ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಮಾದಕ ದ್ರವ್ಯಗಳ ಕಳ್ಳಸಾಗಣೆ ಮಾಡಿಸುತ್ತಿದ್ದಾರೆ ಎಂದು ಅಮೆರಿಕ ಆರೋಪಿಸಿರುವುದು ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತೆ ಹಾಸ್ಯಾಸ್ಪದವಾಗಿದೆ. ಇದೇ ಅಮೆರಿಕ ಹಿಂದೆ ಇರಾಕಿನಲ್ಲಿ ಸಮೂಹ ವಿನಾಶದ ಅಸ್ತ್ರಗಳಿವೆಂದು ಆರೋಪಿಸಿ, ವರ್ಷಗಟ್ಟಲೆ ಯುದ್ಧ ಹೂಡಿ ಅಲ್ಲಿನ ಅಧ್ಯಕ್ಷ ಸದ್ದಾಂ ಹುಸೇನ್ ಹಿಡಿದು ಕೊಲೆ ಮಾಡಿತು.

ಕನ್ನಡಪ್ರಭ ವಾರ್ತೆ ಮೈಸೂರು

ವೆನೆಜುವೆಲಾದ ಮೇಲೆ ಮಿಲಿಟರಿ ದಾಳಿ ನಡೆಸಿ ಅದರ ಚುನಾಯಿತ ಅಧ್ಯಕ್ಷರನ್ನು ಅಪಹರಿಸಿದ ಅಮೆರಿಕಾದ ಸಾಮ್ರಾಜ್ಯಶಾಹಿ ಸರ್ಕಾರದ ಯುದ್ಧಕೋರತನದ ವಿರುದ್ಧ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರು ನಗರದ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು.

ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಮಾದಕ ದ್ರವ್ಯಗಳ ಕಳ್ಳಸಾಗಣೆ ಮಾಡಿಸುತ್ತಿದ್ದಾರೆ ಎಂದು ಅಮೆರಿಕ ಆರೋಪಿಸಿರುವುದು ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತೆ ಹಾಸ್ಯಾಸ್ಪದವಾಗಿದೆ. ಇದೇ ಅಮೆರಿಕ ಹಿಂದೆ ಇರಾಕಿನಲ್ಲಿ ಸಮೂಹ ವಿನಾಶದ ಅಸ್ತ್ರಗಳಿವೆಂದು ಆರೋಪಿಸಿ, ವರ್ಷಗಟ್ಟಲೆ ಯುದ್ಧ ಹೂಡಿ ಅಲ್ಲಿನ ಅಧ್ಯಕ್ಷ ಸದ್ದಾಂ ಹುಸೇನ್ ಹಿಡಿದು ಕೊಲೆ ಮಾಡಿತು. ಆದರೆ, ಇದುವರೆಗೂ ಅಂತಹ‌ ಶಸ್ತ್ರಾಸ್ತ್ರಗಳನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಅಲ್ಲಿ ಪ್ರಜಾತಂತ್ರದ ಬದಲಿಗೆ ಮತ್ತಷ್ಟು ಅರಾಜಕತೆ, ಇಸ್ಲಾಮಿಕ್ ಮತೀಯವಾದ ಬೆಳೆದಿದೆ ಎಂದು ಕಿಡಿಕಾರಿದರು.

ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆಯ ವಿರುದ್ಧ ಯುದ್ಧ ಸಾರಿ, ಈಗ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಸಿರಿಯಾದ ಚುನಾಯಿತ ಸರ್ಕಾರವನ್ನು ಬೀಳಿಸಿ ಐಸಿಸ್ ಕೈಗೆ ಕೊಡಲಾಗಿದೆ. ಇಂತಹ ಅಮೆರಿಕಾ ವೆನೆಜುವೆಲಾದಲ್ಲಿ ಪ್ರಜಾತಾಂತ್ರಿಕ ಸರ್ಕಾರವನ್ನು ತರುವುದೆಂದು ಹೇಳಿದರೆ ನಂಬಲಸಾಧ್ಯ ಎಂದು ಆರೋಪಿಸಿದರು.

ವಾಸ್ತವದಲ್ಲಿ ವೆನೆಜುವೆಲಾ ಜಗತ್ತಿನಲ್ಲೇ ಅತಿ‌ಹೆಚ್ಚು ಕಚ್ಚಾತೈಲದ ನಿಕ್ಷೇಪಗಳನ್ನು ಹೊಂದಿದೆ. 1998ರಲ್ಲಿ ಅಧಿಕಾರಕ್ಕೆ ಬಂದ ಹೋರಾಟಗಾರ ಹ್ಯೂಗೋ ಚಾವೇಜ್ ಅಮೆರಿಕಾ ಸೇರಿದಂತೆ ಎಲ್ಲಾ ವಿದೇಶಿ ಕಂಪನಿಗಳನ್ವು ನಿಷೇಧಿಸಿ, ಎಲ್ಲಾ ತೈಲೋದ್ಯಮವನ್ನು ರಾಷ್ಟ್ರೀಕರಣ ಮಾಡಿದರು. ಅವರ ನಂತರ ನಿಕೊಲಸ್ ಮಡೂರೊ ಅವರು ಅದೇ ನೀತಿಗಳನ್ನು ಮುಂದುವರಿಸಿದ್ದಾರೆ. ಅಂದಿನಿಂದಲೂ ಅಮೆರಿಕಾವು ವೆನೆಜುವೆಲಾ ವಿರುದ್ಧ ಕತ್ತಿ ಮಸೆಯುತ್ತಲೇ ಇತ್ತು. ನಡುರಾತ್ರಿ ದರೋಡೆಕೋರರಂತೆ ವೆನೆಜುವೆಲಾದ ಅಧ್ಯಕ್ಷರ ನಿವಾಸದ ಮೇಲೆ ದಾಳಿ ನಡೆಸಿ ಅವರನ್ನು ಪತ್ನಿಯ ಜೊತೆ ಅಪಹರಿಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಂದೆ ತಾವೇ ಅಲ್ಲಿ ಆಡಳಿತ ನಡೆಸುವುದಾಗಿ ಟ್ರಂಪ್ ಹೇಳಿಕೆ ನೀಡಿದ್ದಾರೆ. ಅಮೆರಿಕಾದ ಇಂತಹ ವಿದೇಶಾಂಗ ನೀತಿಯು ಜಗತ್ತಿನ ಶಾಂತಿ ಕದಡಲು, ಭಯೋತ್ಪಾದನೆ ಬೆಳೆಯಲು ಮುಖ್ಯ ಕಾರಣವಾಗಿದೆ. ಇದು ವಿಶ್ವಮಾನವರೆಲ್ಲರಿಗೂ ಸಂಬಂಧಪಟ್ಟ ವಿಷಯವಾಗಿದೆ. ಇಂತಹ ಸಂದರ್ಭದಲ್ಲಿ ಒಂದು ಸಾರ್ವಭೌಮ ದೇಶದ ಮೇಲೆ ದಾಳಿ ಮಾಡಿದ ಅಮೆರಿಕಾದ ಆಕ್ರಮಣದ ವಿರುದ್ಧ ಜಗತ್ತಿನ ಶಾಂತಿಪ್ರಿಯ ಜನತೆ ತೀವ್ರವಾಗಿ ಹೋರಾಡಬೇಕು. ವೆನೆಜುವೆಲಾದ ಅಧ್ಯಕ್ಷರನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಭಾರತ ಸರ್ಕಾರವು ಹಿಂದಿನಂತೆ ತನ್ನ ಸಾಮ್ರಾಜ್ಯಶಾಹಿ ವಿರೋಧಿ ಶಾಂತಿಪರ ನೀತಿಯನ್ನು ಪಾಲಿಸಿ ಅಮೆರಿಕಾದ ವಿರುದ್ಧ ಜಾಗತಿಕ ಅಭಿಪ್ರಾಯ ಮೂಡಿಸಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಎಸ್‌ ಯುಸಿಐಸಿ ಜಿಲ್ಲಾ ಕಾರ್ಯದರ್ಶಿ ಬಿ. ರವಿ, ಸದಸ್ಯರಾದ ಎಂ. ಉಮಾದೇವಿ, ಯಶೋಧರ್, ಪಿ.ಎಸ್. ಸಂಧ್ಯಾ, ಹರೀಶ್, ಸುಮಾ, ಮುದ್ದುಕೃಷ್ಣ, ಆಸಿಯಾ ಬೇಗಂ, ನೀತುಶ್ರೀ, ಪುಷ್ಪಾ ಮೊದಲಾದವರು ಇದ್ದರು.