ಸಾರಾಂಶ
ಗವಿಮಠದ 17ನೇ ಪೀಠಾಧಿಪತಿ ಹಾಗೂ ತಮ್ಮ ಗುರು ಆಗಿರುವ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ 22ನೇ ಪುಣ್ಯ ಸ್ಮರಣೆ ನಿಮಿತ್ತ ಶ್ರೀ ಗವಿಸಿದ್ಧೇಶ್ವರ ಶ್ರೀಗಳು ನಡೆಸಿದ ಪಾದಯಾತ್ರೆಯಲ್ಲಿ ಸಹಸ್ರಾರು ಭಕ್ತರು ಹೆಜ್ಜೆ ಹಾಕಿದರು.
- ಶಿವಶಾಂತವೀರ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ನಿಮಿತ್ತ ಕಾರ್ಯಕ್ರಮ
- 6 ಕಿಮೀ ಪಾದಯಾತ್ರೆ- ದಾರಿಯುದ್ದಕ್ಕೂ ತಂಪು ಪಾನೀಯ, ಐಸ್ ಕ್ರೀಮ್ ವಿತರಣೆ ಕನ್ನಡಪ್ರಭ ವಾರ್ತೆ ಕೊಪ್ಪಳ
ಗವಿಮಠದ 17ನೇ ಪೀಠಾಧಿಪತಿ ಹಾಗೂ ತಮ್ಮ ಗುರು ಆಗಿರುವ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ 22ನೇ ಪುಣ್ಯ ಸ್ಮರಣೆ ನಿಮಿತ್ತ ಶ್ರೀ ಗವಿಸಿದ್ಧೇಶ್ವರ ಶ್ರೀಗಳು ನಡೆಸಿದ ಪಾದಯಾತ್ರೆಯಲ್ಲಿ ಸಹಸ್ರಾರು ಭಕ್ತರು ಹೆಜ್ಜೆ ಹಾಕಿದರು.ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ನಂತರ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಮೂರ್ತಿಗೆ ಪೂಜೆ ಸಲ್ಲಿಸಿ, ಪಾದಯಾತ್ರೆಗೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಿದರು.
ಬರಿಗಾಲಿನಲ್ಲಿಯೇ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಶ್ರೀಗಳನ್ನು ಬೆಂಬಲಿಸಿ ಸಹಸ್ರಾರು ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದರು. ಮಹಿಳೆಯರು, ಮಕ್ಕಳು ಸೇರಿದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಇವರ ಜೊತೆಗೆ ಚಿಕ್ಕೇನಕೊಪ್ಪದ ಶರಣರು ಹಾಗೂ ಹಡಗಲಿಯ ಗವಿಮಠದ ಶಾಖಾ ಮಠದ ಸ್ವಾಮೀಜಿ ಹಿರೇಶಾಂತವೀರ ಮಹಾಸ್ವಾಮಿಗಳು ಪಾದಯಾತ್ರೆ ಮಾಡಿದರು. ಅದರಲ್ಲೂ ಚಿಕ್ಕೇನಕೊಪ್ಪದ ಶರಣರು ಭಜನೆ ಮಾಡುತ್ತಾ ಹೆಜ್ಜೆ ಹಾಕಿದರು.
ದಾರಿಯುದ್ದಕ್ಕೂ ತಂಪು ಪಾನೀಯ:ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಸಹಸ್ರಾರು ಭಕ್ತರು ಸುಮಾರು 6 ಕಿಮೀ ಉದ್ದಕ್ಕೂ ನಡೆದುಕೊಂಡೇ ಸಾಗಿದರು. ಹೀಗಾಗಿ, ದಾರಿಯುದ್ದಕ್ಕೂ ಅಲ್ಲಲ್ಲಿ ತಂಪು ಪಾನೀಯ, ಐಸ್ ಕ್ರೀಮ್, ಚಾಕಲೆಟ್ ಸಹ ವಿತರಣೆ ಮಾಡಲಾಯಿತು.ದಾರಿಯುದ್ದಕ್ಕೂ ಹೂ:
ಗವಿಸಿದ್ಧೇಶ್ವರ ಶ್ರೀಗಳು ಸಾಗುವ ದಾರಿಯುದ್ದಕ್ಕೂ ಅಲ್ಲಲ್ಲಿ ಹೂಗಳನ್ನು ಚೆಲ್ಲಿದ್ದರಾದರೂ ಶ್ರೀಗಳು ಮಾತ್ರ ಹೂ ಚಲ್ಲಿದ ಸ್ಥಳದಿಂದ ಪಕ್ಕದಲ್ಲಿಯೇ ಸಾಗುತ್ತಿದ್ದರು. ಇನ್ನು ಭಕ್ತರು ದಾರಿಯುದ್ದಕ್ಕೂ ಶ್ರೀಗಳ ದರ್ಶನ ಪಡೆದರು.ರಸ್ತೆಯ ಎರಡು ಬದಿಯಲ್ಲಿ ನಿಂತು ಪಾದಯಾತ್ರೆಗೆ ಶುಭ ಕೋರುತ್ತಿರುವುದು ಕಂಡು ಬಂತು.
ಅಭ್ಯರ್ಥಿಗಳು ಭಾಗಿ:ಪಾದಯಾತ್ರೆಯಲ್ಲಿ ಅನೇಕ ಮುಖಂಡರು ಭಾಗವಹಿಸಿದ್ದರು. ಅದರಲ್ಲೂ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು.