ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ೧೪ ರಿಂದ ೧೭ರ ವಯೋಮಾನದವರ ರಾಜ್ಯಮಟ್ಟದ ಎರಡು ದಿನಗಳ ಫೆನ್ಸಿಂಗ್ ಕ್ರೀಡಾಕೂಟಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಮಂಗಳವಾರ ಚಾಲನೆ ನೀಡಿದರು.

ತಾಲೂಕಿನ ಸಂತೇಮರಹಳ್ಳಿಯ ಆರ್ಚರಿ, ಫೆನ್ಸಿಂಗ್ ವಸತಿ ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟವನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಉದ್ಘಾಟಿಸಿದರು.

ಇದೇ ವೇಳೆ ಮಾತನಾಡಿದ ಶಾಸಕ ಎ.ಆರ್.ಕೃಷ್ಣಮೂರ್ತಿ, ತಾವು ಈ ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಈ ಕ್ರೀಡಾಂಗಣಕ್ಕಾಗಿ ೫ ಎಕರೆ ಭೂಮಿ ಮಂಜೂರಾಗಿತ್ತು. ಇಂದು ಇದೇ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಮೊದಲ ಫೆನ್ಸಿಂಗ್ ಕ್ರೀಡಾಕೂಟ ಆಯೋಜನೆಯಾಗಿರುವುದಕ್ಕೆ ಸಂತಸವಾಗಿದೆ. ಇದರಿಂದ ಕ್ರೀಡಾಂಗಣದ ಸಾರ್ಥಕತೆಯಾದಂತಾಗಿದೆ ಎಂದರು.

ಇಂದು ನಡೆಯುತ್ತಿರುವ ರಾಜ್ಯಮಟ್ಟದ ಫೆನ್ಸಿಂಗ್ ಕ್ರೀಡಾಕೂಟದಲ್ಲಿ ನಾನಾ ಭಾಗಗಳಿಂದ ೧೭೦ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಕ್ರೀಡಾಪಟುಗಳು ಕ್ರೀಡಾ ಮನೋಭಾವನೆಯಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡು ಕೀರ್ತಿ ತರುವಂತಾಗಲಿ. ಎರಡು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟ ಯಶಸ್ವಿಯಾಗಿ ಪೂರ್ಣಗೊಳ್ಳಲಿ ಎಂದು ಶಾಸಕರು ಹಾರೈಸಿದರು.


೩.೧೩ ಕೋಟಿ ರು. ವೆಚ್ಚದಲ್ಲಿ ಫೆನ್ಸಿಂಗ್ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಿದೆ. ಶಾಲೆಯಲ್ಲಿ ಈಗಾಗಲೇ ಬಾಲಕರ ವಿದ್ಯಾರ್ಥಿನಿಲಯವಿದೆ. ಬಾಲಕಿಯರ ವಿದ್ಯಾರ್ಥಿನಿಲಯ ಕಟ್ಟಡವನ್ನು ೨.೫ ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಎಲ್ಲರಿಗೂ ವಸತಿ ಸೌಲಭ್ಯ ಲಭ್ಯವಾಗಲಿದೆ ಎಂದು ಶಾಸಕರು ತಿಳಿಸಿದರು.

ಇಲ್ಲಿನ ಕ್ರೀಡಾ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿಯೂ ಭಾಗವಹಿಸಿ ಪದಕಗಳನ್ನು ಪಡೆದಿದ್ದಾರೆ. ಕ್ರೀಡಾಪಟುಗಳ ಸಾಧನೆಗೆ ಇಲ್ಲಿನ ತರಬೇತುದಾರರ ಪರಿಶ್ರಮ, ಮಾರ್ಗದರ್ಶನ ಸಹ ಕಾರಣವಾಗಿದೆ ಎಂದ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ತರಬೇತುದಾರರನ್ನು ಕಾರ್ಯಕ್ರಮದಲ್ಲಿ ಪರಿಚಯಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ಚಂದ್ರು, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಚಂದ್ರಪಾಟಿಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಆರ್. ಶಿವಸ್ವಾಮಿ, ಕರ್ನಾಟಕ ಫೆನ್ಸಿಂಗ್ ಅಸೋಸಿಯೇಶನ್ ಉಪಾಧ್ಯಕ್ಷ ಡಾ.ಸಂಜಯ್, ಕಾರ್ಯದರ್ಶಿಗಳಾದ ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಹನುಮಶೆಟ್ಟಿ, ಮಂಜುಳಾ, ಮಾರಯ್ಯ, ಪ್ರಭಾರ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಎಸ್. ಬಸವರಾಜು ಇತರರು ಹಾಜರಿದ್ದರು.