ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ಫ.ಗು ಹಳಕಟ್ಟಿಯವರು ವಚನ ಸಾಹಿತ್ಯ ಸಂರಕ್ಷಣೆಗಾಗಿ ತಮ್ಮ ತನು, ಮನ, ಧನ ಸಮರ್ಪಿಸಿಕೊಂಡವರು. ಅವರ ಪ್ರಯತ್ನ ಪರಿಶ್ರಮ ಇಲ್ಲದಿದ್ದರೆ ಅಮೂಲ್ಯ ವಚನ ಸಾಹಿತ್ಯ ಬೆಳಕು ಕಾಣುವುದು ಕಷ್ಟಸಾಧ್ಯವಾಗಿತ್ತು. ವಚನ ಸಾಹಿತ್ಯ, ಸಂಶೋಧನೆ, ಸಂರಕ್ಷಣೆ, ಪ್ರಕಟಣೆಗಾಗಿ ಅವರು ತಮ್ಮ ಮನೆಯನ್ನೇ ಮಾರಿದರು.ಅವರ ಕನಸು ಮನಸಿನಲ್ಲಿ ವಚನ ಸಾಹಿತ್ಯ ಬಿಟ್ಟರೆ ಬೇರೊಂದು ಚಿಂತೆ, ಚಿಂತನ ಇರಲಿಲ್ಲ. ಅವರ ಹೆಸರಿನಲ್ಲಿ ಬೆಂಗಳೂರಲ್ಲಿ ಫ.ಗು ಹಳಕಟ್ಟಿ ಫೌಂಡೇಷನ್ ನವರು ಪ್ರತಿವರ್ಷ ವಚನ ಸಾಹಿತ್ಯ ಸಾಧಕರಿಗೆ ಪ್ರಶಸ್ತಿಯನ್ನು ಕೊಡುತ್ತ ಬಂದಿದ್ದಾರೆ. ಈ ವರ್ಷ ಈ ಪ್ರಶಸ್ತಿಗೆ ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮಿಗಳವರನ್ನು ಗುರುತಿಸಿದ್ದಾರೆ. ಲೇಖನಿಯಿಂದ ಶರಣರ ಬದುಕನ್ನು ಕುರಿತಂತೆ ಜಂಗಮದೆಡೆಗೆ, ಮೋಳಿಗೆ ಮಾರಯ್ಯ, ಗುರುಮಾತೆ ಅಕ್ಕನಾಗಲಾಂಬಿಕೆ, ಅಂತರಂಗ ಬಹಿರಂಗ ನಾಟಕ ಕೃತಿಗಳು ಹೊರಬಂದಿವೆ. ಶರಣರ ತತ್ವ ಸಿದ್ಧಾಂತಗಳನ್ನು ಪ್ರತಿಪಾದಿಸುವ ಧರ್ಮಗುರು, ಶಿವಬೆಳಗು, ಕಾಯಕ ದಾಸೋಹ, ಜೇಡರ ದಾಸಿಮಯ್ಯ, ಮಾದಾರ ಚೆನ್ನಯ್ಯ, ವಚನ ವೈಭವ, ಬಸವಧರ್ಮ, ಶರಣ ಸಂಕುಲ, ಲಿಂಗಾಯತ ಧರ್ಮ, ವಚನಕಾರರ ಬದ್ಧತೆ, ಕಲ್ಯಾಣದೆಡೆಗೆ, ಶರಣ ಸಂದೇಶ, ವಚನ ಸಂದೇಶ, ಕಲ್ಯಾಣದ ಬೆಳಕು, ಬಸವಪ್ರಜ್ಞೆ, ಲಿಂಗಾಯತರು ಮತ್ತು ಬಸವ ತತ್ವ, ವಚನ ಸಂವಿಧಾನ ಹೀಗೆ ನೂರಾರು ಕೃತಿಗಳು ಹೊರಬಂದಿವೆ. ಅದರಲ್ಲೂ "ಮತ್ತೆ ಕಲ್ಯಾಣ " ಕೃತಿ ಸಂಪುಟ ಸಂಶೋಧಕರಿಗೆ ಒಂದು ಆಕರ ಗ್ರಂಥದಂತಿದೆ.
ಪ್ರತಿವರ್ಷ ನಡೆಯುವ ಶಿವಸಂಚಾರ ರಂಗ ರೆಪರ್ಟರಿಯಲ್ಲಿ ಶರಣರ ತತ್ವಗಳಿಗೆ ಸಂಬಂಧಿಸಿದ ಒಂದು ನಾಟಕ ಇರುತ್ತದೆ. ಪ್ರತಿನಿತ್ಯ ಶರಣರ ವಿಚಾರಗಳ ಪ್ರತಿಪಾದನೆ ಮಾಡುವರು. ಪೂಜ್ಯರ ಈ ಎಲ್ಲ ಸಾಧನೆಯನ್ನು ಗಮನಿಸಿ ಫ.ಗು ಹಳಕಟ್ಟಿ ಫೌಂಡೇಶನ್ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಗೆ ಪ್ರಶಸ್ತಿ ಕೊಡಮಾಡಿರುವುದು ಭಕ್ತರಿಗೆ ಸಂತಸ ತಂದಿದೆ. ಪ್ರಶಸ್ತಿ ಫಲಕದೊಂದಿಗೆ 1 ಲಕ್ಷ ರು. ನಗದು ಕೊಡುವರೆಂದು ತಿಳಿದುಬಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಜು.೨ರಂದು ಸಂಜೆ ೫-೩೦ಕ್ಕೆ ಬೆಂಗಳೂರಲ್ಲಿ ಕುಮಾರಕೃಪಾ ರಸ್ತೆಯ ಗಾಂಧಿ ಭವನದಲ್ಲಿ ನಡೆಯಲಿದೆ.