ಸಾರಾಂಶ
ಕ್ರೀಡೆಯು ನಮ್ಮನ್ನು ಸದೃಢವಾಗಿ ಮಾಡುತ್ತದೆ. ವಿದ್ಯಾರ್ಥಿಗಳು ಉನ್ನತವಾದ ಸಾಧನೆ ಮಾಡಲು ಪಂದ್ಯಾವಳಿ ಸಹಕಾರಿಯಾಗಿದೆ.
ಹೊನ್ನಾವರ: ಕ್ರೀಡೆಯು ಮಾನಸಿಕ, ದೈಹಿಕವಾಗಿ ಸದೃಢವಾಗಿ ಮಾಡುತ್ತದೆ. ಈ ಮೂಲಕ ಜೀವನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳ ಥ್ರೋಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯು ನಮ್ಮನ್ನು ಸದೃಢವಾಗಿ ಮಾಡುತ್ತದೆ. ವಿದ್ಯಾರ್ಥಿಗಳು ಉನ್ನತವಾದ ಸಾಧನೆ ಮಾಡಲು ಪಂದ್ಯಾವಳಿ ಸಹಕಾರಿಯಾಗಿದೆ. ನಮ್ಮ ಕ್ಷೇತ್ರದಲ್ಲಿ ವಿಭಾಗ ಮಟ್ಟದ ಅದ್ಧೂರಿ ಕಾರ್ಯಕ್ರಮ ನಡೆಯಲು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ ಅವರ ಕಾಳಜಿ ಕಾರಣವಾಗಿದೆ. ಕ್ರೀಡಾಪಟುಗಳು ಕ್ರೀಡಾಮನೋಭಾವನೆಯಿಂದ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ನಿರ್ಣಾಯಕರು ನೀಡುವ ನಿರ್ಣಯಕ್ಕೆ ಬದ್ಧರಾಗಿ ಸ್ಪರ್ಧಿಸಿದಾಗ ಕ್ರೀಡಾಕೂಟ ಯಶಸ್ವಿಯಾಗುವುದು ಎಂದರು.ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಈಶ್ವರ ನಾಯ್ಕ ಮಾತನಾಡಿ, ಪಂದ್ಯಾವಳಿಯಲ್ಲಿ 36 ತಂಡಗಳು ಭಾಗವಹಿಸಿವೆ. ಜ್ಞಾನ ವಿಶ್ವವನ್ನು ಆಳುತ್ತಿದೆ. ಕ್ರೀಡೆಯು ಜಾತಿ, ಮತವನ್ನು ತೊಡೆದು ಹಾಕಿ ನಾವೆಲ್ಲ ಒಂದು ಎನ್ನುವ ಭಾವವನ್ನು ಮೂಡಿಸುತ್ತದೆ. ತಾಲೂಕಿನ ಶಿಕ್ಷಕರು ಹೆಚ್ಚು ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಿ ಪಂದ್ಯಾವಳಿಯು ಅದ್ಧೂರಿಯಾಗಿ ನಡೆಸುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸುರೇಶ ಹೊನ್ನಾವರ ಮಾತನಾಡಿ, ಸಂಘಟಕರು ಉತ್ತಮವಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಯಾವುದೇ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮದ ರೀತಿ ನಡೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಶಿವರಾಜ ಮೇಸ್ತ, ಮೇಧಾ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ,ಪ್ರಬಾರಿ ಉಪನಿರ್ದೇಶಕ ಭಾಸ್ಕರ ಗಾಂವಕರ, ಬಿಆರ್‌ಸಿ ಸಮನ್ವಯಾಧಿಕಾರಿ ವಿನಾಯಕ ಅವಧಾನಿ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ. ನಾಯ್ಕ, ಅರುಣಕುಮಾರ, ವೆಂಕಟರಾಯ ನಾಯ್ಕ, ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ, ಎಲ್.ಎಂ. ಹೆಗಡೆ, ಸತೀಶ ನಾಯ್ಕ, ಉದಯ ನಾಯ್ಕ, ಕೆ.ಎಂ. ಹೆಗಡೆ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಮಹೇಶ ಶೆಟ್ಟಿ, ಸಾದನಾ ಬರ್ಗಿ, ಬಾಬು ನಾಯ್ಕ, ಗೌರೀಶ ಭಂಡಾರಿ ಮತ್ತಿತರರು ಇದ್ದರು.