ಹೊಳಲ್ಕೆರೆಯಲ್ಲಿ ನಡೆಯಲಿರುವ ಸಿದ್ದರಾಮೇಶ್ವರರ ಜಯಂತಿ ಆಚರಣೆ ಕುರಿತು ಶಾಸಕ ಎಂ.ಚಂದ್ರಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಶ್ರೀಗುರು ಸಿದ್ದರಾಮೇರರ 853ನೇ ಜಯಂತಿ ಕಾರ್ಯಕ್ರಮವನ್ನು ಜ.14 ಮತ್ತು 15 ರಂದು ಹೊಳಲ್ಕೆರೆಯಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ಇಲ್ಲಿನ ಪತ್ರಕರ್ತರ ಭವನದಲ್ಲಿ ಶುಕ್ರವಾರ ಈ ಕುರಿತು ಮಾಹಿತಿ ನೀಡಿದ ಅವರು, ಪಟ್ಟಣದ ವಾಲ್ಮೀಕಿ ಮೈದಾನದಲ್ಲಿ ರಾಜ್ಯಮಟ್ಟದಲ್ಲಿ ಜಯಂತಿಯ ಸಂಘಟಿಸಲಾಗಿದೆ. ಎರಡು ದಿನಗಳ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ 10 ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಸಭಾ ಕಾರ್ಯಕ್ರಮಕ್ಕೆ 40 ಅಡಿ ಉದ್ದ ಹಾಗೂ 160 ಅಡಿ ಉಗಲದ ವೇದಿಕೆ ಸಜ್ಜು ಗೊಳಿಸಲಾಗಿದೆ. 30 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ನಾಡಿನ ವಿವಿಧ ಮೂಲೆಗಳಿಂದ ಆಗಮಿಸುವ ಹರಗುರು ಚರಮೂರ್ತಿಗಳು ಕುಳಿತುಕೊಳ್ಳುವ ನಿಟ್ಟಿನಲ್ಲಿ ವಿಶಾಲವಾದ ಜಾಗ ಸೃಷ್ಟಿಸಲಾಗಿದೆ. ಎರಡು ದಿನಗಳ ಕಾಲ ಜಯಂತಿ ಆಚರಣೆಗೆ ಮುಂಜಾನೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.

ಜ.14 ರಂದು ಬೆ.7-30ಕ್ಕೆ ಕುಪ್ಪೂರು ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮೀಜಿ ಮತ್ತು ನೊಳಂಬ ಲಿಂಗಾಯಿತ ಸಂಘದ ಅಧ್ಯಕ್ಷ ಬಿ.ಕೆ.ಚಂದ್ರಶೇಖರ್ ಧ್ವಜಾರೋಹಣ ನೆರವೇರಿಸುವರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜಯಂತಿ ಆಚರಣೆ ಉದ್ಘಾಟಿಸಲಿದ್ದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚರ‍್ಯ ಸ್ವಾಮೀಜಿ, ಕೆರೆಕೋಡಿ ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪುರ ದೇಶಿ ಕೇಂದ್ರ ಸ್ವಾಮೀಜಿ, ಡಾ.ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ, ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಾನಂದ ಪುರಿ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ, ಹರಿಹರ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಸಚಿವ ಈಶ್ವರ ಖಂಡ್ರೆ ನೊಳಂಬ ಇತಿಹಾಸ ಹಾಗೂ ಸಂಘದ ಸಾಕ್ಷ್ಯ ಚಿತ್ರ ಹಾಗೂ ಮಾಜಿ ಸಂಸದ ಬಸವರಾಜ್ ನೊಳಂಬ ಸಂಚಿಕೆ ಬಿಡುಗಡೆ ಮಾಡುವರು. ಅಂದು ಮಧ್ಯಾಹ್ನ 2.30ಕ್ಕೆ ನಡೆಯುವ ಸಾಹಿತ್ಯ ಗೋಷ್ಠಿಯಲ್ಲಿ ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಸದ ಗೋವಿಂದ ಕಾರಜೋಳ ಗೋಷ್ಠಿ ಉದ್ಘಾಟಿಸುವರು. ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಕತ್ತಿಗೆ ಚನ್ನಪ್ಪ ಅವರಿಗೆ ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ಅವರು, ಸಿದ್ದರಾಮ ಸಾಹಿತ್ಯ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಮಹದೇವ ಬಿದರಿ ಆಗಮಿಸಲಿದ್ದಾರೆ.

ಜ.15 ರಂದು ಬೆ.7-30 ಕ್ಕೆ ಮೈಸೂರು ಬಸವಜ್ಞಾನ ಮಂದಿರದ ಡಾ.ಮಾತೆ ಬಸವಾಂಜಲಿ ಅವರ ನೇತೃತ್ವದಲ್ಲಿ ಲಿಂಗಧಾರಣ ಕಾರ‍್ಯಕ್ರಮ ನಡೆಯಲಿದೆ. ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಬಂಜಾರ ಗುರುಪೀಠದ ಸೇವಾಲಾಲ್ ಸ್ವಾಮೀಜಿ ಸಾನಿಧ್ಯ ವಹಿಸುವರು. ಇದೇ ಸಂದರ್ಭದಲ್ಲಿ ಆಯೋಜಿಸಲಾದ ಕೃಷಿ ಗೋಷ್ಠಿಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸುವರು. ಶಾಸಕ ಜ್ಯೋತಿ ಗಣೇಶ್ ಅಧ್ಯಕ್ಷತೆ ವಹಿಸುವರು. ಸಚಿವ ಎಂ.ಬಿ.ಪಾಟೀಲ್ ಅವರು, ಸಮತ ಯೋಗಿ ಸಿದ್ದರಾಮ ಹಾಗೂ ಸಚಿವೆ ಲಕ್ಷಿ ಹೆಬ್ಬಾಳ್ಕರ್ ಅವರು ಸಿದ್ದರಾಮ ಸಂಸ್ಕೃತ ಕೃತಿಗಳನು ಬಿಡುಗಡೆ ಮಾಡುವರು.

ಮಧ್ಯಾಹ್ನ 2-30ಕ್ಕೆ ಜರುಗಲಿರುವ ಸಮಾರೋಪದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ‍್ಯ ಸ್ವಾಮೀಜಿ, ಮುರುಘಾಮಠದ ಬಸವಕುಮಾರ ಸ್ವಾಮೀಜಿ, ಕೆಲ್ಲೋಡು ಕಾಗಿನೆಲೆ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಸಿಎಂ ಸಿದ್ದರಾಮಯ್ಯ ಸಮಾರೋಪ ಭಾಷಣ ಮಾಡುವರು. ಶಾಸಕ ಕೆ.ಷಡಾಕ್ಷರಿ ಅಧ್ಯಕ್ಷತೆ ವಹಿಸುವರು. ಸಚಿವ ಡಿ.ಸುಧಾಕರ್ ನೊಳಂಬರ ಗ್ರಂಥಾಕಥನ ಹಾಗೂ ಮಾಜಿ ಸಚಿವ ಎಚ್.ಆಂಜನೇಯ ಸಿದ್ಧರಾಮರ ವಚನಗಳ ಧ್ವನಿ ಮುದ್ರಿಕೆ ಬಿಡುಗಡೆ ಮಾಡಲಿದ್ದು, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಜರಿರುವರು ಎಂದು ಶಾಸಕ ಎಂ.ಚಂದ್ರಪ್ಪ ಮಾಹಿತಿ ನೀಡಿದರು.

ಜಯಂತಿ ಆಚರಣೆ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಸಿ.ಶಶಿಧರ್, ಮಲ್ಲಿಕಾರ್ಜುನ್ ಚಂದ್ರಶೇಖರ್, ಯೋಗರಾಜ್, ಕುಬೇರ ಪ್ಪ,ರಮೇಶಪ್ಪ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.