ಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾನಿಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಶಾಲೆಯ ಸ್ನಾತಕೋತ್ತರ ವಿಭಾಗಗಳ ಆಶ್ರಯದಲ್ಲಿ ಸುಧಾರಿತ ಮಾಹಿತಿ ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ನಿರ್ವಹಣೆ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ‘SACAIM 2026’ ನಗರದ ಅಲೋಶಿಯಸ್ ವಿವಿಯ ಎಐಮಿಟ್ ಕೇಂದ್ರದಲ್ಲಿ ಉದ್ಘಾಟನೆಗೊಂಡಿತು.ಫಾದರ್ ಮುಲ್ಲರ್ ಸಂಶೋಧನಾ ಕೇಂದ್ರದ ಮುಖ್ಯಸ್ಥ ಹಾಗೂ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಚರ್ಮರೋಗ ವಿಭಾಗದ ಪ್ರಾಧ್ಯಾಪಕ ಡಾ.ರಮೇಶ್ ಭಟ್ ಎಂ. ಮಾತನಾಡಿ, ಆರೋಗ್ಯ ಕ್ಷೇತ್ರದ ಸವಾಲುಗಳನ್ನು ಎದುರಿಸುವಲ್ಲಿ ವಿವಿಧ ಶೈಕ್ಷಣಿಕ ವಿಭಾಗಗಳ ನಡುವಿನ ಸಹಯೋಗ ಮತ್ತು ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ ಬಳಕೆಯ ಮಹತ್ವ ವಿವರಿಸಿದರು.
ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ರೊನಾಲ್ಡ್ ನಜರೆತ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಜ್ಞಾನವನ್ನು ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಳಸಬೇಕು ಎಂದರು.ಎಐಮಿಟ್ ಕೇಂದ್ರದ ನಿರ್ದೇಶಕ ಡಾ.ಕಿರಣ್ ಕೋತ್ ಎಸ್ಜೆ ಮಾತನಾಡಿ, ಕೃತಕ ಬುದ್ಧಿಮತ್ತೆಯ ನೈತಿಕ ಬಳಕೆ, ಸೃಜನಶೀಲತೆ ಹಾಗೂ ವಿಮರ್ಶಾತ್ಮಕ ಚಿಂತನೆಯ ಅಗತ್ಯವನ್ನು ಒತ್ತಿ ಹೇಳಿದರು.ಯುನೈಟೆಡ್ ಕಿಂಗ್ಡಮ್ನ ಲೀಡ್ಸ್ ಬೆಕೆಟ್ ವಿಶ್ವವಿದ್ಯಾನಿಲಯದ ಕಿರಣ್ ವೊಡೆರ್ಹೋಬ್ಲಿ ಹಾಗೂ ಟಾಂಜಾನಿಯಾದ ಮ್ವೆಂಗೆಕ್ಯಾಥೋಲಿಕ್ ವಿಶ್ವವಿದ್ಯಾನಿಲಯದ ಡಾ.ಜೆರೋಮ್ ಮಾನ್ಯಹಿ ಎಸ್ಜೆ ಅವರು ವರ್ಚುವಲ್ ಮೂಲಕ ಸಂದೇಶ ನೀಡಿದರು.
ಡಾ.ರಮೇಶ್ ಭಟ್ ಅವರು ‘ವೈದ್ಯಕೀಯ ಮತ್ತು ಎಂಜಿನಿಯರಿಂಗ್ ನಡುವಿನ ಸೇತುವೆ: ಸಂಶೋಧನಾ ಪ್ರಶ್ನೆಗಳಿಂದ ಆರೋಗ್ಯ ಕ್ಷೇತ್ರದ ನಾವೀನ್ಯತೆಯವರೆಗೆ’ ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಿದರು. ವಿಶ್ವವಿದ್ಯಾನಿಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಶಾಲೆಯ ಡೀನ್ ಡಾ.ಸುಚೇತಾ ವಿಜಯಕುಮಾರ್ ಸ್ವಾಗತಿಸಿದರು.