ಸಮಾಜದ ಏಳಿಗೆಗೆ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಅನನ್ಯ: ನಾಗೇಶ್

| Published : Jul 17 2025, 12:37 AM IST

ಸಮಾಜದ ಏಳಿಗೆಗೆ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಅನನ್ಯ: ನಾಗೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಅಂಗನವಾಡಿಗಳು ಮಕ್ಕಳ ಭವಿಷ್ಯ ನಿರ್ಧರಿಸುವ ಕೇಂದ್ರಗಳಾಗಿವೆ. ನಿವೃತ್ತಿ ಹೊಂದಿದ ನಾಗರತ್ನಮ್ಮನವರು 40 ವರ್ಷ ನಿಸ್ವಾರ್ಥದಿಂದ ಸೇವೆ ಸಲ್ಲಿಸಿದ್ದಾರೆ. ಅವರು ನಡೆದು ಬಂದ ದಾರಿ ಇತರರಿಗೂ ಸ್ಫೂರ್ತಿದಾಯಕವಾಗಿದೆ .

ದಾಬಸ್‍ಪೇಟೆ: ಯಶೋಧೆಯು ಶ್ರೀಕೃಷ್ಣನನ್ನು ಹೇಗೆ ಬೆಳೆಸುತ್ತಾಳೆಯೋ, ಅದರಂತೆ ಸಮಾಜದಲ್ಲಿನ ಮಕ್ಕಳನ್ನು ಅಂಗವಾಡಿ ಕಾರ್ಯಕರ್ತೆಯರು ಬೆಳೆಸುತ್ತಿದ್ದು, ಸಮಾಜದ ಏಳಿಗೆಗೆ ಅಂಗನವಾಡಿ ಕಾರ್ಯಕರ್ತೆಯಾಗಿದ್ದ ನಾಗರತ್ನಮ್ಮ ಅವರ ಸೇವೆ ಅನನ್ಯವಾಗಿದೆ ಎಂದು ಶಿಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ನಾಗೇಶ್ ತಿಳಿಸಿದರು.

ಹೊನ್ನೇನಹಳ್ಳಿ ತಾಂಡ್ಯ ಅಂಗನವಾಡಿ ಕೇಂದ್ರದಲ್ಲಿ ನಿವೃತ್ತಿಯಾದ ಶ್ರೀಪತಿಹಳ್ಳಿ ಅಂಗನವಾಡಿ ಕಾರ್ಯಕರ್ತೆ ನಾಗರತ್ನಮ್ಮ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸ್ತ್ರೀಶಕ್ತಿ ಒಕ್ಕೂಟದ ಜಿಲ್ಲಾಧ್ಯಕ್ಷೆ ವೇದಾವತಿ ಮಾತನಾಡಿ, ಅಂಗನವಾಡಿಗಳು ಮಕ್ಕಳ ಭವಿಷ್ಯ ನಿರ್ಧರಿಸುವ ಕೇಂದ್ರಗಳಾಗಿವೆ. ನಿವೃತ್ತಿ ಹೊಂದಿದ ನಾಗರತ್ನಮ್ಮನವರು 40 ವರ್ಷ ನಿಸ್ವಾರ್ಥದಿಂದ ಸೇವೆ ಸಲ್ಲಿಸಿದ್ದಾರೆ. ಅವರು ನಡೆದು ಬಂದ ದಾರಿ ಇತರರಿಗೂ ಸ್ಫೂರ್ತಿದಾಯಕವಾಗಿದೆ ಎಂದರು.

ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ ನಾಗರತ್ನಮ್ಮ ಮಾತನಾಡಿ, ಸರ್ಕಾರ ನೀಡುವ ಗೌರವ ಧನದಿಂದ ಇಷ್ಟು ವರ್ಷಗಳ ಕಾಲ ಸಂತೃಪ್ತಿಯಾಗಿ ಸೇವೆ ಸಲ್ಲಿಸಿದ್ದೇನೆ. ನಮ್ಮ ಕಷ್ಟ- ಸುಖಗಳಿಗೆ ನಮ್ಮ ಇಲಾಖೆ, ನನ್ನ ಸಹೋದ್ಯೋಗಿಗಳು ಸ್ಪಂದಿಸಿದ್ದು, ಅವರಿಗೆಲ್ಲಾ ಚಿರಋಣಿಯಾಗಿದ್ದೇನೆ ಎಂದರು.

ಇಲಾಖೆಯ ಮೇಲ್ವಿಚಾರಕಿ ವಿಜಯಲಕ್ಷ್ಮೀ, ಅಂಗನವಾಡಿ ಕಾರ್ಯಕರ್ತೆ ಸುಜಾತ, ಮಾರಗೊಂಡನಹಳ್ಳಿ ವೃತ್ತದ ಶರಾವತಿ, ಸ್ತ್ರೀಶಕ್ತಿ ಒಕ್ಕೂಟದ ಕಮಲ, ಶಿವಗಂಗೆ ವೃತ್ತದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.