ಸಾರಾಂಶ
ವಿದ್ಯಾರ್ಥಿ ದೆಸೆಯಲ್ಲಿಯೇ ಆಡಳಿತಾತ್ಮಕ ಅಂಶಗಳನ್ನು ಕಲಿಯಬೇಕು. ಅವುಗಳು ಭವಿಷ್ಯದಲ್ಲಿ ನಮ್ಮನ್ನು ನಾಯಕನನ್ನಾಗಿ ರೂಪಿಸುತ್ತವೆ.ಯಾವುದೇ ಉದ್ಯೋಗ ಆರಂಭಿಸಿದರೂ ತಕ್ಷಣಕ್ಕೆ ಸಾಧನೆ ನಿರೀಕ್ಷೆ ಮಾಡಬಾರದು. ಅದು ಸಾಧ್ಯವೂ ಆಗುವುದಿಲ್ಲ. ಬದಲಾಗಿ ಅವಿರತ ಶ್ರಮದಿಂದ ಪ್ರಯತ್ನ ಪಟ್ಟರೆ ಸಾಧನೆ ಸಾಧ್ಯವಾಗಲಿದೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಕ್ಕಳು ನಾಯಕ್ವದ ಗುಣಗಳನ್ನು ಈಗಿನಿಂದಲೇ ಬೆಳೆಸಿಕೊಂಡರೆ ಮುಂದೆ ಅವರು ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರುತ್ತಾರೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ಉತ್ತಮ ಶಿಕ್ಷಣ ದೊರಕಿದರೆ ಅವರು ಎಂತಹ ಕಷ್ಟ ಬಂದರೂ ಮೆಟ್ಟಿ ನಿಲ್ಲುವ ಗುಣ ಬೆಳೆಸಿಕೊಳ್ಳುತ್ತಾರೆ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರ ಹೊರವಲಯದ ಸೂಲಾಲಪ್ಪ ದಿನ್ನೆಯಲ್ಲಿರುವ ಬಿಜಿಎಸ್ ವರ್ಲ್ಡ್ ಸ್ಕೂಲ್‌ನಲ್ಲಿ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ನಾಯಕ ಪದವಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಶಾಲಾ, ಕಾಲೇಜು ಅವಧಿಯಲ್ಲಿ ಓದುತ್ತಲೇ ಕಲಿತ ಅನೇಕ ಕೌಶಲಗಳು ಉದ್ಯೋಗ ಮಾಡುವಾಗ ಉಪಯೋಗಕ್ಕೆ ಬರುವ ಮೂಲಕ ಮನವರಿಕೆಯಾಗುತ್ತವೆ ಎಂದರು.ಸಾಧನೆಗೆ ಅವಿರತ ಶ್ರಮ ಮುಖ್ಯ
ವಿದ್ಯಾರ್ಥಿ ದೆಸೆಯಲ್ಲಿಯೇ ಆಡಳಿತಾತ್ಮಕ ಅಂಶಗಳನ್ನು ಕಲಿಯಬೇಕು. ಅವುಗಳು ಭವಿಷ್ಯದಲ್ಲಿ ನಮ್ಮನ್ನು ನಾಯಕನನ್ನಾಗಿ ರೂಪಿಸುತ್ತವೆ.ಯಾವುದೇ ಉದ್ಯೋಗ ಆರಂಭಿಸಿದರೂ ತಕ್ಷಣಕ್ಕೆ ಸಾಧನೆ ನಿರೀಕ್ಷೆ ಮಾಡಬಾರದು. ಅದು ಸಾಧ್ಯವೂ ಆಗುವುದಿಲ್ಲ. ಬದಲಾಗಿ ಅವಿರತ ಶ್ರಮದಿಂದ ಪ್ರಯತ್ನ ಪಟ್ಟರೆ ಮಾತ್ರ ಐದಾರು ವರ್ಷದ ಬಳಿಕ ಸಾಧನೆ ಸಾಧ್ಯವಾಗಲಿದೆ. ವಿದ್ಯಾರ್ಥಿ ಜೀವನದ ಬಳಿಕ ಸ್ವಯಂ ಉದ್ಯೋಗಕ್ಕೆ ಮುಂದಾಗಬೇಕು ಎಂದು ಹೇಳಿದರು. ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ ಮಾತನಾಡಿ, ವಿದ್ಯಾರ್ಥಿಗಳಿಗೆ ನಾಯಕ ಗುಣ ಈಗಿನಿಂದಲೇ ಬೆಳೆಸಬೇಕು. ಕೆಲವು ಕಿ.ಮೀ ಅಂತರದಲ್ಲಿಯೇ ಆಹಾರ, ಉಡುಗೆ-ತೊಡುಗೆ ಮತ್ತಿತರ ಅಂಶಗಳಲ್ಲಿ ನಾವು ವೈವಿಧ್ಯತೆ ಕಾಣುತ್ತೇವೆ. ಆದ್ದರಿಂದ ಹೆಚ್ಚು ಹೆಚ್ಚು ಪ್ರಯಾಣ ಮಾಡಬೇಕು. ಹೆಚ್ಚು ಜನರೊಂದಿಗೆ ಮಾತನಾಡಬೇಕು. ಇದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದರು.ಪ್ರತಿಜ್ಞಾವಿಧಿ ಬೋಧನೆ
ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಎನ್.ಶಿವರಾಮ ರೆಡ್ಡಿ ವಿದ್ಯಾರ್ಥಿ ನಾಯಕರುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ,ವೈಯಕ್ತಿಕ ಬದುಕು ಮುಖ್ಯವಲ್ಲ. ಸಮಾಜ, ದೇಶಕ್ಕಾಗಿ ಬದುಕಬೇಕು. ಶಿಕ್ಷಣ ಎಂದರೆ ಬೆಳಕು ಕೊಡುವುದಾಗಿದೆ. ನಾವು ಎಲ್ಲಿಯೇ ಹೋದರು ಅಲ್ಲಿ ಬೆಳಕು ಕೊಡುವ ಜ್ಯೋತಿಗಳಾಗಬೇಕು ಎಂದರು.ಈ ಕಾರ್ಯಕ್ರಮದಲ್ಲಿ ಶಾಲೆಯ ನಾಯಕ, ಉಪನಾಯಕ, ಕ್ರೀಡಾ ನಾಯಕ, ವಿವಿಧ ಗುಂಪುಗಳ ನಾಯಕರು ಹಾಗೂ ಉಪನಾಯಕರುಗಳನ್ನು ಆಯ್ಕೆ ಮಾಡಲಾಯಿತು. ನಾಯಕರುಗಳಿಗೆ ಮುಖ್ಯ ಅಥಿತಿಗಳು ನಾಮಪಲಕಗಳನ್ನು ತೊಡಿಸಿದರು.ಈ ಸಮಾರಂಭದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಡೀನ್ ಡಾ.ಎನ್.ಮಧುಸೂದನ್, ಪ್ರಾಂಶುಪಾಲೆ ದೀಪಿಕಾ ಶರ್ಮ, ಶಿಕ್ಷಕರು, ಭೋದಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.