ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಪ್ರಜಾಪ್ರಭುತ್ವದ ತತ್ವಗಳ ಮೂಲ ತಳಹದಿಯಲ್ಲಿ ಸ್ಥಾಪಿತವಾಗಿರುವ ಸಹಕಾರ ಸಂಘಗಳು ಜನರ ಆರ್ಥಿಕ ಅವಶ್ಯಕತೆಗಳನ್ನು ಅವರ ಮನೆ ಬಾಗಿಲಲ್ಲೇ ಪೂರೈಸುವ ಜವಾಬ್ದಾರಿ ಹೊಂದಿವೆ ಎಂದು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭೀಷೇಕ ಪಾಟೀಲ್ ನುಡಿದರು.ಅವರು ಸಹಾರ್ದ ತರಬೇತಿ ಕೇಂದ್ರ ನೌಬಾದ, ಡಿಸಿಸಿ ಬ್ಯಾಂಕ್ ಬೀದರ್, ನಬಾರ್ಡ ಬೆಂಗಳೂರು ಮತ್ತು ಸಹಕಾರ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರುಗಳಿಗೆ ನಡೆದ ಎರಡು ದಿನದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿ ಆಧಾರಿತ ವ್ಯವಹಾರಗಳು ಮತ್ತು ರೈತರಿಗೆ ಆರ್ಥಿಕ ಸಹಾಯ ನೀಡುವ ಸಹಕಾರ ಸಂಸ್ಥೆಗಳು ಜನರ ಆಸ್ತಿಯಾಗಿವೆ. ಕೃಷಿಕರ ಜೀವನಾಡಿ ಯಾಗಿವೆ. ಗ್ರಾಮೀಣ ಜನರ ಆರ್ಥಿಕ ಸ್ವಾತಂತ್ರ್ಯಕ್ಕೆ ಅವರ ಸ್ವಾವಲಂಬಿತನಕ್ಕೆ ಶ್ರಮಿಸುವ ಸಹಕಾರಿ ಸಂಘಗಳು ತಮ್ಮ ಸೇವೆಯ ಗುಣಮಟ್ಟವನ್ನು ಸುಧಾರಿಸುವ ಆವಶ್ಯಕತೆಯಿದೆ ಎಂದರು.ಬದಲಾಗುವ ಸನ್ನಿವೇಶಗಳಿಗೆ ತಕ್ಕಂತೆ ತಮ್ಮ ವ್ಯವಹಾರದಲ್ಲಿ ಬದಲಾವಣೆ ತರುವ ಅಗತ್ಯವಿದೆ. ನೂತನ ವ್ಯವಹಾರಗಳನ್ನು ಆರಂಭಿಸುವ ಮೂಲಕ ಮತ್ತು ಹೊಸ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಸ್ಪರ್ಧಾತ್ಮಕವಾಗಿ ಪೈಪೋಟಿ ನಡೆಸಬೇಕಿದೆ. ಇಲ್ಲವಾದಲ್ಲಿ ಜನರಿಂದ ಜನರಿಗಾಗಿ ಜನರೇ ಸೃಷ್ಠಿಸಿಕೊಂಡ ಈ ವ್ಯವಸ್ಥೆ ಕುಸಿಯುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕರು ಮತ್ತು ಸಿಬ್ಬಂದಿಗಳು ಹೆಚ್ಚಿನ ಮುತುವರ್ಜಿಯಿಂದ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಸಮ ಸಮಾಜದ ನಿರ್ಮಾಣದಲ್ಲಿ ಸಹಕಾರ ಸಂಘಗಳ ಕೊಡುಗೆ ಗಣನೀಯವಾಗಿದೆ. ವ್ಯವಹಾರದಲ್ಲಿ ಆದುನಿಕ ಯುಗದ ಪೈಪೋಟಿಗೆ ಹೊಂದಿಕೆಯಾಗದೇ ಸಂಸ್ಥೆಗಳು ಸೊರಗುತ್ತಿವೆ. ಅದಕ್ಕಾಗಿ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸಾರ್ವಜನಿಕ ಸಾಮಾನ್ಯ ಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಬೀದರ್ ಜಿಲ್ಲೆಯ 188 ಸಹಕಾರ ಸಂಘಗಳನ್ನು ಈ ಯೋಜನೆಯಡಿ ತರಲಾಗಿದೆ.ದಿನ ದಿನಗಳಲ್ಲಿ ಗ್ರಾಮ ಮಟ್ಟದಲ್ಲೇ ಎಲ್ಲಾ ರೀತಿಯ ಕಂಪ್ಯೂಟರ ಸ್ನೇಹಿ ಸೌಲಭ್ಯಗಳು ದೊರಕುವಂತೆ ಸಂಘಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಕಂಪ್ಯೂಟರ್‌ಗಳನ್ನು ಒದಗಿಸಲಾಗಿದೆ. ಬೀದರ್‌ನ ಗ್ರಾಮೀಣ ಪ್ರದೇಶದಲ್ಲಿ ಕೂಡ ಅನಿರ್ಬಂಧಿತ ಸೇವೆ ನೀಡಲು ಬಿಎಸ್‌ಎನ್‌ಎಲ್ ಹೊಸ ಯೋಜನೆ ಜಾರಿಗೆ ತಂದಿದ್ದು ಪ್ರಾಥಮಿಕ ಸಹಕಾರಿ ಸಂಘಗಳಿಗೆ ಹೆಚ್ಚಿನ ವೇಗದ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸಂಪರ್ಕವನ್ನು ವಿಶೇಷವಾಗಿ ಕಡಿಮೆ ದರದಲ್ಲಿ ಒದಗಿಲಾಗುತ್ತಿದೆ. ಇದರ ಪ್ರಯೋಜನವನ್ನು ಕೂಡಲೇ ಎಲ್ಲಾ ಪಿಕೆಪಿಎಸ್‌ಗಳು ಪಡೆದುಕೊಳ್ಳಬೇಕು ಎಂದರು.
ಸಹಾರ್ದ ತರಬೇತಿ ಕೇಂದ್ರದ ನಿರ್ದೇಶಕ ಸುಬ್ರಮಣ್ಯ ಪ್ರಭು ಸ್ವಾಗತಿಸಿದರು. ಸಹಾರ್ದ ತರಬೇತಿ ಕೇಂದ್ರದ ಉಪನ್ಯಾಸಕರಾದ ಮಂಜುನಾಥ ಭಾಗವತ ನಿರೂಪಿಸಿದರೆ ಸಂಪನ್ಮೂಲ ವ್ಯಕ್ತಿಗಳಾಗಿ ಸಂಜು ಸ್ವಾಮಿ ಉಪನ್ಯಾಸ ನೀಡಿದರು. ಅನೀಲ್ ಪರೇಶ್ಯಾನೆ ನಿರ್ವಹಿಸಿದರು.