ಸಾರಾಂಶ
ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು ಗಣಿ ಇಲಾಖೆ, ಕಂದಾಯ, ಪೊಲೀಸ್ ಇಲಾಖೆ ಸೇರಿದಂತೆ ಅನೇಕ ಅಧಿಕಾರಿಗಳು ನದಿ ದಡದ ಹಳ್ಳಿಗಳಿಗೆ ದಾಳಿ ನಡೆಸಿ ಕಬ್ಬಿಣದ ತೆಪ್ಪ ಹಾಗೂ ಬಿದಿರಿನ ತೆಪ್ಪಗಳನ್ನು ನಾಶಪಡಿಸಿದ್ದಾರೆ.
ಗುತ್ತಲ: ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು ಗಣಿ ಇಲಾಖೆ, ಕಂದಾಯ, ಪೊಲೀಸ್ ಇಲಾಖೆ ಸೇರಿದಂತೆ ಅನೇಕ ಅಧಿಕಾರಿಗಳು ನದಿ ದಡದ ಹಳ್ಳಿಗಳಿಗೆ ದಾಳಿ ನಡೆಸಿ ಕಬ್ಬಿಣದ ತೆಪ್ಪ ಹಾಗೂ ಬಿದಿರಿನ ತೆಪ್ಪಗಳನ್ನು ನಾಶಪಡಿಸಿದ್ದಾರೆ.
ತಾಲೂಕಿನ ತುಂಗಭದ್ರಾ ಹಾಗೂ ವರದಾ ನದಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಯಾವುದೇ ಅಧಿಕಾರಿಗಳ ಭಯವಿಲ್ಲದೇ, ಕೆಲ ಅಧಿಕಾರಿಗಳ ಶಾಮೀಲಿನಿಂದ ಸಾಗುತ್ತಿರುವ ಬಗ್ಗೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಅಕ್ರಮ ಮರಳು ಗಣಿಗಾರಿಕೆ ನಿಲ್ಲಿಸಿ ಕ್ರಮ ಕೈಗೊಳ್ಳುವಂತೆ ಆದೇಶದ ಅನ್ವಯ ಗಣಿ ಇಲಾಖೆಯ ಹಾವೇರಿ ಹಾಗೂ ವಿಜಯನಗರ ಜಿಲ್ಲೆಯ ಅಧಿಕಾರಿಗಳು ಜಂಟಿಯಾಗಿ ಅಕ್ರಮ ನಡೆಯುವ ನದಿ ದಡದ ಹಳ್ಳಿಗಳಿಗೆ ದಿಡೀರನೆ ಆಗಮಿಸಿದ್ದಾರೆ.ಸಮೀಪದ ತೆರೆದಹಳ್ಳಿ ಗ್ರಾಮದ ನದಿ ದಡದಲ್ಲಿ 5 ಬಿದಿರಿನ ತೆಪ್ಪ ಹಾಗೂ 3 ಕಬ್ಬಿಣದ ತೆಪ್ಪಗಳನ್ನು ಜೆಸಿಬಿ ಯಂತ್ರದ ಮೂಲಕ ನಾಶಪಡಿಸಿದ್ದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ‘ಕನ್ನಡಪ್ರಭ ಪತ್ರಿಕೆ’ಗೆ ಮಾಹಿತಿ ನೀಡಿದ್ದಾರೆ.
ದಾಳಿಯಲ್ಲಿ ಹಾವೇರಿ ಜಿಲ್ಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಶಬ್ಬೀರಅಹ್ಮದ ದಿಡಗೂರ, ಕುಮಾರ ನಾಯ್ಕ, ವಿಜಯನಗರ ಜಿಲ್ಲೆಯ ಹಿರಿಯ ಭೂ ವಿಜ್ಞಾನಿ ಕಿರಣ, ಬಳ್ಳಾರಿ ಜಿಲ್ಲೆಯ ಹಿರಿಯ ಭೂ ವಿಜ್ಞಾನಿ ಪ್ರವೀಣ ಜೋಷಿ ಸೇರಿದಂತೆ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿದ್ದರು.