ಹಿಂದಿ ದಿವಸ್ ಕಾರ್‍ಯಕ್ರಮ ಸ್ಥಳಕ್ಕೆ ನುಗ್ಗಿ ಕರವೇ ಸದಸ್ಯರಿಂದ ಅಡ್ಡಿ

| Published : Sep 16 2025, 12:03 AM IST

ಹಿಂದಿ ದಿವಸ್ ಕಾರ್‍ಯಕ್ರಮ ಸ್ಥಳಕ್ಕೆ ನುಗ್ಗಿ ಕರವೇ ಸದಸ್ಯರಿಂದ ಅಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಗಾಂಧಿನಗರದ ಹೊಟೇಲ್‌ವೊಂದರಲ್ಲಿ ಸೋಮವಾರ ರೈಲ್ವೆ ಇಲಾಖೆಯಿಂದ ಆಯೋಜಿಸಿದ್ದ ಹಿಂದಿ ದಿವಸ್ ಕಾರ್ಯಕ್ರಮ ಸ್ಥಳಕ್ಕೆ ತೆರಳಿ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಕಾರ್ಯಕರ್ತೆಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ. ಇದರಿಂದಾಗಿ ಆ ಕಾರ್ಯಕ್ರಮವೇ ರದ್ದಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗಾಂಧಿನಗರದ ಹೊಟೇಲ್‌ವೊಂದರಲ್ಲಿ ಸೋಮವಾರ ರೈಲ್ವೆ ಇಲಾಖೆಯಿಂದ ಆಯೋಜಿಸಿದ್ದ ಹಿಂದಿ ದಿವಸ್ ಕಾರ್ಯಕ್ರಮ ಸ್ಥಳಕ್ಕೆ ತೆರಳಿ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಕಾರ್ಯಕರ್ತೆಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ. ಇದರಿಂದಾಗಿ ಆ ಕಾರ್ಯಕ್ರಮವೇ ರದ್ದಾಗಿದೆ.

ಕರವೇ ಪ್ರತಿಭಟನೆಯಿಂದ ಬೆಚ್ಚಿದ ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಕುಟುಂಬದ ಸದಸ್ಯರು ಸ್ಥಳದಿಂದ ಕಾಲ್ಕಿತ್ತರು. ಕರವೇ ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸಹನಾ ಶೇಖರ್ ಮತ್ತು ಶ್ವೇತ ಮೋಹನ್ ಸೇರಿ ಅನೇಕ ಮಹಿಳಾ ಕಾರ್ಯಕರ್ತರು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿ ಪೋಸ್ಟರ್‌ಗಳನ್ನು ಹರಿದು ಹಾಕಿ ಹಿಂದಿ ಹೇರಿಕೆ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಸಹನಾ ಶೇಖರ್, ಕನ್ನಡನಾಡಿನಲ್ಲಿ ಕನ್ನಡವನ್ನು ಕಡೆಗಣಿಸಿ ಹಿಂದಿಯನ್ನು ಹೇರುವ ಪ್ರಯತ್ನವಾಗಿ ಹಿಂದಿ ದಿವಸವನ್ನು ಆಚರಿಸಲಾಗುತ್ತಿದೆ. ಇದಕ್ಕೆ ನಮ್ಮ ಆಕ್ಷೇಪವಿದೆ. ದೇಶದ ಎಲ್ಲಾ ಭಾಷೆಗಳನ್ನು ಸಮಾನವಾಗಿ ಕಾಣಬೇಕು ಎಂದು ಸಂವಿಧಾನವೇ ಹೇಳಿದೆ. ನಮ್ಮ ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ನಾಡಿನಲ್ಲಿ ಹಿಂದಿ ಹೇರಿಕೆ ಮೂಲಕ ಕನ್ನಡದ ಆಸ್ಮಿತೆಗೆ ಧಕ್ಕೆ ತರಲು ಪ್ರಯತ್ನಿಸಿದ ರೈಲ್ವೆ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ ಎಂದರು.

ಸ್ಥಳಕ್ಕೆ ಆಗಮಿಸಿದ ಪೊಲೀಸರು, ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು. ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ (ಸುಮೊಟೋ) ಪ್ರಕರಣ ದಾಖಲಾಗಿದೆ.