ಕಂಪನಿಯ ಕ್ರೀಡಾಪಟುಗಳು ಕ್ರೀಡೆಯಲ್ಲಿ ತೊಡಗುವುದರಿಂದ ಕಚೇರಿಯ ಕೆಲಸ ನಿರ್ವಹಿಸಲು ಚೈತನ್ಯ, ಉತ್ಸಾಹ ದೊರೆಯುತ್ತದೆ. ಪ್ರತಿ ಆಟದಲ್ಲೂ ಒಂದು ಉತ್ತಮ ಸಂದೇಶ ಅಡಗಿರುತ್ತದೆ. ಕ್ರೀಡಾಕೂಟಕ್ಕೆ ಆಗಮಿಸಿರುವ ಬೆಸ್ಕಾಂ, ಸೆಸ್ಕ್, ಜೆಸ್ಕಾಂ, ಮೆಸ್ಕಾಂ ಹಾಗೂ ಕೆಪಿಟಿಸಿಎಲ್ ತಂಡಗಳು ತಾವೆಲ್ಲರೂ ಒಂದೇ ಕುಟುಂಬದವರಂತೆ ಭಾವಿಸಬೇಕು.
ಹುಬ್ಬಳ್ಳಿ:
ಕ್ರೀಡಾ ಮನೋಭಾವನೆಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ ಎಂದು ಹೆಸ್ಕಾಂ ಮುಖ್ಯ ಅಭಿಯಂತರ, ಕ್ರೀಡಾ ಸಮಿತಿ ಅಧ್ಯಕ್ಷ ದೀಪಕ್ ಕಾಮತ್ ಹೇಳಿದರು.ಬುಧವಾರದಿಂದ ಮೂರು ದಿನ ನಡೆಯಲಿರುವ 2025-26ನೇ ಸಾಲಿನ ಅಂತರ್ ಕಂಪನಿಗಳ ಕ್ರೀಡಾಕೂಟವನ್ನು ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಕಂಪನಿಯ ಕ್ರೀಡಾಪಟುಗಳು ಕ್ರೀಡೆಯಲ್ಲಿ ತೊಡಗುವುದರಿಂದ ಕಚೇರಿಯ ಕೆಲಸ ನಿರ್ವಹಿಸಲು ಚೈತನ್ಯ, ಉತ್ಸಾಹ ದೊರೆಯುತ್ತದೆ. ಪ್ರತಿ ಆಟದಲ್ಲೂ ಒಂದು ಉತ್ತಮ ಸಂದೇಶ ಅಡಗಿರುತ್ತದೆ. ಕ್ರೀಡಾಕೂಟಕ್ಕೆ ಆಗಮಿಸಿರುವ ಬೆಸ್ಕಾಂ, ಸೆಸ್ಕ್, ಜೆಸ್ಕಾಂ, ಮೆಸ್ಕಾಂ ಹಾಗೂ ಕೆಪಿಟಿಸಿಎಲ್ ತಂಡಗಳು ತಾವೆಲ್ಲರೂ ಒಂದೇ ಕುಟುಂಬದವರಂತೆ ಭಾವಿಸಬೇಕು ಎಂದರು.
ಕವಿಪ್ರನಿನಿ ನಿಯಂತ್ರಾಣಾಧಿಕಾರಿ ಹಾಗೂ ಕವಿವಿಪ್ರನಿನಿ ಕ್ರೀಡಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮೈಕೆಲ್ ವಾಷಿಂಗ್ಟನ್ ಮಾತನಾಡಿ, ನಮ್ಮದು ಸಾರ್ವಜನಿಕರ ಜತೆ ನೇರವಾಗಿ ಸಂಪರ್ಕ ಹೊಂದಿರುವ ಕಂಪನಿ. ಅವರೊಂದಿಗೆ ಉತ್ತಮ ಸಂಬಂಧ ಬೆಸೆಯಲು ಕ್ರೀಡೆಯನ್ನು ಉತ್ತಮ ಸಾಧನವನ್ನಾಗಿ ಬಳಸುವಂತೆ ಕರೆ ನೀಡಿದರು.ಬಳಿಕ ಕರ್ನಾಟಕ ಜಿಮ್‌ಖಾನಾ ಅಸೋಸಿಯೇಶನ್ ಕ್ರಿಕೆಟ್ ಮೈದಾನದಲ್ಲಿ ಬಲೂನ್ ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ವಿವಿಧ ಕಂಪನಿಗಳ ಕ್ರೀಡಾಪಟುಗಳಿಂದ ಪಥ ಸಂಚಲನ ನಡೆಯಿತು. ಸೆಸ್ಕ್ ಕ್ರೀಡಾ ಕಾರ್ಯದರ್ಶಿ ಮಂಜುನಾಥ ಕ್ರೀಡಾಪಟುಗಳಿಗೆ ಪ್ರಮಾಣ ವಚನ ಬೋಧಿಸಿದರು.
ಈ ವೇಳೆ ಪಿ.ಆರ್. ಗವಿಕುಮಾರ, ಪಿ.ಎಸ್. ಶಿಂಧೆ, ರಾಜೇಶ ಕಲ್ಯಾಣಶೆಟ್ಟಿ, ಮಂಜುನಾಥ ದೊಡ್ಡಮನಿ, ಕೆ.ವಿ. ಪಾಗಿ ಸೇರಿದಂತೆ ಹಲವರಿದ್ದರು. ವಿಜಯ ಗುಂಜೀಕರ್ ನಿರೂಪಿಸಿದರು. ಮಂಜುನಾಥ ದೊಡ್ಡಮನಿ ಸ್ವಾಗತಿಸಿ, ವಂದಿಸಿದರು.