ಮನುಷ್ಯನು ರಾಗ, ದ್ವೇಷಗಳನ್ನು ಮರೆತು ಪರಸ್ಪರರ ಜೊತೆ ಪ್ರೀತಿ, ವಿಶ್ವಾಸದಿಂದ ಬೆರೆಯುತ್ತಾ ಜೀವನ ನಡೆಸಿದಾಗ ಮಾತ್ರ ಮಾನಸಿಕ ಹಾಗೂ ಆತ್ಮತೃಪ್ತಿ ದೊರಕುತ್ತದೆ ಎಂದು ಆದಿಚುಂಚನಗಿರಿ ಶಾಖಾ ಮಠ ದಸರೀಘಟ್ಟದ ಶ್ರೀಚೌಡೇಶ್ವರಿ ದೇವಿ ದೇವಾಲಯದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಮನುಷ್ಯನು ರಾಗ, ದ್ವೇಷಗಳನ್ನು ಮರೆತು ಪರಸ್ಪರರ ಜೊತೆ ಪ್ರೀತಿ, ವಿಶ್ವಾಸದಿಂದ ಬೆರೆಯುತ್ತಾ ಜೀವನ ನಡೆಸಿದಾಗ ಮಾತ್ರ ಮಾನಸಿಕ ಹಾಗೂ ಆತ್ಮತೃಪ್ತಿ ದೊರಕುತ್ತದೆ ಎಂದು ಆದಿಚುಂಚನಗಿರಿ ಶಾಖಾ ಮಠ ದಸರೀಘಟ್ಟದ ಶ್ರೀಚೌಡೇಶ್ವರಿ ದೇವಿ ದೇವಾಲಯದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.ತಾಲೂಕಿನ ಆದಿಚುಂಚನಗಿರಿ ಶಾಖಾಮಠ ದಸರೀಘಟ್ಟದ ಶ್ರೀಚೌಡೇಶ್ವರಿದೇವಿ ದೇವಾಲಯ ಆವರಣದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಶ್ರೀಮಠ ಮತ್ತು ದಸರೀಘಟ್ಟ ಗ್ರಾಮಸ್ಥರ ಸಹಯೋಗದಲ್ಲಿ ರಾಶಿಪೂಜೆ ಹಾಗೂ ಗೋವುಗಳಿಗೆ ಕಿಚ್ಚು ಹಾಯಿಸುವ ಕಾರ್ಯಕ್ರಮಕ್ಕೆ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಆಶೀರ್ವಚನ ನೀಡಿದರು.ಮಾನವ ತನ್ನ ಜೀವನದಲ್ಲಿ ಹಣ, ಐಶ್ವರ್ಯದ ಸಂಪಾದನೆಗಾಗಿ ಹೆಚ್ಚು ಶ್ರಮಿಸುತ್ತಾನೆ. ಮಾನವೀಯ ಮೌಲ್ಯಗಳನ್ನು ಮರೆತು ತನ್ನ ಸುಖವೇ ಪರಮಸುಖವೆಂದು ಭಾವಿಸುತ್ತಾ ಪರಮಾತ್ಮನನ್ನು ಕಾಣುವ ಗೋಜಿಗೆ ಹೋಗದೇ ಸ್ವಾರ್ಥದಿಂದ ತನ್ನಪಾಡಿಗೆ ತಾನಿರುತ್ತಾನೆ. ಜೀವನದಲ್ಲಿ ಅಂತರಂಗದಲ್ಲಿರುವ ಪರಮಾತ್ಮನನ್ನು ಹುಡುಕದೇ ಎಲ್ಲೆಲ್ಲಿಗೋ ಹೋಗುತ್ತೇವೆ. ಆದರೆ ಪರಮಾತ್ಮ ನಮ್ಮಲ್ಲಿಯೇ ನೆಲೆಸಿರುತ್ತಾನೆ ಎಂಬುದು ತಿಳಿದೇ ಇರುವುದಿಲ್ಲ. ಮಾನವನ ಮನಸ್ಸಿನಲ್ಲಿ ಎಲ್ಲಾರೀತಿಯ ವಿಚಾರಗಳು ನೆಲೆಸಿದ್ದು ಉತ್ತಮ ವಿಚಾರಗಳನ್ನು ಉಳಿಸಿ ಕೆಟ್ಟ ವಿಚಾರಗಳನ್ನು ದೇವಾಲಯ, ಮಠಗಳಿಗೆ ಬಂದಂತಹ ಸಂದರ್ಭದಲ್ಲಿ ಬಿಟ್ಟು ಹೋಗಬೇಕು. ಪರಮಾತ್ಮನು ಎಲ್ಲರಿಗೂ ಒಂದೇ ರೀತಿಯಲ್ಲಿ ಅಥೈಸಿಕೊಳ್ಳಲು ಸಾಧ್ಯವಿಲ್ಲ. ೨೧ನೇ ಶತಮಾನದಲ್ಲಿಯೂ ಮೂರ್ತಿ ಪೂಜೆ ಆಚರಣೆಯಲ್ಲಿದೆ ಎಂದರೆ ಆ ಮೂರ್ತಿಯಲ್ಲಿನ ಶಕ್ತಿ ದೈವತ್ತವ ಇದೇ ಎನ್ನುವುದನ್ನು ತಿಳಿಯುವ ಅವಶ್ಯಕವಿದೆ ಎಂದರು. ಕಿಚ್ಚು ಹಾಯಿಸುವಿಕೆ: ಹಬ್ಬದ ಅಂಗವಾಗಿ ನಡೆದ ಕಿಚ್ಚು ಹಾಯಿಸುವಿಕೆಯಲ್ಲಿ ರಾಸುಗಳು ಕಿಚ್ಚಿನಲ್ಲಿ ಹಾಯ್ದುವು. ದಣಿದು ಬಂದಂತಹ ದನಗಳಿಗೆ ಎಡೆ ಮಾಡಿ ಹಬ್ಬದ ಊಟವನ್ನು ಎಡೆಯ ರೂಪದಲ್ಲಿ ನೀಡಿದರು. ಗ್ರಾಮ ದೇವತೆಯಾದ ಶ್ರೀ ಚೌಡೇಶ್ವರಿ ದೇವಿಯ ದೇವಾಲಯವನ್ನು ಮೂರು ಸುತ್ತು ಸುತ್ತಿ ತಮ್ಮ ತಮ್ಮ ಮನೆಗಳಿಗೆ ತೆರಳಿದವು. ದನಗಳಿಗೆ ಕಣ್ಣೆಸರಾಗಬಾರದೆಂದು ಕಿಚ್ಚು ಹಾಯಿಸುತ್ತಾರೆ. ಅಲ್ಲದೇ ದನಕರುಗಳಿಗೆ ಯಾವುದೇ ಸಾಂಕ್ರಾಮಿಕ ರೋಗಗಳು ಬಾರದಿರಲೆಂಬ ಉದ್ದೇಶದಿಂದ ಕಿಚ್ಚು ಹಾಕಲಾದ ಸ್ಥಳದ ಬೂದಿಯನ್ನು ಹೊಯ್ದು ಜಾನವಾರುಗಳಿಗೆ ಸವರುತ್ತಾರೆ. ಮನೆ ಮಂದಿಯೆಲ್ಲ ಬೂದಿಯನ್ನು ವಿಭೂತಿಯಾಗಿ ಬಳಸುತ್ತಾರೆ. ಈ ಸಂದರ್ಭದಲ್ಲಿ ಮಠದ ಆಚರಣದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತಾದಿ ಗಳು, ಗ್ರಾಮಸ್ಥರು ಸೇರಿದ್ದು ಸಡಗರವನ್ನು ತುಂಬಿಕೊಳ್ಳುವ ಜೊತೆಗೆ ಹಬ್ಬದ ವಾತಾವರಣ ಸೃಷ್ಠಿಯಾಗಿತ್ತು. ತದ ನಂತರದಲ್ಲಿ ಎಲ್ಲರಿಗೂ ದಸರೀಘಟ್ಟದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಯವರು ಎಳ್ಳು ಬೆಲ್ಲ, ಪೊಂಗಲ್ ನೀಡಿ ಆಶೀರ್ವದಿಸಿದರು.ಈ ಸಂದರ್ಭದಲ್ಲಿ ಹಾಸನದ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಸ್ವಾಮೀಜಿ, ದೇವಾಲಯದ ಗುಡಿಗೌಡರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.