ಸಾರಾಂಶ
ನಾರಾಯಣ ಮಾಯಾಚಾರಿ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳದೇಶದ ಅಭಿವೃದ್ಧಿಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಇದೇ ಕಾರಣಕ್ಕೆ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಪ್ರತಿ ವರ್ಷ ಕೋಟ್ಯಂತರ ರುಪಾಯಿ ಅನುದಾನ ನೀಡುತ್ತಿದೆ. ಅದರಲ್ಲೂ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸಲು ಪಣ ತೊಟ್ಟಿ ನಿಂತಿವೆ. ಹೀಗಿದ್ದರೂ ಸರ್ಕಾರಿ ಶಾಲೆಗಳು ಇನ್ನೂ ಅಭಿವೃದ್ಧಿಯಾಗದೇ ದುರಸ್ತಿಯೊಂದಿಗೆ ಮೂಲ ಸೌಕರ್ಯಗಳಿಂದ ವಂಚಿತಗೊಂಡಿವೆ. ಇದೇ ಕಾರಣಕ್ಕೆ ಮಕ್ಕಳ ಪಾಲಕರು ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಿದ್ದಾರೆ. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿಯ ರಾಜ್ಯ ಪ್ರಥಮ ಸ್ಥಾನ ಪಡೆದುಕೊಂಡಿರುವ ಕಾರಣಕ್ಕೆ ಮಕ್ಕಳ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಮನಸು ಮಾಡುತ್ತಿದ್ದಾರೆ. ಆದರೆ, ಸರ್ಕಾರಿ ಶಾಲೆಗಳ ಅಗತ್ಯ ಕೊಠಡಿಗಳ ವ್ಯವಸ್ಥೆ ಇಲ್ಲ. ಇದ್ದರೇ ಚಾವಣಿ ಕುಸಿದು ಬಿದ್ದಿವೆ. ಮಳೆಗಾಲ ಬಂದರೆ ಸೋರುವ ಶಾಲೆಗಳು ಇರುವುದರಿಂದ ಈ ಶಾಲೆಗಳತ್ತ ಪೋಷಕರು ಮನಸು ಮಾಡುತ್ತಿಲ್ಲ.
ಈಗಾಗಲೇ ತಾಲೂಕಿನಲ್ಲಿ ೨೬೧ ಸರ್ಕಾರಿ ಶಾಲೆಗಳಿವೆ. ಇದರಲ್ಲಿ ೬೮ ಸಾವಿರಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಹೊಂದಿದ್ದು ಅದರಂತೆ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳ ಹಾಜರಾತಿ ಏರಿಕೆಯಾಗುತ್ತಿದೆ. ಇದರಿಂದ ಮಕ್ಕಳ ಸಂಖ್ಯಾನುಸಾರ ಇನ್ನೂ ೨೫೬ ಕೊಠಡಿಗಳ ನಿರ್ಮಾಣ, ಈಗಿರುವ ಹಳೆಯ ೩೧೭ ಶಾಲಾ ಕೊಠಡಿಗಳು ರಿಪೇರಿ, ೧೨೩ ಶೌಚಾಲಯಗಳು, ೩೦ ಶಾಲೆಗಳಿಗೆ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಬೇಕಿದೆ. ೬೮ ಶಾಲೆಗಳಿಗೆ ಆಟದ ಮೈದಾನದ ಅವಶ್ಯಕತೆ ಇದೆ. ೧೭ ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಬೇಕಿದೆ. ಅಂದಾಜು ೩೦೦ಕ್ಕೂ ಹೆಚ್ಚು ಕಾಯಂ ಶಿಕ್ಷಕರ ಅಗತ್ಯತೆ ಇದೆ.ಶೌಚಾಲಯ, ನೀರಿನ ವ್ಯವಸ್ಥೆ ಆಗಬೇಕು:
ಈಗಾಗಲೇ ತಾಲೂಕಿನ ಆಲೂರು, ಬ.ಸಾಲವಾಡಗಿ, ಬಳಬಟ್ಟಿ, ಇಂಗಳಗೇರಿ, ಕೋಳೂರು, ಲಿಂಗದಳ್ಳಿ, ಮಿಣಜಗಿ, ಮುದ್ದೇಬಿಹಾಳ ಪಟ್ಟಣ, ಮೂಕಿಹಾಳ, ನಾಲತವಾಡ, ಪೀರಾಪೂರ, ತಂಗಡಗಿ, ಯಲಗೂರ, ರೂಢಗಿ, ಉರ್ದು ಶಾಲೆ ಮುದ್ದೇಬಿಹಾಳ, ತುಂಬಗಿ ಮಡಿಕೇಶ್ವರ, ಮಾದಿನಾಳ, ಬಿದರಕುಂದಿ ಸೇರಿದಂತೆ ಸರ್ಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆ ಸೇರಿ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಬಹುತೇಕ ಶಾಲೆಗಳಲ್ಲಿ ಕೊಠಡಿಗಳ ದುರಸ್ತಿ ಕಾರ್ಯ ಮಾಡಬೇಕಿದೆ. ಕೆಲವು ಶಾಲೆಗಳಿಗೆ ಹೊಸದಾಗಿ ಕೊಠಡಿ ಹಾಗೂ ಮೂಲಭೂತ ಸೌಕರ್ಯಗಳನ್ನು ಮತ್ತು ಮುಖ್ಯವಾಗಿ ಶೌಚಾಲಯ ನಿರ್ಮಿಸುವ ಕುಡಿಯುವ ನೀರಿನ ಸೌಲಭ್ಯ ಒದಗಿಸುವು ಅಗತ್ಯವಾಗಿದೆ.ಗೆದ್ದಲಮರಿ ಗ್ರಾಮದ ಸರ್ಕಾರಿ ಶಾಲೆಗಳು ಎರಡಿದ್ದರೂ ಹಾಜರಾತಿಯಲ್ಲಿ ಮಾತ್ರ ಯಾವುದೇ ಕುಂಠಿತಗೊಂಡಿಲ್ಲ. ಹೀಗಾಗಿ ಸಂಪೂರ್ಣ ಬಿದ್ದು ಹಾಳಾಗಿ ಹೋಗುತ್ತಿರುವ ಸರ್ಕಾರಿ ಶಾಲೆಯ ಜೀರ್ಣೋದ್ಧಾರ ಕಾರ್ಯ ಪ್ರಾರಂಭಿಸಿ ಇಲ್ಲಿನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕಿದೆ.
ಇತ್ತ ಜನಪ್ರತಿನಿಧಿಗಳು ಶಾಲಾ ಸುಧಾರಣೆ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಕಾರಣ ಪಾಲಕರು ಖಾಸಗಿ ಶಾಲೆಗಳ ಮೊರೆ ಹೋಗುವಂತಾಗಿದೆ. ಇನ್ನಾದರೂ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಂಡು ತಾಲೂಕಿನಲ್ಲಿ ದುರಸ್ತಿಯಲ್ಲಿ ಇರುವ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಬೇಕು ಎಂದು ಶಿಕ್ಷಣ ಪ್ರೇಮಿಗಳ ಒತ್ತಾಯವಾಗಿದೆ.-----ಕೋಟ್
ತಾಲೂಕಿನಲ್ಲಿರುವ ಸರ್ಕಾರಿ ಶಾಲೆಗಳ ಕೊಠಡಿ, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಅದರಲ್ಲಿ ಕೆಲವು ಕ್ರಮಕೈಗೊಳ್ಳಲಾಗಿದೆ. ಇನ್ನೂ ಕೆಲವು ಸಮಸ್ಯೆಗಳು ಹಾಗೆ ಉಳಿದಿವೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಒಂದುವರ್ಷ ಮಾತ್ರ ಗತಿಸಿದೆ. ಅಷ್ಟರಲ್ಲಿಯೇ ಈ ಲೋಕಸಭಾ ಚುನಾವಣೆ ಬಂದು ನೀತಿ ಸಂಹಿತೆಯಿಂದಾಗಿ ಸರ್ಕಾರ ಯಾವುದೇ ತುರ್ತು ಹೊಸ ಕಾಮಗಾರಿಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಮುಂದಿನ ವಾರದೊಳಗೆ ನೀತಿ ಚುನಾವಣಾ ಸಂಹಿತೆ ಮುಕ್ತಾಯಗೊಳ್ಳುತ್ತದೆ. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳು ಉಳಿಯಬೇಕು ಮತ್ತು ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚಳ ಮಾಡಬೇಕು ಎನ್ನುವ ಸದುದ್ದೇಶದಿಂದ ಹಲವು ಯೋಜನೆ ಹಾಕಿಕೊಳ್ಳಲಾಗುವುದು.-ಸಿ.ಎಸ್.ನಾಡಗೌಡ(ಅಪ್ಪಾಜಿ) ಶಾಸಕರು ಹಾಗೂ ಅಧ್ಯಕ್ಷರು ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮ ಬೆಂಗಳೂರು
---೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಮ್ಮ ತಾಲೂಕಿನ ಮಕ್ಕಳು ಉತ್ತಮ ಸಾಧನೆ ಮಾಡಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಶಿಕ್ಷಕರ ಕೊರತೆ ಇದೆ. ಬಹುತೇಕ ಶಾಲೆಗಳ ದುರಸ್ತಿ ಸೇರಿದಂತೆ ಹೊಸ ಶಾಲೆಗಳ ನಿರ್ಮಾಣ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ನೀಗಿಸಬೇಕು ಎಂದು ಸಮಗ್ರ ಮಾಹಿತಿಯನ್ನು ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ನೀಡಲಾಗಿದೆ. ಆದರೆ, ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೇ ಆ ಮಾರ್ಗದಲ್ಲಿ ಶಿಕ್ಷಣ ಇಲಾಖೆ ಮುಂದುವರೆಯಲಿದೆ.
-ಬಿ.ಎಸ್.ಸಾವಳಗಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮುದ್ದೇಬಿಹಾಳ.