ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ರಾಜ್ಯದಲ್ಲೇ ಹೆಚ್ಚು ಕನ್ನಡ ಮಾತನಾಡುವ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸಬೇಕು ಎಂದು ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಮನವಿ ಮಾಡಿದರು.ಪಟ್ಟಣದ ಕಸಾಪ ಭವನದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ಕರ್ನಾಟಕ ಏಕೀಕರಣಗೊಂಡ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆದಿತ್ತು. ಅದಾದ 50 ವರ್ಷಗಳ ನಂತರ ಮೂರನೇ ಬಾರಿಗೆ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂದರು.
ಮಂಡ್ಯ ಆಕರ್ಷಣೀಯ ಹಾಗೂ ವೈವಿದ್ಯತೆಯಿಂದ ಕೂಡಿದೆ. ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆಯಾಗಿದೆ. ಸಾಹಿತ್ಯ ಸಮ್ಮೇಳನವನ್ನು ಮನೆ ಹಬ್ಬದಂತೆ ಸಂಭ್ರಮಿಸಿ ಸ್ವ ಇಚ್ಛೆಯಿಂದ ಮೂರು ದಿನ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಕನ್ನಡ ಭಾಷೆ ತನ್ನದೆಯಾದ ಇತಿಹಾಸ, ಸ್ವಂತಿಕೆ, ವೈಜ್ಞಾನಿಕವಾದ ಅಂಶಗಳನ್ನು ಹೊಂದಿದೆ. ಪರಿಪೂರ್ಣತೆ ಹೊಂದಿರುವ ಮೂರು ಭಾಷೆಗಳ ಪೈಕಿ ಕನ್ನಡವೂ ಸಹ ಒಂದಾಗಿದೆ. ಆರು ಶಾಸ್ತ್ರೀಯ ಸ್ಥಾನಮಾನ ಹೊಂದಿದ ಭಾಷೆಗಳ ಪೈಕಿ ಕನ್ನಡವೂ ಸಹ ಒಂದಾಗಿದೆ. ಕನ್ನಡ ಭಾಷೆ, ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ ಎಂದರು.
ಸಾಹಿತ್ಯ ಸಮ್ಮೇಳನಕ್ಕೆ ಹೊರ ದೇಶಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಅನಿವಾಸಿ ಕನ್ನಡಿಗರು ಆಗಮಿಸುತ್ತಿದ್ದಾರೆ. ವಿದೇಶದಲ್ಲಿರುವ ವಿಶ್ವೇಶ್ವರಯ್ಯನವರ ಮೊಮ್ಮಗಳು, ಪುತೀನ ಅವರ ಮಗಳು ಸೇರಿದಂತೆ ಅನೇಕ ಕನ್ನಡಿಗರು ಆಗಮಿಸುತ್ತಿರುವುದು ವಿಶೇಷವಾಗಿದೆ. ಯುರೋಪ್ ರಾಷ್ಟ್ರದಲ್ಲಿರುವ ಹಲವು ಅನಿವಾಸಿ ಕನ್ನಡಿರನ್ನು ಸಹ ಆಹ್ವಾನಿಸಲಾಗುತ್ತಿದೆ ಎಂದರು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಶ್ರೀಮಂತಗೊಳಿಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ತಮ್ಮ ಜವಬ್ದಾರಿ ಅರಿತು, ಪಕ್ಷಾತೀತ, ಜಾತ್ಯಾತೀತವಾಗಿ ಸಮ್ಮೇಳನಕ್ಕೆ ಜನರನ್ನು ಕರೆತರುವ ಕೆಲಸ ಮಾಡುವ ಮೂಲಕ ಕನ್ನಡಾಭಿಮಾನ ಮೆರೆಯಬೇಕು ಎಂದು ಕಿವಿಮಾತು ಹೇಳಿದರು.
ಕನ್ನಡ ಭಾಷೆ ಸಂರಕ್ಷಣೆಗೆ ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕೆಂದು ಸಲಹೆ ನೀಡಿದ ಅವರು, ಪಟ್ಟಣದಲ್ಲಿರುವ ಕಸಾಪ ಭವನದ ಮೇಲ್ಛಾವಣಿ ಹಾಕಿಸಿ ಸಭಾಂಗಣ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, 30 ವರ್ಷಗಳ ನಂತರ ಮನೆ ಬಾಗಿಲಲ್ಲಿಯೇ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಿ ಜಿಲ್ಲೆಯ ವೈಶಿಷ್ಟ್ಯತೆ, ವೈವಿದ್ಯತೆ, ನೆಲದ ಸಂಸ್ಕೃತಿಯನ್ನು ಪ್ರಚಾರಪಡಿಸುವ ಕೆಲಸ ಮಾಡಬೇಕು ಎಂದರು.
ಇದೇ ವೇಳೆ ಶಿಕ್ಷಕ ಧನಂಜಯ್ ಪಾಂಡವಪುರ ಅವರ ಬರೆದಿರುವ ಕಣ್ಮರೆಯಾದ ಕಥಾ ನಾಯಕಿ ಕಾದಂಬರಿ ಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು. ಸಭೆಯಲ್ಲಿ ಕಸಾಪ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ರಾಮಲಿಂಗಶೆಟ್ಟಿ, ಪಟೇಲ್‌ಪಾಂಡು, ಕೃಷ್ಣೇಗೌಡ ಹೂಸ್ಕೂರು, ಅಪ್ಪಾಜಪ್ಪ, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ತಹಸೀಲ್ದಾರ್ ಸಂತೋಷ್, ಇಒ ಲೋಕೇಶ್‌ಮೂರ್ತಿ, ಲಯನ್ ಕೆ.ದೇವೇಗೌಡ, ಕೆ.ವಿ.ಬಸರಾಜು, ಅಂಜನಾಶ್ರೀಕಾಂತ್, ಕೃಷ್ಣ, ಕಾರ್‍ಯದರ್ಶಿಗಳಾದ ಎರೆಗೌಡನಹಳ್ಳಿ ವೆಂಕಟೇಶ್, ಚಿಕ್ಕಾಡೆ ಶ್ರೀನಿವಾಸ್ ಸೇರಿ ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಅಧಿಕಾರಿಗಳು, ಸಾಹಿತ್ಯಾಭಿಮಾನಿಗಳು ಭಾಗವಹಿಸಿದ್ದರು.;Resize=(128,128))
;Resize=(128,128))