ಸಾರಾಂಶ
ಕೊಟ್ಟೂರು: ಸರ್ಕಾರಿ ಶಾಲೆಗಳತ್ತ ಮಕ್ಕಳು ಮತ್ತು ಪೋಷಕರನ್ನು ಆಕರ್ಷಿಸಲು ಸರ್ಕಾರ ಆರಂಭಿಸಿದ ಎಲ್‌ಕೆಜಿ, ಯುಕೆಜಿ ತರಗತಿ ಜತೆ ಇಂಗ್ಲೀಷ್ ಮಾಧ್ಯಮವನ್ನು ಶಾಲೆಯಲ್ಲಿ ಅಳವಡಿಸಿಕೊಳ್ಳಲು ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗಚ್ಚಿನಮಠ ಶಾಲೆ, ತಾಲೂಕಿನ ಚಿರಿಬಿ ಶಾಲೆಗೆ ಜಿಲ್ಲಾ ಶಿಕ್ಷಣ ಇಲಾಖೆ ಸೂಚಿಸಿದೆ.
ಪ್ರಸಕ್ತ ವರ್ಷದಿಂದಲೇ ಈ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಅಳವಡಿಸಿಕೊಳ್ಳಲು ಕ್ರಮ ಕೈಗೊಂಡಿದೆ. ಮಕ್ಕಳಿಗೆ ಮಾಹಿತಿ ಸಂವಹನ (ಐಟಿ), ಕೃಷಿ ಸೇರಿದಂತೆ ಇತರ ವಿಷಯಗಳ ಕುರಿತು ತರಬೇತಿಯನ್ನು ಬೆಂಗಳೂರಿನಿಂದಲೇ ನೀಡಲು ಕ್ರಮ ಕೈಗೊಳ್ಳಲಾಗಿದೆ. ಈ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿಯನ್ನು ಪೋಷಕರಿಗೆ ಶಿಕ್ಷಕರು ತಿಳಿಸಬೇಕು. ಹೆಚ್ಚಿನ ಶಾಲಾ ದಾಖಲಾತಿ ಮಾಡಿಸಿಕೊಳ್ಳುವಂತೆ ಶಿಕ್ಷಕರಿಗೆ ಸೂಚಿಸಿದೆ. ಮನೆ ಮನೆಗೆ ಭೇಟಿ ಅಭಿಯಾನ ನಡೆಸಲು ಸಹ ಸೂಚಿಸಲಾಗಿದೆ. ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ತಾಲೂಕಿನ ಈ ಎರಡು ಶಾಲೆಗಳಲ್ಲಿ ಪ್ರಯೋಗಾರ್ಥವಾಗಿ ಪ್ರಾರಂಭಿಸಲಿದೆ.ಕೊಟ್ಟೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಚ್ಚಿನಮಠದಲ್ಲಿ 320ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇದೀಗ ಎಲ್‌ಕೆಜಿ ಯುಕೆಜಿ ಆರಂಭಗೊಂಡಿರುವುದು ಶಾಲೆಯ ಪ್ರವೇಶ ದಾಖಲಾತಿ ಹೆಚ್ಚಿಸಲು ಖಂಡಿತ ಕಾರಣವಾಗುತ್ತದೆ. ಈ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳು ಮುಂದಿನ 5 ವರ್ಷಗಳವರೆಗೂ ಮುಂದುವರೆಯಲಿವೆ. ಯೋಜನೆಗೆ ಕೆಕೆಆರ್‌ಡಿಬಿಯ ಅನುದಾನದ ನೆರವು ಸಿಗಲಿದೆ. ಖಾಸಗಿ ಶಾಲೆಯಂತೆ ಪ್ರತೀ ವಿದ್ಯಾರ್ಥಿಗಳ ಬಗ್ಗೆ ಗಮನ ಹರಿಸಿ ಅವರಲ್ಲಿನ ಕುತೂಹಲಕ್ಕೆ ಉತ್ತೇಜನ ನೀಡುವ ಕೆಲಸವನ್ನು ಶಿಕ್ಷಕರು ಕೈಗೊಂಡಿದ್ದಾರೆ.
ಕೊಟ್ಟೂರಿನ ಗಚ್ಚಿನಮಠ, ಚಿರಿಬಿ ಸ.ಹಿ.ಪ್ರಾ. ಶಾಲೆಗಳಲ್ಲಿ ಪ್ರಸಕ್ತ ವರ್ಷದಿಂದ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲಾಗಿದೆ. ಇಂಗ್ಲೀಷ್ ಮಾದ್ಯಮವನ್ನು ಸಹ ಈ ಶಾಲೆಗಳಲ್ಲಿ ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತೀ ಸರ್ಕಾರಿ ಶಾಲೆಯಲ್ಲೂ ಯೋಜನೆ ಜಾರಿಗೆ ಯೋಜನೆ ರೂಪಿಸಿದ್ದೇವೆ ಎನ್ನುತ್ತಾರೆ ಕೊಟ್ಟೂರು -ಕೂಡ್ಲಿಗಿ ಬಿಇಒ ಪದ್ಮನಾಭ ಕರ್ಣಂ.ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲು ಮುಂದಾಗಿರುವುದು ಮಕ್ಕಳನ್ನು ಈ ಶಾಲೆಗಳಿಗೆ ಸೇರಿಸಲು ಉತ್ತೇಜನ ನೀಡಿದೆ. ಜತೆಗೆ ದುಬಾರಿಯಾಗಿದ್ದ ಇಂಗ್ಲೀಷ್ ಮಾಧ್ಯಮ ಕಲಿಯಲು ಬಡ, ಮಧ್ಯಮ ವರ್ಗದ ಮಕ್ಕಳಿಗೆ ನೆರವಾಗಿದೆ ಎನ್ನುತ್ತಾರೆ ಕೊಟ್ಟೂರು ನಾಗರಿಕ ಚಂದ್ರಶೇಖರ.