ಸೋಮವಾರಪೇಟೆ: ಭಾರಿ ಮಳೆಗೆ ಜನ, ಜಾನುವಾರು ತತ್ತರ

| Published : Jul 20 2024, 12:48 AM IST

ಸಾರಾಂಶ

ಸೋಮವಾರಪೇಟೆ ತಾಲೂಕಿನಾದ್ಯಂತ ಮುಂಗಾರು ಮಳೆಗೆ ಜನ ಜಾನುವಾರುಗಳು ತತ್ತರಿಸಿ ಹೋಗಿದ್ದು, ಸಾಕಷ್ಟು ಆಸ್ತಿ ಹಾನಿಯೊಂದಿಗೆ ಜಾನುವಾರುಗಳ ಜೀವಹಾನಿಯಾಗುತ್ತಿದೆ. ಪಟ್ಟಣದಿಂದ ಸಕಲೇಶಪುರ ಸಂಪರ್ಕಿಸುವ ಮಾರ್ಗದಲ್ಲಿ ಮಾಗೇರಿ-ಬಾಣಗೇರಿ ಸೇತುವೆ ಮುಳುಗಿದ್ದು. ಗ್ರಾಮಸ್ಥರ ಸಂಚಾರಕ್ಕೆ ತೊಡಕಾಗಿದೆ. ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಸೋಮವಾರಪೇಟೆ ತಾಲೂಕಿನಾದ್ಯಂತ ಮುಂಗಾರು ಮಳೆಗೆ ಜನ ಜಾನುವಾರುಗಳು ತತ್ತರಿಸಿ ಹೋಗಿದ್ದು, ಸಾಕಷ್ಟು ಆಸ್ತಿ ಹಾನಿಯೊಂದಿಗೆ ಜಾನುವಾರುಗಳ ಜೀವಹಾನಿಯಾಗುತ್ತಿದೆ.

ಪಟ್ಟಣದಿಂದ ಸಕಲೇಶಪುರ ಸಂಪರ್ಕಿಸುವ ಮಾರ್ಗದಲ್ಲಿ ಮಾಗೇರಿ-ಬಾಣಗೇರಿ ಸೇತುವೆ ಮುಳುಗಿದ್ದು. ಗ್ರಾಮಸ್ಥರ ಸಂಚಾರಕ್ಕೆ ತೊಡಕಾಗಿದೆ. ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ.

ಸೋಮವಾರಪೇಟೆಯಿಂದ ಸಕಲೇಶಪುರಕ್ಕೆ ಅಥವಾ ಸುಬ್ರಮಣ್ಯಕ್ಕೆ ತೆರಳುವ ವಾಹನ ಸವಾರರು ಮತ್ತೊಂದು ಮಾರ್ಗವಾದ ತೋಳೂರು ಶೆಟ್ಟಳ್ಳಿ, ಕೂತಿ, ಒಣಗೂರು ಕೂಡುರಸ್ತೆ ಮಾರ್ಗವಾಗಿ ತೆರಳುತ್ತಿದ್ದಾರೆ. ಪುಷ್ಪಗಿರಿ ಮತ್ತು ಮಲ್ಲಳ್ಳಿ ಜಲಪಾತಕ್ಕೆ ತೆರಳುವ ಹಚಿನಳ್ಳಿ ಗ್ರಾಮದಲ್ಲಿ ಭಾರಿ ಮಳೆಗೆ ಕೊಲ್ಲಿಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ.

ಇಲ್ಲಿಗೆ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಗುಂದ ಗ್ರಾಮದ ನಾಗು ಅವರ ವಾಸದ ಮನೆಯ ಗೋಡೆ ಹಾಗೂ ಮೇಲ್ಛಾವಣಿ ಹಾನಿಯಾಗಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದರು.

ನೇಗಳ್ಳಿ-ಕರ್ಕಳ್ಳಿ ಗ್ರಾಮದ ಹೊನ್ನೀರಪ್ಪ ಅವರ ವಾಸದ ಮನೆಯ ಕಾಂಪೌಂಡ್ ಕುಸಿದು ಹಾನಿಯಾಗಿದೆ. ಮುನಿಯಮ್ಮ ಎಂಬವರ ವಾಸದ ಮನೆಗೆ ಹಾನಿಯಾಗಿದೆ. ಚೌಡ್ಲು ಪಾರ್ವತಿ ಅವರ ಮನೆ ಮಳೆಯಿಂದ ಭಾಗಶಃ ಹಾನಿಯಾಗಿದೆ. ತಾಲೂಕಿನ ಮಾಲಂಬಿ ಗ್ರಾಮದ ಯಮುನಾ ಅವರ ವಾಸದ ಮನೆಯ ಮೇಲೆ ಭಾರಿ ಮಳೆ ಗಾಳಿಗೆ ಮರ ಬಿದ್ದು ಹಾನಿಯಾಗಿದೆ.

ಕೊಡ್ಲಿಪೇಟೆಯ ಮೈಮುನ ಎಂಬವರ ವಾಸದ ಮನೆಗೆ ಹಾನಿಯಾಗಿದೆ. ಕೂತಿ ಗ್ರಾಮದ ಯಡದಂಟೆ ಉಪಗ್ರಾಮಕ್ಕೆ ಹೋಗುವ ಜಿಲ್ಲಾ ಪಂಚಾಯಿತಿ ಮುಖ್ಯ ರಸ್ತೆಯ ಪಕ್ಕ 10 ಅಡಿ ಆಳಕ್ಕೆ ಗುಂಡಿಯಾಗಿದ್ದು, ರಸ್ತೆಯು ಕುಸಿಯುವ ಹಂತದಲ್ಲಿದೆ.