ಸಾರಾಂಶ
ಪ.ಪಂ. ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಪಟ್ಟಣ ಪಂಚಾಯಿತಿ ವತಿಯಿಂದ ಪ.ಪಂ. ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.ದಿನದ ಅಂಗವಾಗಿ ಸ್ವಚ್ಛತೆಯ ಘೋಷ ವಾಕ್ಯಗಳೊಂದಿಗೆ ಪೌರ ಕಾರ್ಮಿಕರು ಪಟ್ಟಣದಲ್ಲಿ ಜಾಥಾ ನಡೆಸಿ, ಪರಿಸರ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು. ಪಟ್ಟಣದ ಪುಟ್ಟಪ್ಪ ವೃತ್ತ, ತ್ಯಾಗರಾಜ ರಸ್ತೆ, ಮಡಿಕೇರಿ ರಸ್ತೆ, ಸೋಮೇಶ್ವರ ದೇವಾಲಯ, ಮುಖ್ಯ ರಸ್ತೆ, ಖಾಸಗಿ ಬಸ್ ನಿಲ್ದಾಣ, ಕ್ಲಬ್ ರಸ್ತೆಯಲ್ಲಿ ಮೆರವಣಿಗೆ ಸಾಗಿತು.ನಂತರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮವನ್ನು ಪ.ಪಂ.ಅಧ್ಯಕ್ಷೆ ಜಯಂತಿ ಶಿವಕುಮಾರ್ ಉದ್ಘಾಟಿಸಿ ಮಾತನಾಡಿ, ಪಟ್ಟಣದ ಸ್ವಚ್ಛತೆಯಲ್ಲಿ ಪೌರ ಕಾರ್ಮಿಕರ ಸೇವೆ ಶ್ಲಾಘನೀಯ. ನೌಕರರು ಸರ್ಕಾರದಿಂದ ಲಭಿಸುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಜೀವನಮಟ್ಟವನ್ನು ಉತ್ತಮಪಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಪ.ಪಂ. ಉಪಾಧ್ಯಕ್ಷೆ ಮೋಹಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್. ಮಹೇಶ್, ಸದಸ್ಯರಾದ ಶೀಲಾ ಡಿಸೋಜ, ಜೀವನ್, ವೆಂಕಟೇಶ್, ಮೃತ್ಯುಂಜಯ, ನಾಮನಿರ್ದೇಶಿತ ಸದಸ್ಯ ನಾಗರಾಜು, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಆರೋಗ್ಯ ನಿರೀಕ್ಷಕ ಜಾಸಿಂ ಖಾನ್, ಕಿರಿಯ ಅಭಿಯಂತರ ಹೇಮಂತ್ಕುಮಾರ್, ಅಧಿಕಾರಿಗಳಾದ ಕೆ.ಜಿ. ರೂಪಾ, ಜೀವನ್, ಪೌರ ಸೇವಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸತ್ಯನಾರಾಯಣ, ಸೋಮವಾರಪೇಟೆ ಶಾಖಾಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಕೇಶವ್ ಸೇರಿದಂತೆ ಇತರರು ಇದ್ದರು. ಪೌರ ಕಾರ್ಮಿಕ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಪೌರ ಕಾರ್ಮಿಕರು, ಲೋಡರ‍್ಸ್, ಸ್ವಚ್ಛತಾ ಸಿಬ್ಬಂದಿ, ವಾಹನ ಚಾಲಕರು, ನೀರು ಸರಬರಾಜು ನೌಕರರು, ಕಚೇರಿ ಅಧಿಕಾರಿ ಸೇರಿದಂತೆ 50ಕ್ಕೂ ಅಧಿಕ ಸಿಬ್ಬಂದಿಗಳನ್ನು ಪಟ್ಟಣ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು.