ಸಾರಾಂಶ
ತಿಪಟೂರು: 2024ಕ್ಕೆ ವಿದಾಯ ಹೇಳಿ ನೂತನ ವರ್ಷ 2025ನ್ನು ಕಲ್ಪತರು ನಾಡು ತಿಪಟೂರಿನಲ್ಲಿ ಸಡಗರ ಸಂಭ್ರಮದಿಂದ ಸ್ವಾಗತಿಸಲಾಯಿತು.
ನಗರದ ಬಿ.ಎಚ್. ರಸ್ತೆ ಸೇರಿದಂತೆ ಎಲ್ಲೆಡೆ ಬೇಕರಿಗಳು, ಸ್ವೀಟ್‌ಸ್ಟಾಲ್ ಮತ್ತು ಹೋಟೆಲ್‌ಗಳು, ಬಾರ್ ಅಂಡ್ ರೆಸ್ಟೋರೆಂಟ್‌ಗಳು ಹೊಸ ವರ್ಷದ ಪ್ರಯುಕ್ತ ಆಕರ್ಷಕ ವಿದ್ಯುತ್ ದೀಪಾಲಂಕಾರ, ಬಣ್ಣಬಣ್ಣದ ತರಹೇವಾರಿ ಬಲೂನ್‌ಗಳೊಂದಿಗೆ ಕಂಗೊಳಿಸುತ್ತಿದ್ದವು. ಬೇಕರಿಗಳಲ್ಲಿ ವಿವಿಧ ಬಗೆಯ ಆಕರ್ಷಕ ಕೇಕ್‌ಗಳನ್ನು ತಯಾರಿಸಿ ಮಾರಾಟಕ್ಕಿಡಲಾಗಿತ್ತು.ಬೇಕರಿ, ಹೋಟೆಲ್‌ಗಳು ಜನಜಂಗುಳಿಯಿಂದ ಕೂಡಿದ್ದವು. ಕೇಕ್, ಸ್ವೀಟ್, ಜ್ಯೂಸ್, ಕೂಲ್‌ಡ್ರಿಂಕ್ಸ್ ಮಾರಾಟ ಬಲು ಜೋರಾಗಿಯೆ ನಡೆಯುತ್ತಿತ್ತು. ಆಕರ್ಷಕ ಉಡುಗೆ- ತೊಡುಗೆಗಳಿಂದ ನಗರದ ಪಾರ್ಕ್‌ಗಳು, ಕಾಲೇಜು, ಹೋಟೆಲ್, ಬೇಕರಿಗಳ ಬಳಿ ವಿದ್ಯಾರ್ಥಿಗಳು, ಯುವಕ-ಯುವತಿಯರು ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.ನಗರದಲ್ಲಿರುವ ಶ್ರೀ ಕೆಂಪಮ್ಮದೇವಿ, ಶ್ರೀ ಕಲ್ಲೇಶ್ವರ ಸ್ವಾಮಿ, ಶ್ರೀ ಮಲ್ಲಿಕಾರ್ಜುನಸ್ವಾಮಿ, ಸಾಯಿಬಾಬ ಮಂದಿರ, ರಾಮಮಂದಿರ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಧನುರ್ಮಾಸ ಪೂಜೆಯಾದ್ದರಿಂದ ಬೆಳಗ್ಗಿನ ಜಾವದಿಂದಲೇ ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡಿ ಹೊಸ ವರ್ಷದಲ್ಲಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಬೇಡಿಕೊಂಡರು. ತಿಪಟೂರು ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿ ದೇವಸ್ಥಾನದಲ್ಲಿ ಶ್ರೀ ಅಮ್ಮನವರು ವಿಶೇಷ ಹೂವುಗಳ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದರು. ದೇವಸ್ಥಾನಗಳಲ್ಲಿ ಸಾಲುಸಾಲು ಭಕ್ತರ ದಂಡು ಹರಿದು ಬಂದು ದೇವರು ದರ್ಶನ ಪಡೆಯುತ್ತಿದ್ದ ದೃಶ್ಯ ಕಂಡುಬಂದಿತು. ಫೋಟೋ 1-ಟಿಪಿಟಿ5ರಲ್ಲಿ ಕಳಹಿಸಲಾಗಿದೆ. ಶೀರ್ಷಿಕೆ : ತಿಪಟೂರು ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿಗೆ ಹೊಸವರ್ಷದ ಪ್ರಯುಕ್ತ ವಿಶೇಷ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು.