಯಮವಾಗಿ ಬೆಳೆಯುತ್ತಿದೆ. ಇದರಲ್ಲಿ ತೊಡಗಿಕೊಂಡಿರುವ ಕ್ರಿಮಿನಲ್‌ಗಳು ಅಪರಾಧಿಕ ಒಳಸಂಚು ಮಾಡುವ ಮೂಲಕ ವಂಚನೆ, ಜೀವ ಬೆದರಿಕೆ, ಅಪಹರಣ, ಮಾರಣಾಂತಿಕ ಹಲ್ಲೆ, ಕೊಲೆ, ಹಣ ಸುಲಿಗೆ ಮಾಡುವುದು ಮುಂತಾದ ಗಂಭೀರ ಅಪರಾಧಗಳನ್ನು ಎಸಗಲು ಕೆಲವು ರಾಜಕಾರಣಿಗಳ ಕುಮ್ಮಕ್ಕು ಇದೆ ಎಂದರು.ಹನಿಟ್ರ್ಯಾಪ್ ಪ್ರಕರಣ ತನಿಖೆಗಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಸಂಜೀವ್ ಖನ್ನಾ ಅವರಿಗೆ ಪತ್ರ ಬರೆದಿರುವುದಾಗಿ ಹೇಳಿದ ಸೊಗಡು ಶಿವಣ್ಣ, ಈ ಸಂಬಂಧ ಮುಖ್ಯಮಂತ್ರಿ, ಗೃಹ ಸಚಿವರಿಗೂ ಮನವಿ ಸಲ್ಲಿಸಿ, ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಹೇಳಿದರು.
ನಗರ ಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಶಬ್ಬೀರ್ ಆಹ್ಮದ್, ಅಂಬೇಡ್ಕರ್ ಪ್ರಚಾರ ಸಮಿತಿ ಒಬಿಸಿ ಜಿಲ್ಲಾಧ್ಯಕ್ಷ ಎಸ್.ರಾಮಚಂದ್ರರಾವ್, ರಾಜ್ಯ ರೈತ ಸಂಘ ಕಾರ್ಯದರ್ಶಿ ಎಸ್.ಬಸವರಾಜು, ಸಾಮಾಜಿಕ ಹೋರಾಟಗಾರ ಕೆ.ಹರೀಶ್ ಪತ್ರಿಕಾಗೋಷ್ಠಿಯಲ್ಲಿದ್ದರು.