ಕನಕಗಿರಿಗೆ ಕಳೆ ತಂದ ಶ್ರೀ ಕೃಷ್ಣ ಜನ್ಮಾಷ್ಟಮಿ

| Published : Aug 29 2024, 12:58 AM IST

ಸಾರಾಂಶ

ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಬುಧವಾರ ಮೂಲ ನಕ್ಷತ್ರದಲ್ಲಿ ಹಾಲುಗಂಬ ಏರುವ ಸ್ಪರ್ಧೆ ಇಲ್ಲಿನ ಶ್ರೀ ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಕನಕಗಿರಿ

ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಬುಧವಾರ ಮೂಲ ನಕ್ಷತ್ರದಲ್ಲಿ ಹಾಲುಗಂಬ ಏರುವ ಸ್ಪರ್ಧೆ ಇಲ್ಲಿನ ಶ್ರೀ ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಪ್ರತಿ ವರ್ಷದಂತೆ ಈ ವರ್ಷವೂ ಕೃಷ್ಣ ಜನ್ಮಾಷ್ಟಮಿ ಮೂಲ ನಕ್ಷತ್ರ ದಿವಸ ಯಾದವ(ಗೊಲ್ಲ) ಸಮುದಾಯದ ಯುವಕರು ೮೦ ಅಡಿಗೂ ಹೆಚ್ಚು ಎತ್ತರವನ್ನು ಹೊಂದಿರುವ ಹಾಲುಗಂಬ ಏರುವುದು ಮೊದಲಿನಿಂದಲೂ ರೂಢಿಯಲ್ಲಿದೆ.

ಅದರಂತೆ ಗೊಲ್ಲ ಯುವಕರು ಹಾಲುಗಂಬ ಏರಿ, ಜಾರುವುದನ್ನು ಸಾವಿರಾರು ಜನ ಕಣ್ತುಂಬಿಕೊಂಡು ಖುಷಿಪಟ್ಟರು.

ಹೀಗೆ ಒಬ್ಬರ ಮೇಲೊಬ್ಬರು ಹಾಲುಗಂಬ ಏರಿ ನೆತ್ತಿಯ ಮೇಲಿನ ಮಂಟಪದ ಸುತ್ತಲೂ ಕಟ್ಟಿದ್ದ ಕರ್ಜಿಕಾಯಿ, ಉತ್ತತ್ತಿ, ಕೊಬ್ಬರಿ ಸೇರಿ ನಾನಾ ದಿನಸಿಗಳನ್ನು ಹರಿದು ತಿಂದವರು ಸ್ಪರ್ಧೆಯಲ್ಲಿ ಜಯಶಾಲಿಯಾದರು.

ಇರುವ ಮೂರು ಅವಕಾಶಗಳಲ್ಲಿ ಯುವಕರು ಮಂಟಪದವರೆಗೆ ಹತ್ತಲು ಹರಸಾಹಸಪಟ್ಟರೂ ಸಾಧ್ಯವಾಗಲಿಲ್ಲ. ಕೊನೆಗೂ ಹಗ್ಗದ ಸಹಾಯದಿಂದ ತುದಿಯಲ್ಲಿ ಕಟ್ಟಲಾಗಿದ್ದ ತಿನಸುಗಳನ್ನು ಸ್ವೀಕರಿಸಿದರು. ಕಾರ್ಯಕ್ರಮಕ್ಕೆ ಗೊಲ್ಲ ಮನೆತನದವರು ಸೇರಿ ಲಕ್ಷ್ಮೀ ನರಸಿಂಹಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಕಾರ್ಯಕ್ರಮ ಸಂಪನ್ನಗೊಂಡಿತು.

ಬಂಕಾಪುರ, ಕನಕಗಿರಿ, ಗುಡದೂರು, ಉಮಳಿ ಕಾಟಾಪೂರ ಸೇರಿದಂತೆ ನಾನಾ ಗ್ರಾಮಗಳಲ್ಲಿನ ಗೊಲ್ಲರು ಹಸುವಿನ ಹಾಲು, ಮೊಸರು, ಬೆಣ್ಣೆಯನ್ನು ಐದು ದಿನಗಳ ಕಾಲ ಮೀಸಲಿಟ್ಟಿದ್ದ ಹೈನನ್ನು ದೇವಸ್ಥಾನಕ್ಕೆ ಸಮರ್ಪಿಸಿದ ಬಳಿಕ ಸ್ಪರ್ಧೆ ಆರಂಭಗೊಂಡಿತು.

ಇದಕ್ಕೂ ಮೊದಲು ರಾಜಬೀದಿಯ ಮಾರ್ಗವಾಗಿ ತೇರಿನ ಹನುಮಪ್ಪ ದೇವಸ್ಥಾನದವರೆಗೆ ಅಶ್ವಾರೋಹಣ ಉತ್ಸವ ಮೆರವಣಿಗೆ ನಡೆಯಿತು. ತಾಲೂಕಿನ ನಾನಾ ಗ್ರಾಮಗಳ ಜನತೆ ಪಾಲ್ಗೊಂಡಿದ್ದರು.

ಜನನಿ ನರ್ಸರಿ ಶಾಲೆಯಲ್ಲಿ ಜನ್ಮಾಷ್ಟಮಿ:

ಕೊಪ್ಪಳ ಸಮೀಪದ ಭಾಗ್ಯನಗರದ ಧನ್ವಂತರಿ ಕಾಲನಿಯ ಜನನಿ ನರ್ಸರಿ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.ಮುದ್ದು ಮಕ್ಕಳು ಕೃಷ್ಣ, ರಾಧೆಯ ವೇಷದೊಂದಿಗೆ ಸಂಭ್ರಮಿಸಿದರು.ಮುಖ್ಯ ಅತಿಥಿಗಳಾಗಿ ಸುಜಾತಾ ಪಟ್ಟಣಶೆಟ್ಟಿ, ತ್ರಿಶೂಲ ಪಾಟೀಲ್, ಶಾಲೆಯ ಮುಖ್ಯ ಶಿಕ್ಷಕಿ ಪದ್ಮಾವತಿ ನುಗಡೋಣಿ, ಶಿಕ್ಷಕಿ ಅಂಬಿಕಾ, ರೂಪಾ ಇದ್ದರು.