ಕಮಲಾಪುರ ಕೆರೆ ಕೋಡಿ, ರೈತರ ಗದ್ದೆಗೆ ಹರಿದ ರಾಯಕಾಲುವೆ ನೀರು

| Published : Oct 19 2024, 12:18 AM IST

ಸಾರಾಂಶ

ಬೆನಕಾಪುರದಲ್ಲಿ 19ನೇ ಕಿ.ಮೀ. ಬಳಿ ರಾಯ ಕಾಲುವೆಯಿಂದ ನೀರು ಹರಿದು, ಭತ್ತದ ಗದ್ದೆಗಳಿಗೆ ನುಗ್ಗಿದೆ.

ಹೊಸಪೇಟೆ: ವಿಜಯನಗರ ಜಿಲ್ಲೆಯಾದ್ಯಂತ ಗುರುವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಹೊಸಪೇಟೆ ತಾಲೂಕಿನ ಬೆನಕಾಪುರದ ಬಳಿ ರಾಯ ಕಾಲುವೆಯಲ್ಲಿ ಮಳೆ ನೀರು ಸೇರಿ ಕಾಲುವೆ ತುಂಬಿ ಹರಿದು, 50ಕ್ಕೂ ಅಧಿಕ ಎಕರೆ ಭತ್ತದ ಗದ್ದೆಗೆ ನೀರು ನುಗ್ಗಿದೆ. ಇನ್ನು ಕಮಲಾಪುರ ಕೆರೆ ಕೋಡಿ ಬಿದ್ದಿದೆ. ಜಿಲ್ಲೆಯಲ್ಲಿ ಎಂಟು ಮನೆಗಳು ನೆಲಕ್ಕುರುಳಿವೆ.ವಿಜಯನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದು, ಕೆಲವೆಡೆ ಮನೆಗಳಿಗೂ ನೀರು ನುಗ್ಗಿದೆ. ಜಿಲ್ಲೆಯಲ್ಲಿ ಒಂದೇ ದಿನಕ್ಕೆ ಎಂಟು ಮನೆಗಳು ಕುಸಿದಿವೆ. ಬೆನಕಾಪುರದಲ್ಲಿ 19ನೇ ಕಿ.ಮೀ. ಬಳಿ ರಾಯ ಕಾಲುವೆಯಿಂದ ನೀರು ಹರಿದು, ಭತ್ತದ ಗದ್ದೆಗಳಿಗೆ ನುಗ್ಗಿದೆ. 19ನೇ ಕಿ.ಮೀ.ನಿಂದ 24ನೇ ಕಿ.ಮೀ.ವರೆಗೆ ಸಮಸ್ಯೆ ಉಂಟಾಗಿದೆ. 50ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ನೀರು ನುಗ್ಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.

ಬಸವಣ್ಣ ಕಾಲುವೆ ಹಾಗೂ ರಾಯ ಕಾಲುವೆ ನೀರಿನ ಜೊತೆಗೆ ಗುಡ್ಡದಿಂದ ಹರಿದು ಬರುತ್ತಿರುವ ಮಳೆ ನೀರು ಸೇರಿ ಈ ಅವಘಡ ಸಂಭವಿಸಿದೆ. ಕಾಲುವೆ ನೀರು ಭತ್ತದ ಗದ್ದೆಗಳಿಗೆ ಹರಿದು ಬರುತ್ತಿರುವುದರಿಂದ ರೈತರು, ಶಾಸಕ ಎಚ್‌.ಆರ್‌. ಗವಿಯಪ್ಪ ಗಮನಕ್ಕೆ ತಂದಿದ್ದು, ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಶೀಘ್ರ ಕಾರ್ಯಾಚರಣೆ ನಡೆಸಲು ಶಾಸಕರು ಸೂಚಿಸಿದರು. ಈ ವೇಳೆ ನೀರಾವರಿ ಇಲಾಖೆಯ ಮಂಜುನಾಥ, ಯಲ್ಲಪ್ಪ ಜೆಸಿಬಿಯೊಂದಿಗೆ ತೆರಳಿ ಕಾರ್ಯಾಚರಣೆ ನಡೆಸಿದರು.

ಕಮಲಾಪುರ ಕೆರೆ ಮತ್ತೆ ಕೋಡಿಬಿದ್ದು, ಹಂಪಿ, ಕಮಲಾಪುರ ಭಾಗದ ಭತ್ತ, ಬಾಳೆ ಗದ್ದೆಗಳಿಗೆ ನೀರು ಹರಿಯುತ್ತಿದೆ.

ಹೊಸಪೇಟೆಯಲ್ಲಿ ಮಳೆಯಿಂದ ಜನರು ಕಂಗಾಲಾಗಿದ್ದಾರೆ. ನಗರದ ಎಂ.ಪಿ. ಪ್ರಕಾಶ್ ನಗರ, ಎಂ.ಜೆ.ನಗರ, ಅರವಿಂದನಗರ ಸೇರಿದಂತೆ ನಗರದ ರಸ್ತೆಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಹೊಸಪೇಟೆಯಲ್ಲಿ 8.7 ಮಿ.ಮೀ. ಮಳೆಯಾಗಿದ್ದು, ಕಮಲಾಪುರದಲ್ಲಿ 39 ಮಿ.ಮೀ., ಮರಿಯಮ್ಮನಹಳ್ಳಿ 23 ಮಿ.ಮೀ., ಹಡಗಲಿಯಲ್ಲಿ 7.9 ಮಿ.ಮೀ., ಹಗರಿಬೊಮ್ಮನಹಳ್ಳಿ 5 ಮಿ.ಮೀ., ಹಂಪಸಾಗರ 11.1 ಮಿ.ಮೀ. ಮಳೆ ದಾಖಲಾಗಿದೆ.

ಹರಪನಹಳ್ಳಿಯ ಚಿಗಟೇರಿಯಲ್ಲಿ 3.4 ಮಿ.ಮೀ., ಕೊಟ್ಟೂರಿನಲ್ಲಿ 13.1 ಮಿ.ಮೀ., ಕೂಡ್ಲಿಗಿಯಲ್ಲಿ 7.9 ಮಿ.ಮೀ. ಮಳೆಯಾದರೆ, ಹೊಸಹಳ್ಳಿಯಲ್ಲಿ 18 ಮಿ.ಮೀ. ಮಳೆ ದಾಖಲಾಗಿದೆ.