ಸುಮಾರು 200 ವರ್ಷಗಳಿಂದಲೂ ಪ್ರತಿ ವರ್ಷದಂತೆ ಶ್ರೀ ವೀರ ಮಹೇಶ್ವರ ಸ್ವಾಮಿಯ ಮೂರು ದಿನಗಳ ಜಾತ್ರೆ ಇಲ್ಲಿಗೆ ಸಮೀಪದ ಬಸಾಪುರ ಗ್ರಾಮದ ಶ್ರೀ ವೀರ ಮಹೇಶ್ವರ ಸ್ವಾಮಿ ತೋಟದಲ್ಲಿ 3ನೇ ದಿನವಾದ ಬುಧವಾರ ಶ್ರದ್ಧಾಭಕ್ತಿಯಿಂದ ನಡೆಯಿತು. ಈ ಜಾತ್ರೆಯಲ್ಲಿ ಮಹಿಳೆಯರ ನೆರಳು ಸಹ ಬೀಳುವುದಿಲ್ಲ. ಏನಿದ್ದರೂ, ಪುರುಷಪ್ರಧಾನ ಜಾತ್ರೆ ಎಂಬುದು ಗಮನೀಯ ಮತ್ತು ವಿಶೇಷ.

- ಪುರುಷ ಭಕ್ತರ ವಿಶೇಷ ಜಾತ್ರೆ । ವೀರ ಮಹೇಶ್ವರ ಜೀವಂತ ಸಮಾಧಿ ಆದರೆಂಬ ಪ್ರತೀತಿಯ ಜಾತ್ರೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸುಮಾರು 200 ವರ್ಷಗಳಿಂದಲೂ ಪ್ರತಿ ವರ್ಷದಂತೆ ಶ್ರೀ ವೀರ ಮಹೇಶ್ವರ ಸ್ವಾಮಿಯ ಮೂರು ದಿನಗಳ ಜಾತ್ರೆ ಇಲ್ಲಿಗೆ ಸಮೀಪದ ಬಸಾಪುರ ಗ್ರಾಮದ ಶ್ರೀ ವೀರ ಮಹೇಶ್ವರ ಸ್ವಾಮಿ ತೋಟದಲ್ಲಿ 3ನೇ ದಿನವಾದ ಬುಧವಾರ ಶ್ರದ್ಧಾಭಕ್ತಿಯಿಂದ ನಡೆಯಿತು. ಈ ಜಾತ್ರೆಯಲ್ಲಿ ಮಹಿಳೆಯರ ನೆರಳು ಸಹ ಬೀಳುವುದಿಲ್ಲ. ಏನಿದ್ದರೂ, ಪುರುಷಪ್ರಧಾನ ಜಾತ್ರೆ ಎಂಬುದು ಗಮನೀಯ ಮತ್ತು ವಿಶೇಷ.

ಶ್ರೀ ವೀರ ಮಹೇಶ್ವರ ಸ್ವಾಮಿ ಜಾತ್ರೆ ಅಂಗವಾಗಿ ಮಂಗಳವಾರ ದಿನವಿಡೀ ಭಕ್ತರಿಗೆ ಅನ್ನ, ಬಾಳೆ, ಬೋರಾ ಸಕ್ಕರೆ ಪ್ರಸಾದ ಬಡಿಸಲಾಯಿತು. ಮೂರನೇ ದಿನವಾದ ಬುಧವಾರ ಅನ್ನ ಸಾರು, ಮಜ್ಜಿಗೆ ಸಾರು ದಾಸೋಹ ನಡೆಯಿತು. ಸಾವಿರಾರು ಭಕ್ತರು ನೆಲದ ಮೇಲೆ ಶಿಸ್ತಾಗಿ ಕುಳಿದು ಪ್ರಸಾದ ಸ್ವೀಕರಿಸಿದರು.

ಬಸಾಪುರದ ಈ ಜಾತ್ರೆ ತನ್ನ ವೈಶಿಷ್ಟ್ಯತೆಯಿಂದ ಮಧ್ಯ ಕರ್ನಾಟಕದಲ್ಲಿ ಮನೆ ಮಾತಾಗಿದೆ. ಬಂಧು-ಬಳಗ, ಸ್ನೇಹಿತರು ಹೀಗೆ ಯಾರನ್ನೂ ಆಹ್ವಾನಿಸದಿದ್ದರೂ ಸ್ವಾಮಿ ಜಾತ್ರೆಗೆ ಎಲ್ಲೇ ಇದ್ದರೂ ಬಸಾಪುರಕ್ಕೆ ಬರುವುದು ಜಾತ್ರೆ ಮತ್ತೊಂದು ವೈಶಿಷ್ಟ್ಯ. ಮಹೇಶ್ವರ ಸ್ವಾಮಿ ತೋಟದಲ್ಲಿ ತೆಂಗಿನ ಗರಿಗಳಲ್ಲಿ ತಾತ್ಕಾಲಿಕವಾಗಿ ಕಟ್ಟಿದ ಶ್ರೀ ವೀರ ಮಹೇಶ್ವರ ದೇವಸ್ಥಾನಕ್ಕೆ ತೀವ್ರ ಬರಗಾಲದಲ್ಲೂ ಬತ್ತದ ಮಹೇಶ್ವರ ಸ್ವಾಮಿ ತೋಟದ ಕೊಳ (ಪುಷ್ಕರಣಿ)ದಿಂದ ಮಡಿನೀರನ್ನು ತಂದು ಪೂಜೆ ಸಲ್ಲಿಸುವ ಜೊತೆಗೆ ಧಾರ್ಮಿಕ ಆಚರಣೆ ಮಂಗಳವಾರ ಆರಂಭಗೊಂಡಿತ್ತು.

ಜಾತ್ರೆ ಮೊದಲ ದಿನ ಸೋಮವಾರ ತೆಂಗಿನ ಗರಿಯಿಂದ ಕಟ್ಟುವ ತಾತ್ಕಾಲಿಕ ಚಪ್ಪರದಲ್ಲೇ ಸ್ವಾಮಿಗೆ ಪದ್ಧತಿಯಂತೆ ಪೂಜಿಸಿ, ಪ್ರಸಾದ ನೀಡಲಾಯಿತು. ಪುಟ್ಟ ಬಾಲಕರಿಂದ ವಯೋವೃದ್ಧರವೆರೆಗೆ ಭಕ್ತಿಯಿಂದ ಭಾಗವಹಿಸಿದ್ದರು. ದಾವಣಗೆರೆ ನೆರೆಹೊರೆಯ ಜಿಲ್ಲೆಗಳ ಸಹಸ್ರಾರು ಭಕ್ತರು ಆಗಮಿಸಿದ್ದರು. ಚನ್ನಗಿರಿ ತಾಲೂಕು ಚಿಕ್ಕಲಿಕೆರೆ ಗ್ರಾಮದಲ್ಲಿ ಇಂತಹ ಜಾತ್ರೆ ಇತ್ತು. ಅದೇ ರೀತಿ ಶ್ರೀ ವೀರ ಮಹೇಶ್ವರ ಅವರು ಬಸಾಪುರದ ಹೊರವಲಯದ ಈ ಪ್ರದೇಶದಲ್ಲಿ ಜೀವಂತ ಸಮಾಧಿ ಆದರೆಂಬ ಪ್ರತೀತಿ ಇದೆ. ಅಂದಿನಿಂದಲೂ ಈ ಭಾಗದಲ್ಲಿ ಪ್ರತಿ ವರ್ಷ ಡಿಸೆಂಬರ್‌ನಲ್ಲಿ ವೀರ ಮಹೇಶ್ವರ ಜಾತ್ರೆ ಆಚರಿಸಲ್ಪಡುತ್ತದೆ.

ಆನೆಕೊಂಡ, ಬಸಾಪುರ ಶ್ರೀ ಬಸವೇಶ್ವರ ಸ್ವಾಮಿಗಳು, ಶ್ರೀ ಗುರು ಸಿದ್ದೇಶ್ವರ ಸ್ವಾಮಿ, ಶ್ರೀ ಹಾಲಸಿದ್ದೇಶ್ವರ ಸ್ವಾಮಿ ಶ್ರೀ ಮಹೇಶ್ವರ ಸ್ವಾಮಿ ತೋಟಕ್ಕೆ ಬಿಜಂಗೈಯ್ದರು.

- - -

(ಬಾಕ್ಸ್‌) * ಶಾಮನೂರು ಇಲ್ಲದ ಮೊದಲ ಮಹೇಶ್ವರ ಜಾತ್ರೆ!

ದಾವಣಗೆರೆ: ಬಾಲ್ಯದಿಂದಲೂ ಬಸಾಪುರ ಶ್ರೀ ವೀರ ಮಹೇಶ್ವರ ಜಾತ್ರೆಯೆಂದರೆ ಬೇರೆ ಊರು, ಅನ್ಯ ರಾಜ್ಯ, ಅನ್ಯ ದೇಶದಲ್ಲೇ ಇದ್ದರೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಪ್ಪದೇ ಜಾತ್ರೆಗೆ ಹಾಜರಾಗುತ್ತಿದ್ದರು. ಆದರೆ, ನಿಧನದಿಂದಾಗಿ ಈ ಬಾರಿ ಎಸ್‌ಎಸ್‌ ಅವರಿಲ್ಲದೇ ಜಾತ್ರೆ ನಡೆಯಿತು. ಮನೆಯ ಯಜಮಾನನ್ನು ಕಳೆದುಕೊಂಡ ಶಾಮನೂರು ಕುಟುಂಬ ಸಹ ಈ ಸಲದ ಜಾತ್ರೆಗೆ ಬರಲು ಸಾಧ್ಯವಾಗದೇ, ದೂರದಿಂದಲೇ ಸ್ವಾಮಿಗೆ ಕೈಮುಗಿದಿದ್ದಾರೆ.

- - -

(-ಫೋಟೋಗಳಿವೆ.)

-17ಕೆಡಿವಿಜಿ8, 9, 10.ಜೆಪಿಜಿ:ದಾವಣಗೆರೆ ಸಮೀಪದ ಬಸಾಪುರದ ಮಹೇಶ್ವರ ಸ್ವಾಮಿ ತೋಟದ ತೆಂಗಿನ ಗರಿಯ ಆಲಯದಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಶ್ರೀ ವೀರ ಮಹೇಶ್ವರ ಸ್ವಾಮಿ ಜಾತ್ರೆಯಲ್ಲಿ ನೆಲದ ಮೇಲೆ ಬಡವ- ಬಲ್ಲಿದನೆಂಬ ಅಂತರವಿಲ್ಲದೇ ಭಕ್ತರು ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದರು.