ವಿದ್ಯಾರ್ಥಿಗಳು ಉದ್ಯೋಗಕ್ಕೆ ಬೇಕಾದ ಕೌಶಲ್ಯ ಬೆಳೆಸಿಕೊಳ್ಳಬೇಕು: ಉಷಾ ಸಲಹೆ

| Published : Sep 16 2025, 12:03 AM IST

ವಿದ್ಯಾರ್ಥಿಗಳು ಉದ್ಯೋಗಕ್ಕೆ ಬೇಕಾದ ಕೌಶಲ್ಯ ಬೆಳೆಸಿಕೊಳ್ಳಬೇಕು: ಉಷಾ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಉತ್ತಮ ಉದ್ಯೋಗ ಪಡೆಯಬೇಕಾದರೆ ಉದ್ಯೋಗಕ್ಕೆ ಬೇಕಾದ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಣಿಜ್ಯ ವಿಭಾಗದ ಮುಖ್ಯಸ್ಥೆ ಕೆ.ಉಷಾ ಸಲಹೆ ನೀಡಿದರು.

- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಸೃಜನಾತ್ಮಕ ಚಟುವಟಿಕೆ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಉತ್ತಮ ಉದ್ಯೋಗ ಪಡೆಯಬೇಕಾದರೆ ಉದ್ಯೋಗಕ್ಕೆ ಬೇಕಾದ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಣಿಜ್ಯ ವಿಭಾಗದ ಮುಖ್ಯಸ್ಥೆ ಕೆ.ಉಷಾ ಸಲಹೆ ನೀಡಿದರು.

ಸರ್ಕಾರಿ ಪ‍್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಂತರಿಕ ಗುಣಮಟ್ಟ ಭರವಸೆ ಕೋಶ, ವಾಣಿಜ್ಯ ವಿಭಾಗ ಮತ್ತು ನಿರ್ವಹಣಾ ವಿಭಾಗದ ಆಶ್ರಯದಲ್ಲಿ ಅಂತರ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಆರಂಭ ಎಂಬ ವಿವಿಧ ಸೃಜನಾ ತ್ಮಕ ಚಟುವಟಿಕೆಗಳ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ಪ್ರಸ್ತುತ ಪದವಿ ಪಡೆದ ವಿದ್ಯಾರ್ಥಿಗಳಲ್ಲಿ ಶೇ. 51ರಷ್ಟು ಜನರು ಮಾತ್ರ ಉದ್ಯೋಗ ಪಡೆಯುತ್ತಿದ್ದಾರೆ. ಉಳಿದ ಪದವೀಧ ರರು ಉದ್ಯೋಗಕ್ಕೆ ಬೇಕಾದ ಕೌಶಲ ವಿಲ್ಲದೆ ಉದ್ಯೋಗದಿಂದ ವಂಚಿತವಾಗುವ ಸ್ಥಿತಿಯಿದೆ. ವಿದ್ಯಾರ್ಥಿಗಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿಯಿದೆಯೋ ಆ ಕ್ಷೇತ್ರದಲ್ಲಿ ಕೌಶಲ ಬೆಳೆಸಿಕೊಳ್ಳಬೇಕು. ಪ್ರಸ್ತುತ ಮಾರುಕಟ್ಟೆಯಲ್ಲಿ ಯಾವ ಉದ್ಯೋಗಕ್ಕೆ ಬೇಡಿಕೆಯಿದೆ ಎಂಬುದನ್ನು ತಿಳಿದು ಆ ಉದ್ಯೋಗಕ್ಕೆ ಬೇಕಾದ ಕೌಶಲ ಬೆಳೆಸಿಕೊಳ್ಳಬೇಕು. ಪಠ್ಯ ಪುಸ್ತಕದ ಓದಿನ ಜತೆಗೆ ಆದ್ದರಿಂದ ಪಡೆದ ಜ್ಞಾನ ಪ್ರಾಯೋಗಿಕವಾಗಿ ಅಳವಡಿಸುವುದನ್ನು ಕಲಿಯಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಕೃತಕ ಬುದ್ಧಿಮತ್ತೆ (ಎಐ) ವ್ಯಾಪಕವಾಗಿ ಬಳಸಲಾಗುತ್ತಿದ್ದು ಅದರ ಬಗ್ಗೆ ಅರಿವು ಹೊಂದಬೇಕು ಎಂದರು.

ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಎಸ್.ಡಿ.ಸತೀಶ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ತನ್ನದೇ ಆದ ಪ್ರತಿಭೆ ಇರುತ್ತದೆ. ಇದನ್ನು ಹೊರಹೊಮ್ಮಿಸಲು ಅವಕಾಶವಿರುವುದಿಲ್ಲ. ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಪ್ರಾವಿಣ್ಯತೆ ಹೊರಹೊಮ್ಮಿಸುವ ನಿಟ್ಟಿನಲ್ಲಿ ಹಲವು ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಧನಂಜಯ್ ಮಾತನಾಡಿ, ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಕೌಶಲ್ಯ ನಿರ್ವಹಣೆ ವಿಶ್ವವ್ಯಾಪಿ ಪ್ರಾಮುಖ್ಯತೆ ಹೊಂದಿದೆ. ಹೆಚ್ಚಿನ ಉದ್ಯೋಗವಕಾಶಗಳು ಇವೆ. ಹಿಂದೆ ಸೇವಾ ಕ್ಷೇತ್ರದಿಂದ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ಶೇಕಡ 26 ರಷ್ಟು ಕೊಡುಗೆ ಬರುತ್ತಿತ್ತು. ಪ್ರಸ್ತುತ ಶೇ.60 ರಷ್ಟು ಕೊಡುಗೆ ಬರುತ್ತಿದೆ. ವಿದ್ಯಾರ್ಥಿಗಳು ಬೇರೊಬ್ಬರ ಬಳಿ ಉದ್ಯೋಗಕ್ಕೆ ಹೋಗುವ ಬದಲು ತಾವೇ ಉದ್ಯಮಿಗಳಾಗಿ ಬೇರೆಯವರಿಗೆ ಉದ್ಯೋಗ ನೀಡುವ ರೀತಿ ಬೆಳೆಯಬೇಕು. ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಜ್ಞಾನದ ಜತೆಗೆ ನಿರ್ವಹಣೆ ಕೌಶಲ್ಯ ಮುಖ್ಯ ಎಂದರು.

ನಿರ್ವಹಣಾ ವಿಭಾಗದ ಮುಖ್ಯಸ್ಥ ವಿ.ಸತೀಶ್, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಂ.ಎಸ್.ಮಂಜುಶ್ರೀ, ಎಂ.ಎಸ್. ಸ್ವಾತಿ ಇದ್ದರು. ಬಿಬಿ ಆಮಿನಾ ಸ್ವಾಗತಿಸಿದರು. ಸಾನಿಯಾ, ಲಿಪ್ಸಿ ಕಾರ್ಯಕ್ರಮ ನಿರೂಪಿಸಿದರು. ಗೋವರ್ಧನ್ ವಂದಿಸಿದರು. ವಿದ್ಯಾರ್ಥಿಗಳಿಗೆ ವ್ಯವಹಾರ ಕ್ವಿಜ್,ಲೋಗೋಕ್ರಿಯೇಷನ್, ಪ್ರೋಡಕ್ಟ್ ಲಾಂಚ್, ಕಾಲೇಜ್ ಮೇಕಿಂಗ್, ಫೋಟೊ ಫಜಲ್ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.