ಉಡುಪಿ: ಸ್ಪಷ್ಟ ಗುರಿ ಇದ್ದಾಗ ಮಾತ್ರ ಉತ್ತಮ ನಾಯಕನಾಗಿ ಮೂಡಿಬರಲು ಸಾಧ್ಯವಿದೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ವಂ|ಡಾ|ಜೆರಾಲ್ಡ್ ಲೋಬೊ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಧರ್ಮಪ್ರಾಂತ್ಯದ ಸುವಿಚಾರ ರಾಜಕೀಯ ಸಮಿತಿ, ಶ್ರೀಸಾಮಾನ್ಯರ ಆಯೋಗ ಹಾಗೂ ಕಥೊಲಿಕ್ ಸಭಾ ಉಡುಪಿ ಸಹಯೋಗದೊಂದಿಗೆ ಕ್ರೈಸ್ತ ಸಮುದಾಯದ ರಾಜಕೀಯ ಮುಖಂಡರು ಹಾಗೂ ಕಾರ್ಯಕರ್ತರ ಸಹಮಿಲನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕ್ರೈಸ್ತ ಸಮುದಾಯಕ್ಕೆ ತನ್ನದೇ ಆದ ಶಕ್ತಿ ಹೊಂದಿದ್ದು, ಉತ್ತಮ ನಾಯಕರನ್ನು ರೂಪಿಸುವ ಅಗತ್ಯವಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸಮುದಾಯದ ಶಕ್ತಿಯನ್ನು ನಾಯಕತ್ವದ ಮೂಲಕ ತೋರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸ ಕೆಲಸ ಮುಂದಿನ ದಿನಗಳಲ್ಲಿ ನಡೆಸುವ ಅಗತ್ಯವಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಾಮಾಜಿಕ ಕಾರ್ಯಕರ್ತೆ ವೆರೋನಿಕಾ ಕರ್ನೆಲಿಯೋ ಮಾತನಾಡಿ ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡುವಾಗ ಜನರು ತೋರುವ ಪ್ರೀತಿ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲು ಉತ್ಸಾಹ ಬರುತ್ತದೆ ಎಂದರು.ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಜೆರಾಲ್ಡ್ ಫೆರ್ನಾಂಡಿಸ್ ಮಾತನಾಡಿ ಸಂಘಟಿತರಾಗಿ ಸಮಾಜದಲ್ಲಿ ದೀನ ದಲಿತರ ಪರವಾಗಿ ಕೆಲಸ ಮಾಡಿದಾಗ ಜನರೇ ನಮ್ಮನ್ನು ಗುರುತಿಸುವ ಕೆಲಸ ಮಾಡುತ್ತಾರೆ. ಸಮಾಜದ ಜನರ ಸಮಸ್ಯೆಗೆ ಪರಿಹಾರ ನೀಡುವ ಕೆಲಸ ಮಾಡಿದಾಗ ನೈಜ ನಾಯಕರಾಗಿ ಮೂಡಿ ಬರುತ್ತೇವೆ ಎಂದರು.ರಾಜಕೀಯ ಸೇವೆ ಕುರಿತು ಮುಖಂಡರಾದ ಸೀಮಾ ಮಾರ್ಗರೇಟ್ ಡಿಸೋಜಾ, ಜುಡಿತ್ ಮೆಂಡೊನ್ಸಾ ಮತ್ತು ರೋಶನಿ ಒಲಿವೇರಾ ಅನುಭವ ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾದ ರೊನಾಲ್ಡ್ ಡಿ ಆಲ್ಮೇಡಾ ವಹಿಸಿದ್ದರು. ಮುಂದಿನ ವರ್ಷಕ್ಕೆ ಕಾರ್ಯಯೋಜನೆಯನ್ನು ಶ್ರೀ ಸಾಮಾನ್ಯ ಆಯೋಗದ ಸಂಚಾಲಕರಾದ ಡಾ. ಜೆರಾಲ್ಡ್ ಪಿಂಟೊ ಮಂಡಿಸಿದರು. ಜೊಕಿಂ ಪಿಂಟೊ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವೇದಿಕೆಯಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಆಧ್ಯಾತ್ಮಿಕ ನಿರ್ದೇಶಕರಾ
ದ ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಯೋಜಿತ ಅಧ್ಯಕ್ಷರಾದ ಲೂಯಿಸ್ ಡಿಸೋಜಾ, ಸುವಿಚಾರ ಚಿಂತನ ಮಂಥನ ಸಮಿತಿಯ ಉಪಾಧ್ಯಕ್ಷರಾದ ಮೇರಿ ಡಿಸೋಜಾ, ಪ್ರಧಾನ ಕಾರ್ಯದರ್ಶಿ ಮೈಕಲ್ ರೊಡ್ರಿಗಸ್ ಹಾಗೂ ಮೇಬಲ್ ಡಿಸೋಜಾ ಉಪಸ್ಥಿತರಿದ್ದರು. ರಾಜಕೀಯ ಸಮಿತಿ ಸಂಚಾಲಕರಾದ ವಿನೋದ್ ಕ್ರಾಸ್ಟೊ ಸ್ವಾಗತಿಸಿ, ಜೆರಾಲ್ಡ್ ಪಿಂಟೊ ವಂದಿಸಿದರು. ಶಾಂತಿ ಪಿರೇರಾ ಕಾರ್ಯಕ್ರಮ ನಿರೂಪಿಸಿದರು.