ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಔರಾದ(ಬಾ )ಶಾಖೆಯಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ, ಔರಾದ್‌ಕಲ್ಯಾಣ ಕರ್ನಾಟಕದ ಹಿಂದುಳಿದ ಗಡಿ ಔರಾದ್‌ನ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ 2009-10ರಲ್ಲಿ ಇ&ಸಿ ಮತ್ತು ಸಿಎಸ್‌ ವಿಭಾಗಗಳನ್ನು 60 ಇಂಟೆಕ್‌ ಗಳೊಂದಿಗೆ ಪ್ರಾರಂಭಿಸಿಲಾಗಿರುತ್ತದೆ ಆದರೆ 2021-22ರ ಶೈಕ್ಷಣಿಕ ಸಾಲಿನಿಂದ ಹಠಾತ್ತಾಗಿ ಎರಡು ವಿಭಾಗಗಳ ಪ್ರವೇಶಾತಿಯನ್ನು ನಿಲ್ಲಿಸಲಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿ ಎಬಿವಿಪಿ ಔರಾದ್‌ ಘಟಕದಿಂದ ಪಟ್ಟಣದ ಕಾಲೇಜು ಎದುರು ಪ್ರತಿಭಟನೆ ನಡೆಸಲಾಯಿತು.ಈ ಕುರಿತು ಉನ್ನತ ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ, ಹೊಸ ಅನುಮೋದನೆ ನಿಯಮಗಳ ಪ್ರಕಾರ ಯಾವುದೇ ಒಂದು ವಿಭಾಗದ ಪ್ರವೇಶಾತಿ ಕಡಿಮೆಯಾದಾಗ ಪ್ರವೇಶಾತಿಯನ್ನು ಶೇ. 50ರಷ್ಟು ಕಡಿತಗೊಳಿಸಬೇಕಾಗಿರುತ್ತದೆ, ಅಂದರೆ ಪ್ರವೇಶಾತಿಯನ್ನು 60ರಿಂದ 30ಕ್ಕೆ ಕಡಿತಗೊಳಿಸಬೇಕಾಗಿರುತ್ತದೆ. ಪ್ರವೇಶಾತಿಯನ್ನು ಕಡಿತಗೊಳಿಸಿದ ನಂತರವೂ ಸತತ ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಸುಧಾರಣೆ ಆಗದಿದ್ದಲ್ಲಿ ಶಾಖೆ ಸ್ಥಗಿತ ಮಾಡಬಹುದಾಗಿರುತ್ತದೆ. ಆದರೆ ಸರ್ಕಾರಿ ಪಾಲಿಟೆಕ್ನಿಕ್‌ ಔರಾದ್‌ (ಬಾ)ನಲ್ಲಿ 60 ಪ್ರವಾಶಾತಿಗೆ ಅವಕಾಶ ಇರುವ ಇ&ಸಿ ಹಾಗೂ ಸಿ.ಎಸ್‌ ವಿಭಾಗಗಳನ್ನು ಏಕಕಾಲಕ್ಕೆ ಸಂಪೂರ್ಣವಾಗಿ ಮುಚ್ಚಿರುತ್ತಾರೆ. ಇದರಿಂದಾಗಿ ಕಲ್ಯಾಣ ಕರ್ನಾಟಕದ ಹಿಂದುಳಿದ ಗಡಿಭಾಗದ ವಿದ್ಯಾರ್ಥಿಗಳಿಗೆ ಬೇಡಿಕೆಯಲ್ಲಿರುವ ಒಳ್ಳೆಯ ಕೋರ್ಸಗಳು ಲಭ್ಯವಿಲ್ಲದೆ ಅವಕಾಶಗಳಿಂದ ವಂಚಿತರಾಗುವಂತಾಗಿದೆ ಎಂದು ದೂರಲಾಯಿತು.ಪ್ರಸ್ತುತ ಸರ್ಕಾರಿ ಪಾಲಿಟೆಕ್ನಿಕ್‌ ಔರಾದ್‌ನಲ್ಲಿ (ಬಾ) ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಡಿಯಲ್ಲಿ ಹೊಸ ಪ್ರಯೋಗಾಲಯ ಹಾಗೂ ತರಗತಿ ಹಾಗೂ ಗ್ರಂಥಾಲಯ ಕಟ್ಟಡಗಳನ್ನು ನಿರ್ಮಿಸಲಾಗಿರುತ್ತದೆ. ಇ&ಸಿ ವಿಭಾಗ ಹಾಗೂ ಸಿಎಸ್‌ ವಿಭಾಗಗಳನ್ನು ಪುನಃ ಪ್ರಾರಂಭಿಸಲು ಅಗತ್ಯವಿರುವ ಮುಲಭೂತ ಸೌಕರ್ಯಗಳು ಲಭ್ಯವಿದ್ದರೂ ಉಪಯೋಗಕ್ಕೆ ಬಾರದೆ ಸಂಸ್ಥೆಯಲ್ಲಿ ಹಾಗೆಯೇ ಉಳಿದಿರುತ್ತವೆ ಆದ್ದರಿಂದ ಇ&ಸಿ ವಿಭಾಗ ಹಾಗೂ ಸಿಎಸ್‌ ವಿಭಾಗಗಳನ್ನು ಪುನಃ ಪ್ರಾರಂಭಿಸುವುದರಿಂದ ಯಾವುದೇ ಮುಲಭೂತ ಸೌಕರ್ಯಗಳ ಅಭಾವ ಹಾಗೂ ಸರ್ಕಾರಕ್ಕೆ ಆರ್ಥಿಕ ಹೊರೆ ಆಗುವುದಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ವಿದ್ಯಾರ್ಥಿ ಪರಿಷತ್‌ ಮುಖಂಡ ಶಿವಶರಣು ಚಾಂಬೊಳೆ ಮಾತನಾಡಿ, 7 ತಾಲೂಕುಗಳನ್ನು ಹೊಂದಿರುವ ಬೀದರ ಜಿಲ್ಲೆಯಲ್ಲಿ ಕೇವಲ ಎರಡು ಸರ್ಕಾರಿ ಪಾಲಿಟೆಕ್ನಿಕ್‌ ಸಂಸ್ಥೆಗಳಿದ್ದು ಅದರಲ್ಲಿಯೂ ಸರ್ಕಾರಿ ಪಾಲಿಟೆಕ್ನಿಕ್‌ ಔರಾದ್‌ (ಬಾ)ನಲ್ಲಿ ಪ್ರಸ್ತುತ ಬೇಡಿಕೆಯಲ್ಲಿರುವ ಮತ್ತು ಹೇರಳ ಉದ್ಯೋಗ ಅವಕಾಶಗಳಿರುವ ಇ&ಸಿ ಮತ್ತು ಸಿಎಸ್‌ ಎಂಜಿನಿಯರಿಂಗ್‌ ವಿಭಾಗಗಳನ್ನೇ ಮುಚ್ಚಲಾಗಿದ್ದು ಇದರಿಂದ ಹಿಂದುಳಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ, ಇಸಿ ಮತ್ತು ಸಿಎಸ್‌ ಕೋರ್ಸಗಳು ಪುನರ್‌ ಪ್ರಾರಂಭಿಸದೆ ಇದ್ದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಪರಿಷತ್‌ ಜಿಲ್ಲಾ ಸಂಚಾಲಕ ನಾಗರಾಜ ಸುಲ್ತಾನಪುರ, ತಾಲೂಕು ಸಂಚಾಲಕ ನಿತಿನ್‌ ಮೂಲಗೆ, ಸುರೇಶ ವರ್ತುಲೆ, ಮಲ್ಲಿಕಾರ್ಜುನ ಟೇಕರಾಜ, ಪ್ರಶಾಂತ ಮೇತ್ರೆ, ಅರುಣ, ರಾಹುಲ್‌, ಮಹಾದೇವ, ಅಂಕುಶ ಶುಭಮ್‌. ತಾಲೂಕಿನ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.