ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಜಯಂತಿ ನಗರದ ಶ್ರೀಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜು ವಿಭಾಗದಿಂದ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಲಾನ್ ಟೆನ್ನಿಸ್ ಪಂದ್ಯಾವಳಿ ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ಹಾಗೂ ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಉತ್ತರ ತಂಡಗಳು ಪ್ರಥಮ ಸ್ಥಾನಗಳಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು.ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಲಾನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಬಾಲಕರು ಹಾಗೂ ಬಾಲಕಿಯರ ಪ್ರತ್ಯೇಕ ಪಂದ್ಯಾವಳಿ ನಡೆಸಿದರು. ಬಾಲಕರ ವಿಭಾಗದಿಂದ 13 ತಂಡ ಹಾಗೂ ಬಾಲಕಿಯರ ವಿಭಾಗದ 8 ತಂಡಗಳು ಪಾಲ್ಗೊಂಡಿದ್ದವು.
ಬಾಲಕಿಯರ ವಿಭಾಗದಲ್ಲಿ ಅಂತಿಮವಾಗಿ ಬೆಂಗಳೂರು ಉತ್ತರ ಹಾಗೂ ಮೈಸೂರು ತಂಡಗಳು ಮುಖಾಮುಖಿಯಾದವು. ಎರಡು ತಂಡಗಳು ಸಮಬಲದಿಂದ ಹೋರಾಟ ನಡೆಸಿ ಅಂತಿಮವಾಗಿ ಬೆಂಗಳೂರು ಉತ್ತರ ತಂಡ ಗೆಲುವು ಸಾಧಿಸಿ ಪ್ರಥಮ ಸ್ಥಾನ ಪಡೆದುಕೊಂಡಿತು. ಮೈಸೂರು ತಂಡ ಸೋತು ದ್ವಿತೀಯ ಸ್ಥಾನ ಪಡೆದುಕೊಂಡಿತು.ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣಿ ಮತ್ತು ಮಂಡ್ಯ ತಂಡಗಳು ಸೆಣಸಾಟ ನಡೆಸಿ ಅಂತಿಮವಾಗಿ ಬೆಂಗಳೂರು ದಕ್ಷಿಣ ತಂಡ ಗೆಲುವು ಸಾಧಿಸಿ ಪ್ರಥಮ ಸ್ಥಾನಗಳಿಸಿತು. ಸೋತ ಮಂಡ್ಯ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ವಿಜೇತ ತಂಡಗಳಿಗೆ ಟ್ರೋಪಿ, ಮೆಡಲ್, ಪ್ರಮಾಣ ಪತ್ರ ನೀಡಿ ಅಭಿನಂಧಿಸಿದರು.
ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಲಾನ್ ಟೆನ್ನಿಸ್ ಪಂದ್ಯಾವಳಿದಲ್ಲಿ ವಿಜೇತರಾದ ತಂಡಗಳಿಗೆ ಪದವಿ ಪೂರ್ವ ಕಾಲೇಜುಗಳ ಉಪನಿರ್ದೇಶಕ ಚಲುವಯ್ಯ ಹಾಗೂ ಶ್ರೀಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕಾರ್‍ಯದರ್ಶಿ ಎಂ.ಪಂಚಲಿಂಗೇಗೌಡ ಟ್ರೋಪಿ ವಿತರಣೆ ಮಾಡಿದರು.ಉಪ ನಿರ್ದೇಶಕ ಚಲುವಯ್ಯ ಮಾತನಾಡಿ, ಟೆನ್ನಿಸ್ ಪಂದ್ಯಾವಳಿಯಲ್ಲಿ ಅಂತಿಮವಾಗಿ ಎರಡು ವಿಭಾಗದಲ್ಲೂ ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ತಂಡಗಳು ಗೆಲುವು ಸಾಧಿಸಿವೆ. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ ಸೋತ ತಂಡಗಳು ಕುಗ್ಗದೆ ಗೆದ್ದ ತಂಡಗಳು ಹಿಗ್ಗದೆ ಮುನ್ನಡೆಯಬೇಕು ಸೋಲೆ ಗೆಲುವೆ ಎಂಬಂತೆ ಮುನ್ನಡೆಯಬೇಕು ಎಂದರು.
ಎಂ.ಪಂಚಲಿಂಗೇಗೌಡ ಮಾತನಾಡಿ, ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಲಾನ್ ಟೆನ್ನಿಸ್ ಪಂದ್ಯಾವಳಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇದಕ್ಕೆ ಸಹಕರಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.ಈ ವೇಳೆ ಆಡಳಿತಾಧಿಕಾರಿ ಪಿ.ಅಕ್ಷಯ್, ಪ್ರಾಂಶುಪಾಲೆ ಸೌಮ್ಯ, ಸಂಯೋಜಕ ಗುರುಸ್ವಾಮಿ, ನಾಗರಾಜು, ಉಪನ್ಯಾಸಕ ಚಂದ್ರಶೇಖರ್, ಮಾದೇಶ್, ಚಲುವೇಗೌಡ, ಮರೀಗೌಡ, ಸಿದ್ದರಾಜು, ಎಲೆಕೆರೆ ಚಂದ್ರಶೇಖರ್ ಇದ್ದರು.,