ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ನೆಲದ ಹೆಮ್ಮೆಯ ಸಾಹಿತಿ ಡಾ.ಬಿ.ಎಲ್ ವೇಣು ಅವರಿಗೆ 81 ವರ್ಷ ತುಂಬಿದ ಹಿನ್ನಲೆ ಅವರ ಅನುಯಾಯಿಗಳು ಬುಧವಾರ ಸರಳವಾಗಿ ಜನ್ಮ ದಿನ ಆಚರಿಸಿದರು. ನಿವಾಸಕ್ಕೆ ತೆರಳಿ ಶತಾಯುಷಿಯಾಗುವಂತೆ ಶುಭ ಹಾರೈಸಿದರು.ಈ ವೇಳೆ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಸಾಹಿತಿ ಡಾ.ಬಿ.ಎಲ್.ವೇಣುರವರು ಕೃತಿಗಳ ಮೂಲಕ ಜಿಲ್ಲೆಯ ನೆಲಮೂಲದ ಸಂಸ್ಕೃತಿ ಕಟ್ಟಿಕೊಟ್ಟು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಐತಿಹಾಸಿಕ ಕಾದಂಬರಿ ರಚನೆ ಮೂಲಕ ದುರ್ಗದ ನೆಲವ ಚಾರಿತ್ರಿಕವಾಗಿ ಉನ್ನತಸ್ಥಾನಕ್ಕೇರಿಸಿದ್ದಾರೆಂದು ಶ್ಲಾಘಿಸಿದರು.
ಶ್ರಮ ಸಂಸ್ಕೃತಿಯ ಕಾದಂಬರಿ, ಚಿತ್ರಕಥೆ ಸಂಭಾಷಣೆಯ ಮೂಲಕ ಕಥೆಗಾರರಾಗಿ ಜಿಲ್ಲೆಯನ್ನು ಪ್ರಧಾನವಾಗಿಟ್ಟುಕೊಂಡು ಚಿತ್ರದುರ್ಗದ ಕೀರ್ತಿಯನ್ನು ತಮ್ಮ ಬರವಣಿಗೆ ಮೂಲಕ ನಾಡಿನಾದ್ಯಂತ ಪಸರಿಸಿರುವ ಬಿ.ಎಲ್.ವೇಣುರವರಿಂದ ಇನ್ನಷ್ಟು ಕೃತಿಗಳು ಹೊರ ಬರಲಿ. ಅವರ ಕಥೆಗಳು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯಪುಸ್ತಕಗಳಾಗಿರುವುದು ಹೆಮ್ಮೆಯ ಸಂಗತಿ. ನಾನು ನಗರಸಭೆ ಅಧ್ಯಕ್ಷನಾಗಿದ್ದಾಗ ತುರುವನೂರು ರಸ್ತೆಯಲ್ಲಿರುವ ಸರ್ಕಲ್ ಗೆ ಡಾ.ಬಿ.ಎಲ್.ವೇಣು ವೃತ್ತವೆಂದು ನಾಮಕರಣ ಮಾಡಿದ್ದೇನೆ. ಇದೊಂದು ನನ್ನ ಅಧಿಕಾರವಧಿಯಲ್ಲಿ ಸಿಕ್ಕ ಸುವರ್ಣಾವಕಾಶ ಎಂದು ಸ್ಮರಿಸಿಕೊಂಡರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಬಿ.ಎಲ್.ವೇಣು, ಇಳಿ ವಯಸ್ಸಿನಲ್ಲಿಯೂ ಇನ್ನು ಲವಲವಿಕೆಯಿಂದ ಇದ್ದೇನೆಂದರೆ ಅದಕ್ಕೆ ಬರವಣಿಗೆಯೇ ಮೂಲಕ ಕಾರಣ. ತೋಟಗಾರಿಕೆ ಇಲಾಖೆ ಪಲಪುಷ್ಪ ಪ್ರದರ್ಶನದಲ್ಲಿ ನನ್ನ ಸಾಹಿತ್ಯ ಕೃತಿಗಳ ಪ್ರತಿಕೃತಿ ನಿರ್ಮಿಸಿ ಅಪಾರವಾದ ಗೌರವವನ್ನು ಸೂಚಿಸಿದ್ದು, ನನಗೆ ತೃಪ್ತಿ ತಂದಿದೆ. ನನ್ನ ಬರವಣಿಗೆಗೆ ಸಹಕಾರ ನೀಡಿದ ಇತಿಹಾಸ ಸಂಶೋಧಕ ಡಾ.ಲಕ್ಷ್ಮಣ ತೆಲಗಾವಿರವರನ್ನು ನನ್ನ ಜೀವನದಲ್ಲಿ ಮರೆಯುವುದಿಲ್ಲ ಎಂದು ನೆನಪಿಸಿಕೊಂಡರು.
ಜಿಲ್ಲಾ ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ ಖ್ಯಾತ ಕಾದಂಬರಿಕಾರರಾಗಿ ನಾಡಿನಾದ್ಯಂತ ಗುರುತಿಸಿಕೊಂಡಿರುವ ಸಾಹಿತಿ ಡಾ.ಬಿ.ಎಲ್.ವೇಣುರವರು ನೂರುಕಾಲ ಬಾಳಿ ಇನ್ನು ಹೆಚ್ಚಿನ ಸಾಹಿತ್ಯಗಳನ್ನು ಹೊರ ಸೂಸಬೇಕಾಗಿದೆ. ಅದಕ್ಕಾಗಿ ಭಗವಂತ ಆರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಿ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದರು.
ಈ ವೇಳೆ ಇತಿಹಾಸ ಸಂಶೋಧಕ ಡಾ.ಎನ್.ಎಸ್.ಮಹಾಂತೇಶ್, ಜಿ.ಪ್ರಹ್ಲಾದ್, ಪತ್ರಕರ್ತ ಮೇಘಗಂಗಾಧರನಾಯ್ಕ, ಪ್ರಹ್ಲಾದ್ ಈ ಸಂದರ್ಭದಲ್ಲಿ ಹಾಜರಿದ್ದು. ಜನ್ಮದಿನದ ಶುಭ ಕೋರಿದರು.