ನಕ್ಷತ್ರ ಆಮೆ ಸಾಗಣೆ: ಇಬ್ಬರು ಆರೋಪಿಗಳ ಬಂಧನ

| Published : Oct 16 2024, 12:39 AM IST

ಸಾರಾಂಶ

ಬೈಕ್‌ನಲ್ಲಿ ಅಕ್ರಮವಾಗಿ ನಕ್ಷತ್ರ ಆಮೆ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕೊಳ್ಳೇಗಾಲ ಸಿಐಡಿ ಅರಣ್ಯ ಸಂಚಾರಿ ಠಾಣಾ ಪೊಲೀಸರು ಜೀವಂತ ನಕ್ಷತ್ರ ಆಮೆ ರಕ್ಷಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಬೈಕ್‌ನಲ್ಲಿ ಅಕ್ರಮವಾಗಿ ನಕ್ಷತ್ರ ಆಮೆ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕೊಳ್ಳೇಗಾಲ ಸಿಐಡಿ ಅರಣ್ಯ ಸಂಚಾರಿ ಠಾಣಾ ಪೊಲೀಸರು ಜೀವಂತ ನಕ್ಷತ್ರ ಆಮೆ ರಕ್ಷಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಕೋಡಿವೂರು ಗ್ರಾಮದ ಕಾಳಪ್ಪ ರಾಮಪ್ಪ ಮತ್ತು ತಮಿಳುನಾಡಿನ ಮಲ್ಲಿಗೆ ಬಾವಿ ದೊಡ್ಡಿಯ ಹಾಲಿ ವಾಸ, ಬೆಂಗಳೂರಿನ ಎಇಸಿಎಸ್ ಬಡಾವಣೆಯ ಮುತ್ತರಾಜು ಬಂಧಿತ ಆರೋಪಿಗಳು.

ಆರೋಪಿಗಳಿಬ್ಬರು ಕಾಲೇಜು ಬ್ಯಾಗ್‌ನಲ್ಲಿ ಜೀವಂತ ನಕ್ಷತ್ರ ಆಮೆಯನ್ನು ಸ್ಲೈಂಡರ್ ಬೈಕ್ ಸಂಖ್ಯೆ ಕೆಎಂ 05, ಕೈಡಬ್ಲು 6450ನಲ್ಲಿ ಸಾಗಣೆ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಎಳೆ ಪಿಳ್ಳಾರಿ ಸಮೀಪದ ಕೊಳದ ಬಳಿ ಪಿಎಸ್ಸೈ ವಿಜಯರಾಜ್, ಮುಖ್ಯ ಪೇದೆಗಳಾದ ರಾಮಚಂದ್ರ, ಬಸವರಾಜು, ಸ್ವಾಮಿ, ಲತಾ, ಚಾಲಕ ಪ್ರಭಾಕರ್ ಕಾರ್ಯಾಚರಣೆ ನಡೆಸಿ ಬಂಧಿಸಿದ ಬಳಿಕ ಪ್ರಕರಣ ದಾಖಲಿಸಿ ಆರೋಪಿಗಳನ್ನು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ನ್ಯಾಯಾಧೀಶರು ಅ.27ರತನಕ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಆಮೆಗಳ ಸಾಗಣೆ ಏಕೆ? ನಕ್ಷತ್ರ ಆಮೆಗಳನ್ನು ಹಿಡಿದು ಅಕ್ರಮ ಮಾರಾಟ ಮಾಡಿದರೆ ಹೆಚ್ಚು ಹಣ ಗಳಿಸಬಹುದೆಂಬ ಆಸೆಯಿಂದ ಪ್ರಭಾವಿತರಾದ ಹಲವರು ಆರೋಪಿಗಳಾಗುತ್ತಿರುವುದು ಅಚ್ಚರಿ ಮತ್ತು ಆತಂಕಕಾರಿ ಸಂಗತಿಯಾಗಿದೆ. ನಕ್ಷತ್ರ ಆಮೆಯನ್ನು ಮನೆಯಲ್ಲಿಟ್ಟು ಪೂಜಿಸಿದರೆ ಹೆಚ್ಚು ಐಶ್ವರ್ಯವಂತರಾಗಬಹುದು ಎಂಬ ಕಾರಣಕ್ಕೆ ಮತ್ತು ವಾಮಾಚಾರಕ್ಕಾಗಿ ನಕ್ಷತ್ರ ಆಮೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಈ ಮೂಢನಂಬಿಕೆಯನ್ನು ನಂಬಿದ ಹಲವರು ಹಣದಾಸೆಗಾಗಿ ನಕ್ಷತ್ರ ಆಮೆ ಇರುವಿಕೆ ಪತ್ತೆ ಹಚ್ಚಿ ಸಾಗಣೆ ವೇಳೆ ಸಿಕ್ಕಿಬಿದ್ದಿ ಅನೇಕ ಘಟನೆಗಳಿವೆ. ನಕ್ಷತ್ರ ಆಮೆ ವನ್ಯಜೀವಿ ಕಾಯ್ದೆಯಡಿ ಒಳಪಡುವ ಹಿನ್ನೆಲೆಯಲ್ಲಿ ಯಾರು ಮೂಢನಂಬಿಕೆಗೆ ಕಿವಿಗೊಡಬಾರದು, ಬಲಿ ನೀಡಲು ಅಥವಾ ಶ್ರೀಮಂತರಾಗುತ್ತೆವೆಂಬ ನಂಬಿಕೆಯಿಂದಾಗಿ ಅಕ್ರಮ ಸಾಗಣೆ ಕಾನೂನು ಉಲ್ಲಂಘನೆಯಾಗಿದೆತೆಂದು ಪೊಲೀಸರು ತಿಳಿಸಿದ್ದಾರೆ.