ಸಾರಾಂಶ
ಕನ್ನಡಪ್ರಭ ವಾರ್ತೆ ಮಾನ್ವಿ
ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು ಅಭ್ಯರ್ಥಿಗಳು ಮತದಾರರನ್ನು ಸಂಪರ್ಕಿಸುವುದಕ್ಕೆ ಅನೇಕ ಕಾರ್ಯಕ್ರಮಗಳನ್ನು ಅಯೋಜಿಸುತ್ತಿರುವುದರಿಂದ ಕ್ಷೇತ್ರದಲ್ಲಿ ಕಟ್ಟು ನಿಟ್ಟಾಗಿ ನೀತಿ ಸಂಹಿತೆಯನ್ನು ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಡಿಸಿ ಎಲ್.ಚಂದ್ರಶೇಖರ ನಾಯಕ ಸೂಚನೆ ನೀಡಿದರು.ಪಟ್ಟಣದ ಟೌನ್ ಹಾಲ್ ಸಭಾಂಗಣದಲ್ಲಿ ರಾಯಚೂರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾನ್ವಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಹಾಗೂ ಚುನಾವಣಾ ಸಿಬ್ಬಂದಿ ಸಭೆಯಲ್ಲಿ ಮಾತನಾಡಿದ ಅವರು, ಮಾನ್ವಿ ಮತ್ತು ಸಿರವಾರ ತಾಲೂಕುಗಳನ್ನು ಒಳಗೊಂಡಿರುವ ಮಾನ್ವಿ ವಿಧಾನಸಭಾ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆ ಉತ್ತಮವಾಗಿ ನಡೆಯುವುದಕ್ಕೆ ಎಲ್ಲಾ ಇಲಾಖೆಗಳ ಅಧಿಕಾರಿಗಳು , ಮಾನ್ವಿ ವಿಧಾನಸಭಾ ಸಹಾಯಕ ಚುನಾವಣಾಧಿಕಾರಿಗಳು ನೀಡುವ ಎಲ್ಲಾ ಸೂಚನೆಗಳನ್ನು ಪಾಲಿಸಬೇಕು ಹಾಗೂ ತಾಲೂಕು ಹಂತದ ಅಧಿಕಾರಿಗಳಾದ ಮಾನ್ವಿ ಮತ್ತು ಸಿರವಾರ ತಹಸೀಲ್ದಾರ್‌ರು, ತಾಪಂ ಇಒಗಳು, ಪೊಲೀಸ್ ಇಲಾಖೆಯ ಪಿ.ಐ ಗಳು. ನೀಡುವ ಸೂಚನೆಗಳನ್ನು ಪಾಲಿಸುವ ಮೂಲಕ ಏಕಗವಾಕ್ಷಿ ಅಡಿಯಲ್ಲಿ ಅಭ್ಯರ್ಥಿಗಳಿಗೆ ಪರವಾನಗಿ ನೀಡಬೇಕು. ಗಡಿ ಭಾಗದಲ್ಲಿ ಆಕ್ರಮವಾಗಿ ಚುನಾವಣೆ ಉದ್ದೇಶಕ್ಕಾಗಿ ಸಾಗಣಿಕೆ ಮಾಡುವ ಹಣ, ವಸ್ತುಗಳು,ಅಕ್ರಮ ಮದ್ಯ ಸಾಗಣಿಕೆಯನ್ನು ಪತ್ತೆಹಚ್ಚಿ ಅಗತ್ಯವಾದ ಕ್ರಮ ಕೈಗೊಳ್ಳಬೇಕು ಸಾಮಾಗ್ರಿಗಳನ್ನು ವಶಪಡಿಸಿಕೊಂಡ ಕೂಡಲೇ ಮೋಕದ್ದಮೇಯನ್ನು ದಾಖಲಿಸಬೇಕು ಎಂದರು.
ಎ.ಆರ್.ಓ. ಎ.ಪಿ.ಆರ್.ಓ ಸೇರಿದಂತೆ ಮತಗಟ್ಟೆ ಅಧಿಕಾರಿಗಳಾಗಿ ನಿಯೋಜನೆ ಹೊಂದಿದವರು ಅರೋಗ್ಯ ಸಮಸ್ಯೆ ಹಾಗೂ ತುರ್ತು ಸಂದರ್ಭದಲ್ಲಿ , ಗರ್ಭಿಣಿ ಮಹಿಳೆಯರು, ಪತಿ ಮತ್ತು ಪತ್ನಿ ಇಬ್ಬರು ಕೂಡ ಕರ್ತವ್ಯದಲ್ಲಿದ್ದಾಗ , ಒಂದು ವರ್ಷದ ಒಳಗಿನ ಮಗುವನ್ನು ಹೊಂದಿರುವ ಮಹಿಳೆಯರು, ಹಾಗೂ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಕಂಡು ಬಂದ ಪ್ರದೇಶದಲ್ಲಿ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಹೊಂದಿದವರು ಮಾತ್ರ ಚುನಾವಣೆ ಕರ್ತವ್ಯದಿಂದ ವಿನಾಯಿತಿ ಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.ಜಿಪಂ ಸಿಇಒ ಪಾಂಡ್ವೆ ರಾಹುಲ್ ತುಕರಾಮ ಮಾತನಾಡಿ, ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿನ 123 ಮತಗಟ್ಟೆಗಳಲ್ಲಿ ಅತ್ಯಂತ ಕಡಿಮೆ ಮತದಾನವಾಗಿರುವುದರಿಂದ ಅಂತಹ ಮತಗಟ್ಟೆ ವ್ಯಾಪ್ತಿಯಲ್ಲಿ ಹೆಚ್ಚು ಮತದಾನವಾಗುವಂತೆ ಸ್ವಿಪ್ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹೆಚ್ಚು ಮತದಾನವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್. ಬಿ. ಮಾತನಾಡಿ, ಶಾಂತಿಯುತವಾಗಿ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮಾನ್ವಿ ವಿಧಾನಸಭಾ ಸಹಾಯಕ ಚುನವಾಣಧಿಕಾರಿ ಪ್ರಕಾಶ್.ಡಿ, ಮಾನ್ವಿ ತಹಸೀಲ್ದಾರ್ ಜಗದೀಶ್ ಚೌರ್, ಸಿರವಾರ ತಹಸೀಲ್ದಾರ್ ಮಲ್ಲಿಕಾರ್ಜುನ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಚುನಾವಣಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.