ಸಾರಾಂಶ
ಮುಳಬಾಗಿಲು: ತಾಲೂಕಿನಲ್ಲಿ ಸುಮಾರು ೨೧ ಸಾವಿರ ರೆಡ್ಡಿ ಸಮುದಾಯದ ಜನರಿದ್ದು, ಸರ್ಕಾರದಿಂದ ಇದುವರೆಗೂ ಸಮುದಾಯ ಭವನ ನಿರ್ಮಿಸಿಕೊಡದೇ ಇರುವುದು ಬೇಸರದ ಸಂಗತಿ ಎಂದು ತಾಲೂಕು ರೆಡ್ಡಿ ಜನಸಂಘದ ಅಧ್ಯಕ್ಷ ಕಗ್ಗಿನಹಳ್ಳಿ ಕೆ.ಎನ್. ಕೇಶವರೆಡ್ಡಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ರೆಡ್ಡಿ ಜನಸಂಘದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ರೆಡ್ಡಿ ಜನಾಂಗದಲ್ಲಿ ಸುಮಾರು ೧೯೯ ಉಪ ಜಾತಿಗಳು ಇದ್ದು ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರಿಕೊಂಡು ಸಮುದಾಯದ ಜನತೆಗೆ ಸರ್ಕಾರದ ಸೌಲತ್ತುಗಳನ್ನು ಪಡೆದುಕೊಳ್ಳಲು ಹೋರಾಟ ನಡೆಸಬೇಕೆಂದು ಕರೆ ನೀಡಿದರು. ಸಂಘದ ಖಜಾಂಚಿ ಹೈದಲಾಪುರ ಎಂ. ಜಯರಾಮರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರ ನಮ್ಮ ಜನಾಂಗವನ್ನು ಎಲ್ಲಾ ರೀತಿಯಲ್ಲೂ ಕಡೆಗಣಿಸಿದೆ ಎಂದು ಆರೋಪಿಸಿದರಲ್ಲದೇ, ಕೂಡಲೇ ಸಮುದಾಯ ಭವನ ನಿರ್ಮಾಣಕ್ಕೆ ಜಮೀನನ್ನು ಮಂಜೂರು ಮಾಡಿಕೊಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಜನಾಂಗದ ಸಂಘಟನೆಗೆ ಉದ್ಯಮಿ ಹೈದಲಾಪುರ ರಮೇಶ್‌ರೆಡ್ಡಿ ೫೦ ಸಾವಿರ ರು.ಗಳ ಚೆಕ್‌ಅನ್ನು ಸಂಘದ ಪದಾಧಿಕಾರಿಗಳಿಗೆ ನೀಡಿದರು.
ಇದೇ ವೇಳೆ ರೆಡ್ಡಿ ಜನಸಂಘದ ೨೦೨೫ರ ಕ್ಯಾಲೆಂಡರ್‌ಗಳನ್ನು ಬಿಡುಗಡೆ ಮಾಡಲಾಯಿತು. ಸಂಘದ ಉಪಾಧ್ಯಕ್ಷ ಜಿ. ಮೋಹನ್‌ರೆಡ್ಡಿ, ಕಾರ್ಯಾಧ್ಯಕ್ಷ ಸಿ.ವಿ. ರಾಮಕೃಷ್ಣಾರೆಡ್ಡಿ, ಪ್ರಧಾನ ಕಾರ್ಯದರ್ಶಿ ನಂಗಲಿ ವಿಶ್ವನಾಥರೆಡ್ಡಿ, ಮುಖಂಡರಾದ ಗುಮ್ಮಕಲ್ ರಾಮರೆಡ್ಡಿ, ಪಿ.ವಿ. ಶಿವರಾಮರೆಡ್ಡಿ, ಕೃಷ್ಣಾರೆಡ್ಡಿ, ಕೆಜಿಎಫ್ ಅಧ್ಯಕ್ಷ ಪ್ರಸನ್ನ ರೆಡ್ಡಿ, ಬಂಗಾರುಪೇಟೆ ತಿಪ್ಪಾರೆಡ್ಡಿ, ಮಾಲೂರು ರಾಮಸ್ವಾಮಿರೆಡ್ಡಿ, ಕೋಲಾರ ಅನಿಲ್ ರೆಡ್ಡಿ, ಶ್ರೀನಿವಾಸಪುರ ರಾಜಾರೆಡ್ಡಿ ಇದ್ದರು.