ಸಾರಾಂಶ
ಬಾಳೆಹೊನ್ನೂರು, ಮನುಷ್ಯ ಜೀವನದಲ್ಲಿ ನೋವು, ನಲಿವು ಪಾಪ, ತಾಪ ಸುಖ,ದುಃಖ ಯಾರನ್ನೂ ಬಿಟ್ಟಿಲ್ಲ. ಬಹಿರಂಗ ಸಂಪತ್ತು ಒಂದಿಲ್ಲ ಒಂದು ದಿನ ಮನುಷ್ಯನನ್ನು ಬಿಟ್ಟು ಹೋಗುತ್ತದೆ. ಮನುಷ್ಯ ಜಾಗೃತನಾಗಿ ಧರ್ಮ ಮಾರ್ಗದಲ್ಲಿ ನಡೆದರೆ ಮಾನವನ ಬದುಕು ದೀಪ ದಂತೆ ಪರಿಶುದ್ಧವಾಗುತ್ತದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.
ಶ್ರಾವಣ ಧರ್ಮ ಸಮಾರಂಭಕ್ಕೆ ಚಾಲನೆಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಮನುಷ್ಯ ಜೀವನದಲ್ಲಿ ನೋವು, ನಲಿವು ಪಾಪ, ತಾಪ ಸುಖ,ದುಃಖ ಯಾರನ್ನೂ ಬಿಟ್ಟಿಲ್ಲ. ಬಹಿರಂಗ ಸಂಪತ್ತು ಒಂದಿಲ್ಲ ಒಂದು ದಿನ ಮನುಷ್ಯನನ್ನು ಬಿಟ್ಟು ಹೋಗುತ್ತದೆ. ಮನುಷ್ಯ ಜಾಗೃತನಾಗಿ ಧರ್ಮ ಮಾರ್ಗದಲ್ಲಿ ನಡೆದರೆ ಮಾನವನ ಬದುಕು ದೀಪ ದಂತೆ ಪರಿಶುದ್ಧವಾಗುತ್ತದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು. ರಂಭಾಪುರಿ ಪೀಠದಲ್ಲಿ ಸೋಮವಾರದಿಂದ ಆರಂಭಗೊಂಡ 33ನೇ ವರ್ಷದ ಶ್ರಾವಣ ಮಾಸದ ಇಷ್ಟಲಿಂಗ ಪೂಜಾ ತಪೋನುಷ್ಠಾನ ಹಾಗೂ ಪುರಾಣ ಪ್ರವಚನ ಉದ್ಘಾಟನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಆಧುನಿಕ ಯುಗದಲ್ಲಿ ಮನುಷ್ಯ ಯಂತ್ರದಂತೆ ದುಡಿಯುತ್ತಿದ್ದರೂ ಶಾಂತಿ ಸಮಾಧಾನಗಳಿಲ್ಲ. ಸತ್ಯ ಅಹಿಂಸಾದಿ ಮೌಲ್ಯ ಗಳನ್ನು ಕೇವಲ ಬೋಧನೆಗಾಗಿ ಮೀಸಲಿಡದೆ ಅವುಗಳ ಆಚರಣೆಯಿಂದ ಬದುಕು ಅರ್ಥಪೂರ್ಣವಾಗುತ್ತದೆ. ಧರ್ಮ ಮತ್ತು ಸಮಾಜವನ್ನು ಮನುಷ್ಯ ಮಾತ್ರ ಕಟ್ಟಬಲ್ಲ. ಅದಕ್ಕಾಗಿ ಆತನಿಗೆ ಕೆಲವು ಸಾಮಾಜಿಕ ಮತ್ತು ಧಾರ್ಮಿಕ ಸದ್ಗುಣಗಳ ಅವಶ್ಯಕತೆಯಿದೆ. ಶುದ್ಧವಾದ ನೀರು ರುಚಿಯಾದ ಆಹಾರ ಮತ್ತು ಜ್ಞಾನಿಗಳ ಒಳ್ಳೆಯ ನುಡಿಗಳೇ ಜೀವನದ ಸಂಪತ್ತು. ಕಾಯ ಮತ್ತು ಕಾಲದ ಹಿರಿಮೆ ಅರಿತು ಬಾಳಿದರೆ ಜೀವನ ಉತ್ಕರ್ಷವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಭವ ಸಾಗರ ದಾಟಿ ದಡ ಸೇರಲು ಗುರು ಬೋಧಾಮೃತದ ಬೆಳಕು ಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ ಸಿದ್ಧಾಂತಗಳು ಜೀವನದ ವಿಕಾಸಕ್ಕೆ ಮತ್ತು ಉನ್ನತಿಗೆ ಅಡಿಪಾಯ ಎಂದರು. ಶ್ರಾವಣ ಧರ್ಮ ಸಮಾರಂಭ ಉದ್ಘಾಟಿಸಿದ ಹುಮನಾಬಾದ್ ತಾಲೂಕಿನ ಹುಡಗಿ ಸಂಸ್ಥಾನ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮಾನವನ ಬುದ್ಧಿಶಕ್ತಿಗೆ ಸರಿ ಸಾಟಿ ಇನ್ನೊಂದಿಲ್ಲ. ಆಧ್ಯಾತ್ಮ ಪ್ರವೃತ್ತಿ, ನಡತೆ ಮತ್ತು ಧರ್ಮ ಸಾಧನೆ ಇವೆಲ್ಲವುಗಳಿಗೆ ಮನಸ್ಸು ಮುಖ್ಯ. ಅರಿವಿನ ಆದರ್ಶ ದಾರಿ ತೋರಿದವರಲ್ಲಿ ಶ್ರೀ ಜಗದ್ಗುರು ರೇಣುಕಾ ಚಾರ್ಯರು ವೀರಶೈವ ಧರ್ಮದಲ್ಲಿ ಮೊದಲಿಗರು ಎಂದರು. ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಮಾಡಿದ ಉಟಗಿ ಹಿರೇಮಠದ ಶಿವಪ್ರಸಾದ್ ಮಾತನಾಡಿ, ಮನಸ್ಸು ಬುದ್ಧಿ ಮತ್ತು ಸದ್ವಿಚಾರಗಳು ಬೆಳೆದಾಗ ಜೀವನದಲ್ಲಿ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಅಧಿಕಾರದ ದಾಹ, ಸಂಪತ್ತು ಮತ್ತು ಅವಿವೇಕತನ ಮನುಷ್ಯನ ನಿಜವಾದ ಗುಣಗಳನ್ನು ದೂರ ಮಾಡುತ್ತವೆ. ಶ್ರೀ ಗುರುವಿನ ಜ್ಞಾನಾಮೃತದಿಂದ ಜೀವನ ಉನ್ನತಿ ಯಾಗುವುದರಲ್ಲಿ ಸಂಶಯವಿಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರ ಅದ್ಭುತವಾದ ಆಧ್ಯಾತ್ಮದ ನುಡಿಗಳು ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತವೆ ಎಂದರು.ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿ, ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿ ಬೆಳಗಾಲಪೇಟೆ ಸಿದ್ಧಲಿಂಗಯ್ಯ ಹಿರೇಮಠ, ಶ್ರೀಪೀಠದ ಲೆಕ್ಕಾಧಿಕಾರಿ ಸಂಕಪ್ಪ, ಚಂದ್ರಶೇಖರ ಹಾಗೂ ಗುರುಕುಲದ ಎಲ್ಲ ಶಿವಯೋಗ ಸಾಧಕರು ಉಪಸ್ಥಿತರಿದ್ದರು.ವಿಠಲಾಪುರ ಹಿರೇಮಠದ ಗಂಗಾಧರ ಪ್ರಾರ್ಥಿಸಿ, ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು. ಬೆಳಿಗ್ಗೆ ಶ್ರಾವಣ ಮಾಸದ ಅಂಗವಾಗಿ ಶ್ರೀ ರಂಭಾಪುರಿ ಜಗದ್ಗುರು 33ನೇ ವರ್ಷದ ಶ್ರಾವಣ ಇಷ್ಟಲಿಂಗ ಪೂಜಾ ತಪೋನುಷ್ಠಾನಗೈದು ಆಗಮಿಸಿದ ಭಕ್ತರಿಗೆ ಶುಭ ಹಾರೈಸಿದರು. ಶ್ರೀ ಪೀಠದ ಎಲ್ಲ ದೈವಗಳಿಗೆ ಶ್ರಾವಣ ವಿಶೇಷ ಪೂಜೆ ಹಾಗೂ ಅಲಂಕಾರ ನಡೆಯಿತು. ೦೫ಬಿಹೆಚ್‌ಆರ್ ೩:ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಧರ್ಮ ಸಮಾರಂಭವನ್ನು ಹುಡಗಿ ಸಂಸ್ಥಾನ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಿದರು.