ಉಡುಪಿ: ನಾಯಕತ್ವವು ಶೂನ್ಯದಿಂದ ಸೃಷ್ಟಿಯಾಗುವುದಿಲ್ಲ. ವಿವಿಧ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುವುದರಿಂದ ನಾಯಕತ್ವದ ಬೆಳವಣಿಗೆ ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ವಿದ್ಯಾರ್ಥಿ ಸಮೂಹಕ್ಕೆ ಮಾರ್ಗದರ್ಶನದ ಅಗತ್ಯವಿದೆ ಎಂದು ಮಹಾತ್ಮಾಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ ನಾಯಕ್ ಹೇಳಿದರು. ಅವರು ಭಾರತೀಯ ರೆಡ್ ಕ್ರಾಸ್ ಉಡುಪಿ ಜಿಲ್ಲೆ ಮತ್ತು ಮಂಗಳೂರು ವಿಶ್ವವಿದ್ಯಾಲಯ ರೆಡ್‌ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ರೆಡ್‌ಕ್ರಾಸ್ ಭವನದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಉಡುಪಿ ಜಿಲ್ಲೆಯ ರೆಡ್‌ಕ್ರಾಸ್ ಘಟಕ ನಾಯಕರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ರೆಡ್‌ಕ್ರಾಸ್ ರಾಜ್ಯ ಸಭಾಪತಿ ಬಸರೂರು ರಾಜೀವ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಯುವ ರೆಡ್‌ಕ್ರಾಸ್ ಘಟಕಗಳು ರೆಡ್ ಕ್ರಾಸ್ಸಿನ ನಿಜವಾದ ಶಕ್ತಿ ಎಂದರು. ರೆಡ್‌ಕ್ರಾಸ್ ಜಿಲ್ಲಾ ಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರಿನ ರೆಡ್‌ಕ್ರಾಸ್ ಅಧಿಕಾರಿ ಪ್ರಶಾಂತ ನೀಲಾವರ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದರು.

ಆಡಳಿತ ಮಂಡಳಿಯ ಸದಸ್ಯ ವಿ.ಜಿ. ಶೆಟ್ಟಿ ಹಾಗೂ ಮತ್ತಿತರರು ಭಾಗವಹಿಸಿದ್ದರು. ರೆಡ್‌ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ರೆಡ್ ಕ್ರಾಸ್ ಸದಸ್ಯ ದಯಾನಂದ ಡಿ. ಕಾರ್ಯಕ್ರಮ ನಿರೂಪಿಸಿ, ಆಡಳಿತ ಮಂಡಳಿಯ ಸದಸ್ಯ ಚಂದ್ರಶೇಖರ್ ಟಿ. ವಂದಿಸಿದರು.