ಸಾರಾಂಶ
ಸಿದ್ಧಾಂತ ಶಿಖಾಮಣಿ ಕಾರ್ಯಕ್ರಮದಲ್ಲಿ ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯರು
ಕನ್ನಡಪ್ರಭ ವಾರ್ತೆ ಸಿರುಗುಪ್ಪಜೀವನದಲ್ಲಿ ಪ್ರಾಣಲಿಂಗ, ಭಾವಲಿಂಗ, ವಿಶ್ವಲಿಂಗವೆಂಬ ತ್ರಿಲಿಂಗಗಳನ್ನು ಪ್ರತಿಯೊಬ್ಬರು ಅನುಸಂಧಾನ ಮಾಡಿಕೊಳ್ಳಬೇಕು ಎಂದು ಶ್ರೀಶೈಲ ಪೀಠಾಧಿಪತಿ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ನಗರದ ಶ್ರೀಶೈಲ ಪೀಠ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ಇಷ್ಟಲಿಂಗ ಮಹಾಪೂಜೆ ಮತ್ತು ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.ಆಧ್ಯಾತ್ಮಿಕ ಪ್ರವಚನಗಳು ಮನುಷ್ಯನ ದುಃಖ ನಿವಾರಿಸುವ ದಿವ್ಯೌಷಧಿಯೆಂದು ಪರಿಗಣಿಸಲಾಗಿದೆ. ಸಿದ್ಧಾಂತ ಶಿಖಾಮಣಿ ಗ್ರಂಥದ ಪ್ರವಚನಗಳು ಜೀವನದಲ್ಲಿ ನೆಮ್ಮದಿ ಮತ್ತು ಶಾಂತಿ ತರುತ್ತದೆ. ಈ ಗ್ರಂಥ ಕೇಳುವುದರಿಂದ ಭವರೋಗದಿಂದ ಮುಕ್ತಿ ಪಡೆಯಬಹುದು ಮತ್ತು ವ್ಯಕ್ತಿತ್ವ ವಿಕಸನಗೊಳ್ಳಲು ಸಹಾಯ ಮಾಡುತ್ತದೆ ಎಂದರು.
ಈ ಪವಿತ್ರ ಗ್ರಂಥ ವೀರಶೈವ ಧರ್ಮಗ್ರಂಥ ಎಂದು ಬಣ್ಣಿಸಲಾಗಿದ್ದರೂ ಅದು ವೀರಶೈವರಿಗೆ ಅಷ್ಟೇ ಸೀಮಿತವಾಗಿಲ್ಲ, ಜಗತ್ತಿನ ಎಲ್ಲ ಧರ್ಮೀಯರು ಅಧ್ಯಯನ ಮಾಡುವುದರಿಂದ ಇದನ್ನು ಜಾಗತಿಕ ಧರ್ಮಗ್ರಂಥ ಎನ್ನಲಾಗಿದೆ. ವೀರಶೈವ ಧರ್ಮದ ಪ್ರಮುಖ ಗ್ರಂಥವೆಂದು ಬಣ್ಣಿಸಲಾದ ಈ ಗ್ರಂಥ ಎಲ್ಲರೂ ಓದಬೇಕು, ತಿಳಿಯಬೇಕು. ಹಾಗೆಯೇ ಅದರಂತೆ ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.ಬೆಂಗಳೂರು ಶಿವಗಂಗಾ ಕ್ಷೇತ್ರದ ಮಲಯ ಶಾಂತಮುನಿ ಶಿವಚಾರ್ಯರು ಮಾತನಾಡಿ, ಎಲ್ಲರೂ ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಯಬೇಕು. ಭಾರತೀಯ ಸಂಸ್ಕೃತಿ, ಸಂಸ್ಕಾರ ಪಾಲಿಸುವ ಮೂಲಕ ಮಕ್ಕಳಿಗೂ ಇವುಗಳನ್ನು ರೂಢಿಸಬೇಕು. ಈ ಶರೀರಕ್ಕೆ ಸದ್ಗುಣಗಳ ಸಂಸ್ಕಾರ ನೀಡಿದಲ್ಲಿ ಮೋಕ್ಷ ಪ್ರಾಪ್ತಿಯಾಗಲು ಸಾಧ್ಯ ಎಂದು ಉಪದೇಶಿಸಿದರು.
ಹಾಲ್ವಿ ಚರಣಗಿರಿ ಸಂಸ್ಥಾನ ಮಠದ ಅಭಿನವ ಮಹಾಂತ ಸ್ವಾಮಿ, ಹೆಬ್ಬಾಳ್ ಬೃಹನ್ಮಠ ನಾಗಭೂಷಣ ಶಿವಾಚಾರ್ಯ ಸ್ವಾಮಿ, ಪಾಲ್ತೂರು ಕಲ್ಲು ಹೊಳೆಮಠದ ಚನ್ನವೀರ ಶಿವಾಚಾರ್ಯ ಸ್ವಾಮಿ, ಮಾನ್ವಿಯ ನೀಲಗಲ್ಲು ಬೃಹನ್ ಸಂಸ್ಥಾನ ಮಠದ ಅಭಿನವ ರೇಣುಕಾ ಶಾಂತ ಮಲ್ಲ ಶಿವಾಚಾರ್ಯ ಸ್ವಾಮಿ, ಲಕ್ಷ್ಮಿಪುರ ಶ್ರೀಗಿರಿ ಸಂಸ್ಥಾನ ಮಠದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿ, ರೌಡ್ಕುಂದ ಸಂಸ್ಥಾನ ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮಿ, ಸಿರುಗುಪ್ಪ ಗುರುಬಸವ ಮಠದ ಬಸವಭೂಷಣ ಸ್ವಾಮಿ, ಆಶೀರ್ವಚನ ನೀಡಿದರು.ಎಂ.ಎಂ. ಶಾಂತಯ್ಯ ಜಗದೀಶ ಸ್ವಾಮಿ ಹಾಗೂ ನಾರಾಯಣ ಸಂಗೀತ ಸೇವೆ ಸಲ್ಲಿಸಿದರು. ಶ್ರೀ ಶಕ್ತಿ ಮಹಿಳಾ ಮಂಡಳಿಯಿಂದ ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು. ನಗರದ ವಿವಿಧ ವಿದ್ಯಾರ್ಥಿಗಳ ತಂಡಗಳು ಭಕ್ತಿಗೀತೆಗಳಿಗೆ ನೃತ್ಯ ಮಾಡಿ ರಂಜಿಸಿದವು.