ಬಾಳೆ ಮುಹೂರ್ತ ನೆರವೇರಿಸಿದ ಶ್ರೀ ವೇದವರ್ಧನ ತೀರ್ಥರು

| Published : Dec 07 2024, 12:30 AM IST

ಬಾಳೆ ಮುಹೂರ್ತ ನೆರವೇರಿಸಿದ ಶ್ರೀ ವೇದವರ್ಧನ ತೀರ್ಥರು
Share this Article
  • FB
  • TW
  • Linkdin
  • Email

ಸಾರಾಂಶ

2026ರ ಜ.18ರಂದು ತಮ್ಮ ಪ್ರಥಮ ಪರ್ಯಾಯೋತ್ಸವವನ್ನು ನಡೆಸಲಿರುವ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು, ಸಂಪ್ರದಾಯದಂತೆ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಬಾಳೆ ಮುಹೂರ್ತವನ್ನು ಶುಕ್ರವಾರ ನೆರವೇರಿಸಿದರು.

2026ರಲ್ಲಿ ತಮ್ಮ ಪ್ರಥಮ ಪರ್ಯಾಯೋತ್ಸವ ನಡೆಸಲಿರುವ ಶಿರೂರು ಶ್ರೀಗಳು

ಕನ್ನಡಪ್ರಭ ವಾರ್ತೆ ಉಡುಪಿ

2026ರ ಜ.18ರಂದು ತಮ್ಮ ಪ್ರಥಮ ಪರ್ಯಾಯೋತ್ಸವವನ್ನು ನಡೆಸಲಿರುವ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು, ಸಂಪ್ರದಾಯದಂತೆ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಬಾಳೆ ಮುಹೂರ್ತವನ್ನು ಶುಕ್ರವಾರ ನೆರವೇರಿಸಿದರು.ಮುಂದಿನ 2 ವರ್ಷ ಕೃಷ್ಣಮಠದಲ್ಲಿ ಆಡಳಿತ, ಪೂಜೆ ಮತ್ತು ನಿತ್ಯ ಅನ್ನದಾನದ ಅಧಿಕಾರವನ್ನು ಸ್ವೀಕರಿಸುವುದಕ್ಕೆ ಮೊದಲು ಪರ್ಯಾಯ ಮಠವು ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಧಾನ್ಯ ಮುಹೂರ್ತ ಮತ್ತು ಕಟ್ಟಿಗೆ ಮುಹೂರ್ತಗಳನ್ನು ನಡೆಸುವುದು ಸಂಪ್ರದಾಯವಾಗಿದೆ.ಅದರಂತೆ ಬೆಳಗ್ಗೆ 7 ಗಂಟೆಗೆ ವೃಶ್ಚಿಕ ಲಗ್ನ ಸುಹೂರ್ತದಲ್ಲಿ ನಗರದ ಪೂರ್ಣಪ್ರಜ್ಞಾ ಕಾಲೇಜು ಬಳಿಯ ಶಿರೂರು ಮಠದ ತೋಟದಲ್ಲಿ ವೇದ ವಾದ್ಯಘೋಷಗಳ ನಡುವೆ ಭಾವಿ ಪರ್ಯಾಯ ಶ್ರೀಗಳು ಬಾಳೆ ಸಸಿ‌, ತುಳಸಿ ಸಸಿ ಹಾಗೂ ಕಬ್ಬಿನ ಕಂದು ನೆಟ್ಟು ಪ್ರಥಮ ಮುಹೂರ್ತವನ್ನು ವಿದ್ಯುಕ್ತವಾಗಿ ಪೂರ್ಣಗೊಳಿಸಿದರು.ವಿದ್ವಾನ್ ಗಿರಿರಾಜ ಉಪಾಧ್ಯಾಯ ಕಂಬ್ಳಕಟ್ಟ ಅವರು ಧಾರ್ಮಿಕ ವಿಧಿ ನೆರವೇರಿಸಿದರು. ಶಿರೂರು ಮಠದ ದಿವಾನ ಡಾ. ಉದಯ ಸರಳತ್ತಾಯ, ಪಾರುಪತ್ಯಗಾರ ಶ್ರೀಶ ಭಟ್ ಕಡೆಕಾರ್ ನೇತೃತ್ವ ವಹಿಸಿದ್ದರು. ಶ್ರೀಮಠದ ಮೇಸ್ತ್ರಿ ಪದ್ಮನಾಭ ಸಹಕರಿಸಿದರು.ಇದಕ್ಕೆ ಮೊದಲು ಬೆಳಗ್ಗೆ 5.30ಕ್ಕೆ ಶಿರೂರು ಮಠದಲ್ಲಿ ಪಟ್ಟದ ದೇವರಾದ ಶ್ರೀವಿಠಲ ದೇವರ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ರಥಬೀದಿಯಲ್ಲಿರುವ ಶ್ರೀ ಅನಂತೇಶ್ವರ ಮತ್ತು ಚಂದ್ರೇಶ್ವರ, ಕೃಷ್ಣಮಠದಲ್ಲಿ ಕೃಷ್ಣ - ಮುಖ್ಯಪ್ರಾಣ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ವೃಂದಾವನ, ಗೋಶಾಲೆಗಳನ್ನು ದರ್ಶನ ಮಾಡಲಾಯಿತು.ನಂತರ ಶಿರೂರು ಮಠದಿಂದ ನೂರಾರು ಬಾಳೆ ಸಸಿಗಳನ್ನು ವೇದ- ವಾದ್ಯ ಘೋಷ, ಭಜನೆಯೊಂದಿಗೆ ಮೆರವಣಿಗೆಯಲ್ಲಿ ತೋಟಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ನೆಟ್ಟು ಮುಹೂರ್ತ ನಡೆಸಲಾಯಿತು.

ಶ್ರೀಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ನೂರಾರು ಭಕ್ತರಿಗೂ ಬಾಳೆ ಸಸಿ ನೆಡುವುದಕ್ಕೆ ಅವಕಾಶ ನೀಡಲಾಗಿತ್ತು.ಅನ್ನದಾನ- ವೇದಪಾಠ:

ನಂತರ ಸರಳ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀ ವೇದವರ್ಧನ ತೀರ್ಥರು, 2026ರ ಜ.18ರಿಂದ ಎರಡು ವರ್ಷ ಕಾಲದ ತಮ್ಮ ಪ್ರಥಮ ಪರ್ಯಾಯ ಅವಧಿಯಲ್ಲಿ ಅನ್ನದಾನಕ್ಕೆ ಆದ್ಯತೆ ನೀಡಲಾಗುವುದು. ಕೃಷ್ಣ ದರ್ಶನಕ್ಕೆ ಆಗಮಿಸುವ ಎಲ್ಲ ಭಕ್ತರಿಗೂ ಏಕರೂಪದ ಪ್ರಸಾದ ಲಭಿಸುವಂತೆ ವ್ಯವಸ್ಥೆ ಮಾಡಲಾಗುವುದು. ಅಂತೆಯೇ ಕೃಷ್ಣ ಸನ್ನಿಧಿಯಲ್ಲಿ ಪೂಜೆ, ಪ್ರವಚನ ಇತ್ಯಾದಿಗಳ ನಡುವೆಯೇ ಚತುರ್ವೇದ ಪಾರಾಯಣ, ವೇದ ಪಾಠ ನಡೆಸಲುದ್ದೇಶಿಸಲಾಗಿದೆ ಎಂದರು.ಮಠದ ದಿವಾನ ಡಾ. ಉದಯ ಸರಳತ್ತಾಯರು, ಪರ್ಯಾಯ ಸಂದರ್ಭದಲ್ಲಿ ಬಾಳೆ ಎಲೆಗಾಗಿ ಬಾಳೆತೋಟ ನಿರ್ಮಿಸುವ, ಬಾಳೆ ಎಲೆಯಲ್ಲಿ ಕೃಷ್ಣನಿಗೆ ನೈವೇದ್ಯ ಸಮರ್ಪಿಸಿ ಅದನ್ನು ಪ್ರಸಾದ ರೂಪವಾಗಿ ಭಕ್ತರಿಗೆ ವಿತರಿಸುವ ಆಶಯ ಬಾಳೆ ಮುಹೂರ್ತ ಹೊಂದಿದೆ. ಶ್ರೀಮಠದ ಸುಮಾರು 1 ಎಕರೆ ಜಾಗದಲ್ಲಿ ಭಕ್ತರಿಂದಲೇ 1 ಸಾವಿರ ಬಾಳೆ ಸಸಿ ನೆಟ್ಟು ಪೋಷಿಸಿ, ಪರ್ಯಾಯ ಕಾಲದಲ್ಲಿ ಅದನ್ನು ಬಳಸುವ ಆಶಯ ಹೊಂದಲಾಗಿದೆ ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ, ಶಾಸಕ ಯಶ್ಪಾಲ್ ಸುವರ್ಣ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಭುವನಾಭಿರಾಮ ಉಡುಪ, ಶ್ರೀಪತಿ ಭಟ್ ಮೂಡುಬಿದಿರೆ, ದ.ಕ. ಕಸಾಪ ಮಾಜಿ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಪ್ರಮುಖರಾದ ಕಿನ್ನಿಮೂಲ್ಕಿ ಕೃಷ್ಣಮೂರ್ತಿ ಆಚಾರ್ಯ, ಮೋಹನ ಭಟ್, ವಾಸುದೇವ ಆಚಾರ್ಯ, ಶ್ರೀಕಾಂತ ನಾಯಕ್, ಗೋವಿಂದ ಭಟ್, ಡಾ. ಕೃಷ್ಣಪ್ರಸಾದ್, ಪ್ರಸಾದ್ ರಾಜ್ ಕಾಂಚನ್, ಪುತ್ತಿಗೆ ಮಠ ಕೊಠಾರಿ ರಾಮಚಂದ್ರ ಕೊಡಂಚ, ಪೇಜಾವರ ಮಠ ದಿವಾನ ರಘುರಾಮ ಆಚಾರ್ಯ ಮತ್ತು ಸಿಇಒ ಸುಬ್ರಹ್ಮಣ್ಯ ಸಾಮಗ ಮೊದಲಾದವರಿದ್ದರು.