ಡ್ರಗ್ಸ್ ವ್ಯಸನ, ಮದ್ಯಪಾನ ಇಂತಹ ದುಶ್ಚಟಗಳು ಯುವಕರ ಉಜ್ವಲ ಭವಿಷ್ಯ ಹಾಳು ಮಾಡುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಡಿ.ವೈ.ಎಸ್.ಪಿ ಬಿ.ಕೆ.ಶೇಖರ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಡ್ರಗ್ಸ್ ವ್ಯಸನ, ಮದ್ಯಪಾನ ಇಂತಹ ದುಶ್ಚಟಗಳು ಯುವಕರ ಉಜ್ವಲ ಭವಿಷ್ಯ ಹಾಳು ಮಾಡುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಡಿ.ವೈ.ಎಸ್.ಪಿ ಬಿ.ಕೆ.ಶೇಖರ್ ಹೇಳಿದರು.

ಅವರು ತಾಲೂಕಿನ ಪಟ್ಟನಾಯಕನಹಳ್ಳಿ ಶಾಂತಿನಿಕೇತನ ವಿದ್ಯಾಸಂಸ್ಥೆಯ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಹಾಗೂ ನಶೆ ಮುಕ್ತ ತುಮಕೂರು ಅಭಿಯಾನ ಮತ್ತು ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಕಾಲೇಜು ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಿಸಬೇಕು, ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಮಾಡಬಾರದು. ಕಾನೂನು ಮತ್ತು ರಸ್ತೆ ಸುರಕ್ಷಿತ ಸಂಚಾರ ನಿಯಮ ಪಾಲಿಸುವುದು ನಮ್ಮ ಜವಾಬ್ದಾರಿಯಾಗಿದ್ದು, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ವಿಮೆ ಸೌಲಭ್ಯ ಇರುವ ದ್ವಿಚಕ್ರ ವಾಹನವನ್ನು ಮಾತ್ರ ಚಲಿಸುವಂತಾಗಬೇಕು. ಕಾನೂನನ್ನು ನಾವು ಗೌರವಿಸಿದರೆ, ಕಾನೂನು ನಮಗೆ ರಕ್ಷಣೆ ನೀಡುತ್ತದೆ ಸಾರ್ವಜನಿಕರು ಸಮವಸ್ತ್ರವನ್ನು ಧರಿಸದ ಪೊಲೀಸರೇ ಎಂಬುದನ್ನು ತಿಳಿಯಬೇಕು ಎಂದರು.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಪಿಎಸ್ಐ ಹರೀಶ್ ಮಾತನಾಡಿ, ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ತಡೆಯುವುದು ಪೊಲೀಸರ ಕರ್ತವ್ಯ. ಸಾರ್ವಜನಿಕರು ಕೂಡ ಪೊಲೀಸರಿಗೆ ಸಹಕಾರ ನೀಡಬೇಕು. ೧೪ ವರ್ಷ ವಯಸ್ಸಿನ ಮಕ್ಕಳು ಬಾಲಕಾರ್ಮಿಕರಾಗಲಿದ್ದು, ಇಂತಹ ಮಕ್ಕಳಿಗೆ ಕಡ್ಡಾಯವಾಗಿ ಶಾಲೆ ಬಿಟ್ಟು ಶಿಕ್ಷಣ ವಂಚಿತರನ್ನಾಗಿ ಮಾಡಿದಂತೆ ತಡೆಯಬೇಕು. ಬಾಲ ಕಾರ್ಮಿಕರು ಕಂಡುಬಂದರೆ ೧೦೯೮ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ. ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ಕಂಡು ಬಂದರೆ ೧೧೨ ಪೊಲೀಸರಿಗೆ ಕರೆ ಮಾಡಿ, ಸಾರ್ವಜನಿಕರ ಸಹಕಾರದಿಂದ ಜನಸ್ನೇಹಿ ಪೊಲೀಸ್ ವ್ಯವಸ್ಥೆ ನಿರ್ಮಾಣ ಮಾಡಲು ಸಾಧ್ಯ ಎಂದರು.

ಪಿಎಸ್ಐ ರೇಣುಕಾ ಯಾದವ್ ಮಾತನಾಡಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಪೋಕ್ಸೋ ಕಾಯ್ದೆ ಯಡಿ ಪ್ರಕರಣ ದಾಖಲಾಗಿದ್ದು, ಶಿಕ್ಷೆ ಕಡ್ಡಾಯವಾಗಲಿದೆ. ಅಪರಾಧ ಮಾಡುವ ಮುಂಚೆ ನೂರು ಸಾರಿ ಆಲೋಚನೆ ಮಾಡುವುದು ಒಳ್ಳೆಯದು ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪಿ. ಪಾಂಡುರಂಗಯ್ಯ ಮಾತನಾಡಿ ಸಮಾಜದ ನೆಮ್ಮದಿ ಬದುಕಿಗೆ ಕಾನೂನು ಮತ್ತು ಪೊಲೀಸ್ ವ್ಯವಸ್ಥೆಯೇ ಕಾರಣ ಎಂದರು.

ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ. ತಿಮ್ಮರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಪಿಎಸ್ಐ ಸುಹೇಲ್ ಅಹಮದ್, ಶಾಂತಿನಿಕೇತನ ವಿದ್ಯಾ ಸಂಸ್ಥೆಯ ಪ್ರಾಂಶುಪಾಲೆ ಪಿ.ಆರ್.ಪ್ರತಿಭಾ ಸತೀಶ್, ರೇಣುಕಾ, ಪ್ರಜ್ವಲ್, ಪಿ.ಬಿ.ಕೀರ್ತಿ ಪ್ರಜ್ವಲ್, ಇಸಿಒ ಕರಿಯಣ್ಣ, ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕೋಟ್‌...

ನಶೆ ಏರಿಸಿಕೊಂಡ ವ್ಯಕ್ತಿಗೆ ತಾವು ಮಾಡುವ ದುಷ್ಕೃತ್ಯದ ಅರಿವಿರಲಾರದು. ಎಷ್ಟೋ ಪ್ರಕರಣದಲ್ಲಿ ಡ್ರಗ್ಸ್‌ ನಿಂದಾಗಿಯೇ ಸಾಕಷ್ಟು ಸಾವು ನೋವು ಸಂಭವಿಸುವುದರಿಂದ ಯುವ ಜನರು ಅದರಿಂದ ದೂರ ಉಳಿಯಬೇಕು. ಇತರರನ್ನು ಆ ದಾರಿಯಿಂದ ಪ್ರತ್ಯೇಕಿಸಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣದಲ್ಲಿ ಕೈ ಜೋಡಿಸಬೇಕು - ಹರೀಶ್, ಪಿಎಸ್ಐ