ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಭೀಮನ ಅಮಾವಾಸ್ಯೆ ಅಂಗವಾಗಿ ಜಿಲ್ಲೆಯ ವಿವಿಧ ದೇವಳಗಳಲ್ಲಿ ಭಾನುವಾರ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.ನಗರದ ಶ್ರೀ ಕಾಳಿಕಾಂಬ ದೇವಸ್ಥಾನ, ಚಾಮುಂಡೇಶ್ವರಿ ದೇವಸ್ಥಾನ, ಹೊಸಹಳ್ಳಿಯ ಶ್ರೀ ಶ್ರೀನಿವಾಸ ದೇವಾಲಯ, ಶಂಕರಪುರದ ಶ್ರೀ ಗಂಗಾಧರೇಶ್ವರ, ಶ್ರೀರಂಗಪಟ್ಟಣದ ಗಂಜಾಂನ ಶ್ರೀ ನಿಮಿಷಾಂಭ, ಕ್ಷಣಾಂಭಿಕೆ, ಲಕ್ಷ್ಮೀದೇವಿ, ಪಾಂಡವಪುರ ತಾಲೂಕಿನ ಆರತಿ ಉಕ್ಕಡ, ಮಹಾಕಾಳೀ ದೇವಸ್ಥಾನ, ಮಳವಳ್ಳಿ ತಾಲೂಕಿನ ದಂಡಿನ ಮಾರಮ್ಮ, ಪಟ್ಟಲದಮ್ಮ, ನಾಗಮಂಗಲ ತಾಲೂಕಿನ ಮುಳುಕಟ್ಟಮ್ಮ, ಲಕ್ಷ್ಮೀದೇವಿ, ಮದ್ದೂರು ತಾಲೂಕಿನ ಮದ್ದೂರಮ್ಮ, ಆದಿಶಕ್ತಿ, ಕೆ.ಆರ್. ಪೇಟೆ ತಾಲೂಕಿನ ಪಟ್ಟಲದಮ್ಮ, ಕಿಕ್ಕೇರಮ್ಮ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.
ನಗರದ ಶ್ರೀ ಕಾಂಳಿಕಾಂಬ ದೇವಸ್ಥಾನದಲ್ಲಿ ಬೆಳಗಿನಿಂದಲೇ ವಿಶೇಷ ಧಾರ್ಮಿಕ ಪೂಜಾ ವಿ ವಿಧಾನಗಳು ನಡೆದವು. ಸಹಸ್ರಾರು ಮಂದಿ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ದೇವಸ್ಥಾನ ಟ್ರಸ್ಟ್‌ನವರು ಭಕ್ತಾದಿಗಳಿಗಾಗಿ ಪ್ರಸಾದ ವ್ಯವಸ್ಥೆಯನ್ನೂ ಮಾಡಿದ್ದರು.ಭೀಮನ ಅಮಾವಾಸ್ಯೆ ಶ್ರದ್ಧಾಭಕ್ತಿಯಿಂದ ನಡೆದ ಪೂಜೆಗಳು
ಕಿಕ್ಕೇರಿ:ಪಟ್ಟಣ ಸೇರಿದಂತೆ ಹೋಬಳಿಯ ವಿವಿಧ ಗ್ರಾಮಗಳಲ್ಲಿನ ಶಕ್ತಿದೇವರು, ಗ್ರಾಮ ದೇವರುಗಳಿಗೆ ಭೀಮನ ಅಮಾವ್ಯಾಸೆಯ ಪೂಜೆಗಳು ಶ್ರದ್ಧಾಭಕ್ತಿಯಿಂದ ಜರುಗಿದವು.ಪಟ್ಟಣದ ಅಂಗಳ ಪರಮೇಶ್ವರಿ ಗುಡಿಯಲ್ಲಿ ಅರ್ಚಕ ವಿಜಯಕುಮಾರ್ ದೇವಿಗೆ ಪಂಚಾಮೃತ ಹಾಗೂ ಕೆಂಪು ಅಕ್ಕಿಯಿಂದ ತಯಾರಿಸಿದ ವಿಶೇಷ ಗಂಜಿಯಿಂದ ಅಭಿಷೇಕ ನೆರವೇರಿಸಿದರು. ವಿವಿಧ ಪರಿಮಳ ಪುಷ್ಪ, ಆಭರಣಗಳಿಂದ ಅಲಂಕರಿಸಿ ತೋಮಾಲೆ ಪೂಜೆ ನೆರವೇರಿಸಿದರು. ಗಂಗಮ್ಮ ಹಾಗೂ ಅಂಗಳಪರಮೇಶ್ವರಿಗೆ ಧೂಪ ದೀಪಧಾರತಿ ಬೆಳಗಿದರು.ಸುಮಂಗಲಿ ಪೂಜೆ ಮತ್ತಿತರ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನೆರವೇರಿತು. ಭಕ್ತರಿಗೆ ಅಂಬಲಿ ಪ್ರಸಾದ ವಿನಿಯೋಗ ಮಾಡಲಾಯಿತು.
ಹೋಬಳಿಯ ಚಿಕ್ಕಳಲೆ ಚಿಕ್ಕಳಮ್ಮ, ಚಿಕ್ಕತರಹಳ್ಳಿ ಕೋಡಿಮಾರಮ್ಮ, ಐಕನಹಳ್ಳಿ ಲಕ್ಷ್ಮೀದೇವಿ, ಗದ್ದೆಹೊಸೂರು ಗುಂಡುಮಾರಿಯಮ್ಮ, ಊಗಿನಹಳ್ಳಿ ಸಿಂಗಮ್ಮ, ಮಂದಗೆರೆಕಟ್ಟೆಪರಮೇಶ್ವರಿ, ಬೋಳಮಾರನಹಳ್ಳಿ ಲಕ್ಷ್ಮೀದೇವಿ, ಆನೆಗೊಳ ಆನೆಗೊಳಮ್ಮ, ದೊಡ್ಡತರಹಳ್ಳಿ ಭದ್ರಕಾಳಿ, ಬೇವಿನಹಳ್ಳಿ ಚಾಮುಂಡೇಶ್ವರಿ ದೇಗುಲಗಳಲ್ಲಿ ದೇವರಿಗೆ ವಿವಿಧ ಪರಿಮಳ ಪುಷ್ಪಗಳ ಅಲಂಕಾರ, ವಸ್ತ್ರಾಭರಣಗಳ ಅಲಂಕಾರ ಮಾಡಲಾಗಿತ್ತು.ಮಹಿಳೆಯರು ದೇವರಿಗೆ ವಿಶೇಷವಾಗಿ ನಿಂಬೆಹಣ್ಣು ಅರತಿ ಬೆಳಗಿದರು. ಮನೆಗಳಲ್ಲಿ ಹಲವರು ಸಂಜೀವಿನಿ ವ್ರತ, ಜ್ಯೋರ್ತಿಭೀಮೇಶ್ವರ ವ್ರತವನ್ನು ಆಚರಿಸಿದರು. ಸುಮಂಗಲಿಯರು ತಮ್ಮಗಂಡಂದಿರಿಗೆ ಪಾದಪೂಜೆ ಮಾಡಿ ಸುಮಂಗಲಿಯಾಗಿರಲು ಪ್ರಾರ್ಥಿಸಿದರು.