ಬಾಳೆಹೊನ್ನೂರುಮುಂದಿನ ಪೀಳಿಗೆಗೆ ನಮ್ಮ ಕೃಷಿ ಭೂಮಿ ಉಳಿಸಿಕೊಳ್ಳಬೇಕಾದರೆ ಇಂದಿನಿಂದಲೇ ಮಣ್ಣಿನ ರಕ್ಷಣೆ ಮಾಡುವ ಜವಾಬ್ದಾರಿ ರೈತರದ್ದಾಗಿದೆ ಎಂದು ಎಸ್ ಎಂ ಸೇಹಗಲ್ ಫೌಂಡೇಶನ್‌ನ ಫೀಲ್ಡ್ ಆಫೀಸರ್ ಶಿವಾನಂದ್ ಹೇಳಿದರು.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಮುಂದಿನ ಪೀಳಿಗೆಗೆ ನಮ್ಮ ಕೃಷಿ ಭೂಮಿ ಉಳಿಸಿಕೊಳ್ಳಬೇಕಾದರೆ ಇಂದಿನಿಂದಲೇ ಮಣ್ಣಿನ ರಕ್ಷಣೆ ಮಾಡುವ ಜವಾಬ್ದಾರಿ ರೈತರದ್ದಾಗಿದೆ ಎಂದು ಎಸ್ ಎಂ ಸೇಹಗಲ್ ಫೌಂಡೇಶನ್‌ನ ಫೀಲ್ಡ್ ಆಫೀಸರ್ ಶಿವಾನಂದ್ ಹೇಳಿದರು. ಮುದುಗುಣಿ ಗ್ರಾಮದಲ್ಲಿ ಸಣ್ಣ ಕಾಫಿ ಬೆಳೆಗಾರರಿಗೆ ಎಸ್.ಎಂ.ಸೇಹಗಲ್ ಫೌಂಡೇಶನ್ ನಿಂದ ಆಯೋಜಿಸಿದ್ದ ಪುನರ್ ಚೇತನ ಕಾಫಿ ಕೃಷಿ ಪದ್ಧತಿ ಅರಿವು ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು. ಅತಿಯಾದ ರಾಸಾಯನಿಕ ಬಳಕೆ ಮಾಡುವು ದನ್ನು ನಿಲ್ಲಿಸಿ ಮಣ್ಣಿನ ಪರೀಕ್ಷೆ ನಡೆಸಿ, ಮಣ್ಣಿಗೆ ಅವಶ್ಯಕತೆ ಇರುವ ಪ್ರಮಾಣದಲ್ಲಿ ಗೊಬ್ಬರ ಬಳಸುವುದು ಉತ್ತಮ. ಸಾವಯವ, ಹಸಿರೆಲೆ, ಜೈವಿಕ ಗೊಬ್ಬರಗಳನ್ನು ಹೆಚ್ಚಾಗಿ ಬಳಸಿದಲ್ಲಿ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.

ರೈತರು ಜಮೀನುಗಳಲ್ಲಿ ಜೀವಾಮೃತ ಹೆಚ್ಚು ಬಳಸಬೇಕು. ಜೀವಾಮೃತ ಕೇವಲ ದ್ರಾವಣವಲ್ಲ. ಇದು ಭೂಮಿಯನ್ನು ಶುದ್ಧ ಮಾಡುವ ಮುಖ್ಯ ಅಂಶ. ಭೂಮಿಯಲ್ಲಿರುವ ಒಳ್ಳೆಯ ಸೂಕ್ಷ್ಮಾಣುಗಳನ್ನು ಹೆಚ್ಚಿಸುವ ಕೆಲಸ ಜೀವಾಮೃತ ಮಾಡುತ್ತದೆ. ಸೂಕ್ಷ್ಮ ಜೀವಿಗಳು ಭೂಮಿಯಲ್ಲಿರುವ ಗೊಬ್ಬರದ ಅಂಶವನ್ನು ಗಿಡಗಳಿಗೆ ತಲುಪಿಸುವ ಕೊಂಡಿಯಾಗಿ ಕೆಲಸ ಮಾಡುತ್ತದೆ ಎಂದರು. ಸ್ಥಳೀಯ ಸಂಪನ್ಮೂಲ ವ್ಯಕ್ತಿ ಶರತ್ ಮಾತನಾಡಿ, ರೈತರು ತಮ್ಮ ಕಾಫಿ ತೋಟದಲ್ಲಿ ತೊಟ್ಟಿಲು ಗುಂಡಿಗಳನ್ನು ಮಾಡಿ ಕೊಳ್ಳುವುದು ಒಂದು ಉತ್ತಮ ಅಭ್ಯಾಸ. ಇದು ಮಳೆಗಾಲದಲ್ಲಿ ಮಣ್ಣಿನ ಸವಕಳಿ ತಡೆದು ಗೊಬ್ಬರದ ಅಂಶ ಕೊಚ್ಚಿ ಹೋಗುವುದನ್ನು ತಡೆಯುತ್ತದೆ. ಬೇಸಿಗೆಯಲ್ಲಿ ನೀರಿನ ತೇವಾಂಶ ತಡೆ ಹಿಡಿಯುತ್ತದೆ. ಇದರೊಂದಿಗೆ ಗಿಡದ ಬೇರಿನ ಬೆಳವಣಿಗೆ ಉತ್ತಮಗೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದರು. ಸ್ಥಳೀಯ ರೈತರಾದ ಉಮೇಶ್ ಅವರ ಕಾಫಿ ತೋಟದಲ್ಲಿ ಜೀವಾಮೃತ ತಯಾರಿಕೆ ಪ್ರಾತ್ಯಕ್ಷತೆ ನಡೆಸಲಾಯಿತು. ಸ್ಥಳೀಯ ಮಹಿಳಾ ರೈತರು, ಗ್ರಾಮಸ್ಥರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.೧೬ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಮುದುಗುಣಿ ಗ್ರಾಮದಲ್ಲಿ ಸಣ್ಣ ಕಾಫಿ ಬೆಳೆಗಾರರಿಗೆ ಎಸ್.ಎಂ.ಸೇಹಗಲ್ ಫೌಂಡೇಶನ್ ನಿಂದ ಆಯೋಜಿಸಿದ್ದ ಪುನರ್ ಚೇತನ ಕಾಫಿ ಕೃಷಿ ಪದ್ಧತಿ ಅರಿವು ಕಾರ್ಯಕ್ರಮದಲ್ಲಿ ಜೀವಾಮೃತ ತಯಾರಿಕೆ ಪ್ರಾತ್ಯಕ್ಷಿಕೆ ನಡೆಸಲಾಯಿತು.