ಸಾರಾಂಶ
ರಾಜ್ಯದಲ್ಲಿ ಪಡಿತರ ವಿತರಣೆ ಹಾಗೂ ಪಡಿತರ ವಿತರಕರಿಗೆ ಸಂಬಂಧಿಸಿದ ಲೋಪದೋಷಗಳನ್ನು ಮುಂದಿನ ೧ ತಿಂಗಳ ಒಳಗಾಗಿ ಸರಿಪಡಿಸದಿದ್ದಲ್ಲಿ ರಾಜ್ಯದಾ ದ್ಯಂತ ಉಗ್ರ ಹೋರಾಟ ನಡೆಸುವುದಾಗಿ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಎಚ್ಚರಿಸಿದರು.
ಕನ್ನಡಪ್ರಭ ವಾರ್ತೆ ಭದ್ರಾವತಿ
ರಾಜ್ಯದಲ್ಲಿ ಪಡಿತರ ವಿತರಣೆ ಹಾಗೂ ಪಡಿತರ ವಿತರಕರಿಗೆ ಸಂಬಂಧಿಸಿದ ಲೋಪದೋಷಗಳನ್ನು ಸರಿಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಎಚ್ಚರಿಸಿದರು.ಅವರು ಭಾನುವಾರ ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪಡಿತರ ವಿತರಕರು ಇ-ಕೆವೈಸಿ ಮಾಡಿಸಿರುವ ಬಾಕಿ ಹಣ ಕಳೆದ ೬ ವರ್ಷಗಳಿಂದ ರಾಜ್ಯ ಸರ್ಕಾರ ನೀಡಿಲ್ಲ. ಪ್ರಸ್ತುತ ರಾಜ್ಯದಲ್ಲಿ ಪಡಿತರದಾರರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ೫ ಕೆ.ಜಿ. ಅಕ್ಕಿಯನ್ನು ಮಾತ್ರ ಉಚಿತವಾಗಿ ನೀಡಲಾಗುತ್ತಿದೆ. ಆದರೆ ಸರ್ಕಾರ ೫ ಕೆ.ಜಿ ಉಚಿತ ಅಕ್ಕಿ ಬದಲು ರು. ೧೭೦ ಪಡಿತರದಾರ ರ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದೆ. ಆದರೆ ಈ ಹಣ ಸಹ ಸರಿಯಾಗಿ ಜಮಾ ಆಗುತ್ತಿಲ್ಲ ಎಂದು ಆರೋಪಿಸಿದರು.
ದೇಶದ ಇತರೆ ರಾಜ್ಯಗಳಲ್ಲಿ ಪಡಿತರ ವಿತರಕರಿಗೆ ನೀಡುತ್ತಿರುವ ಕಮಿಷನ್ ಹಣ ರಾಜ್ಯದ ಪಡಿತರ ವಿತರಕರಿಗೂ ನೀಡಬೇಕು. ರಾಜ್ಯ ಸರ್ಕಾರ ೧೭೦ ರು. ಹಣ ಜಮಾ ಮಾಡುವ ಬದಲು ಈ ದರಕ್ಕೆ ಅಗತ್ಯವಿರುವ ಇತರೆ ಆಹಾರ ಪದಾರ್ಥಗಳನ್ನು ನೀಡಬೇಕು. ಉಳಿದಂತೆ ರಾಜ್ಯದಲ್ಲಿ ಸೀಮೆ ಎಣ್ಣೆ ಅಭಾವ ಹೆಚ್ಚಾಗಿದ್ದು, ಕೇಂದ್ರ ಸರ್ಕಾರ ಅಗತ್ಯ ವಿರುವಷ್ಟು ಪ್ರಮಾಣದ ಸೀಮೆ ಎಣ್ಣೆ ಪೂರೈಕೆ ಮಾಡಬೇಕು. ರಾಜ್ಯದ ಆಹಾರ ಇಲಾಖೆ ಗೋದಾಮುಗಳಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದ್ದು, ಕೆಳಹಂತದ ಅಧಿಕಾರಿಗಳು ಈ ಭ್ರಷ್ಟಾಚಾರದಲ್ಲಿ ತೊಡಗಿರುವುದು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಗೋದಾಮುಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಹಾಗೂ ಸಿ.ಸಿ.ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಆಗ್ರಹಿಸಿದರು.ಒಟ್ಟಾರೆ ರಾಜ್ಯದಲ್ಲಿ ಪಡಿತರ ವಿತರಣೆ ಹಾಗೂ ಪಡಿತರ ವಿತರಕರಿಗೆ ಸಂಬಂಧಿಸಿದ ಲೋಪದೋಷಗಳನ್ನು ಮುಂದಿನ ೧ ತಿಂಗಳ ಒಳಗಾಗಿ ಸರಿಪಡಿಸದಿದ್ದಲ್ಲಿ ರಾಜ್ಯದಾ ದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರಧಾನ ಕಾರ್ಯದರ್ಶಿ ಚನ್ನಕೇಶವಗೌಡ, ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ, ಜಿಲ್ಲಾಧ್ಯಕ್ಷ ಲೋಕೇಶಪ್ಪ, ಜಯಣ್ಣ, ಮುರುಗೇಶ್, ರುದ್ರಮುನಿ, ಜವರಾಯಿ, ಎ.ಬಿ.ರುದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.