ರಾಜ್ಯದಲ್ಲಿಯೇ ಮೊಟ್ಟ ಮೊದಲು ಜಿಪಂ. ಸಿಇಒ ಜಿಲ್ಲೆಯಾದ್ಯಂತ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಅಧಿಕೃತವಾಗಿ ಆದೇಶ ಮಾಡುವ ಮೂಲಕ, ಮದ್ಯಪಾನ ಮತ್ತು ವ್ಯಸನಮುಕ್ತ ಗ್ರಾಮ ಅಭಿಯಾನಕ್ಕೆ ಮುನ್ನುಡಿ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಶಹಾಪುರ ತಾಲೂಕಿನ ಉಕ್ಕಿನಾಳ ಗ್ರಾಮ ಪಂಚಾಯಿತಿಯಲ್ಲಿ ಮದ್ಯಪಾನ ಮತ್ತು ವ್ಯಸನಮುಕ್ತ ಗ್ರಾಮ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ
ಕನ್ನಡಪ್ರಭ ವಾರ್ತೆ ಯಾದಗಿರಿ
ರಾಜ್ಯದಲ್ಲಿಯೇ ಮೊಟ್ಟ ಮೊದಲು ಜಿಪಂ. ಸಿಇಒ ಜಿಲ್ಲೆಯಾದ್ಯಂತ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಅಧಿಕೃತವಾಗಿ ಆದೇಶ ಮಾಡುವ ಮೂಲಕ, ಮದ್ಯಪಾನ ಮತ್ತು ವ್ಯಸನಮುಕ್ತ ಗ್ರಾಮ ಅಭಿಯಾನಕ್ಕೆ ಮುನ್ನುಡಿ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಶಹಾಪುರ ತಾಲೂಕಿನ ಉಕ್ಕಿನಾಳ ಗ್ರಾಮ ಪಂಚಾಯಿತಿಯಲ್ಲಿ ಮದ್ಯಪಾನ ಮತ್ತು ವ್ಯಸನಮುಕ್ತ ಗ್ರಾಮ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ತಿಳಿಸಿದರು.ಶಹಾಪುರ ತಾಲೂಕಿನ ಉಕ್ಕಿನಾಳ ಗ್ರಾಮದಲ್ಲಿ ಆಯೋಜಿಸಿದ್ದ ಮದ್ಯಪಾನ ಮತ್ತು ವ್ಯಸನ ಮುಕ್ತ ಗ್ರಾಮ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿ ಗ್ರಾಮಗಳ ಕಿರಾಣಿ, ಪಾನ್‌ಶಾಪ್‌ಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿ ನಡೆದಿದೆ. ಸರಳವಾಗಿ ಮದ್ಯ ಕೈಗೆ ಸಿಗುವುದರಿಂದ ಸಮಾಜದಲ್ಲಿ ಕುಡುಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದರಿಂದ ಕುಟುಂಬಗಳಲ್ಲಿ ಮನಶಾಂತಿ, ನೆಮ್ಮದಿ ಹಾಳಾಗಿದೆ. ಹಳ್ಳಿಗಳಲ್ಲಿ ಸಿಗುವ ಮದ್ಯ ಅಸಲಿಯೂ ಅಥವಾ ನಕಲಿಯೂ ಗೊತ್ತಿಲ್ಲ. ಇದರಿಂದ ಕುಡಿವ ವ್ಯಕ್ತಿ ಮತ್ತು ಆತನ ಕುಟುಂಬ ಸಂಕಷ್ಟ ಸಿಲುಕಿ ಪರದಾಡುವಂತಾಗುತ್ತದೆ. ಗ್ರಾಮಗಳಲ್ಲಿ ಜನರು ಸ್ವಯಂ ಪ್ರೇರಿತರಾಗಿ ಅಕ್ರಮ ಮದ್ಯ ಮಾರಾಟ ಸಂಪೂರ್ಣ ತಡೆಯಬೇಕಿದೆ. ಇದಕ್ಕೆ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸದಾ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಗ್ರಾಮಗಳಲ್ಲಿ ಸಿಗುವ ಮದ್ಯಪಾನ ಸೇವಿಸುವ ಅನೇಕ ಯುವಕರು ಚಿಕ್ಕ ವಯಸ್ಸಿನಲ್ಲಿ ಮರಣ ಹೊಂದುತ್ತಿದ್ದಾರೆ. ಇದಕ್ಕೆ ಯಾರು ಹೊಣೆ?. ಪರವಾನಗಿ ಇರುವ ಕಡೆಗಳಲ್ಲಿ ಮಾತ್ರ ಮಾರಾಟ ಮಾಡಬೇಕು. ಗ್ರಾಮಗಳಲ್ಲಿ ಮಾರಾಟ ಮಾಡಲು ಯಾವುದೇ ಹಕ್ಕು, ಬಾರ್ ಮಾಲೀಕರಿಗೆ ಇಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟಕ್ಕೆ ಮುಂದಾದರೆ ಅಂತಹ ಬಾರ್ ಮಾಲೀಕರ ವಿರುದ್ಧ ಅಬಕಾರಿ ಇಲಾಖೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಕಠಿಣ ಕ್ರಮಕ್ಕೆ ಸೂಚಿಸಲಾಗುವುದು ಎಂದು ಎಚ್ಚರಿಸಿದರು.ಮದ್ಯಪಾನ ಮುಕ್ತ ಗ್ರಾಮ ಅಭಿಯಾನಕ್ಕೆ ಸಹಕಾರ ನೀಡಿದ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ ಹಾಗೂ ಗ್ರಾಮ ಪಂಚಾಯತ್ ಮುಖಂಡರ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಪ್ರತಿಯೊಬ್ಬನಿಗೆ ಆರೋಗ್ಯ ಅತ್ಯಂತ ಮುಖ್ಯವಾಗಿದೆ. ಒಮ್ಮೆ ಚಟಗಳಿಗೆ ಬಲಿಯಾದರೆ ಅದರಿಂದ ಹೊರಬರಲು ಅಸಾಧ್ಯ. ಆದ್ದರಿಂದ ದುಶ್ಚಟಗಳಿಗೆ ಯುವಕರು ಹಾಗೂ ಸಾರ್ವಜನಿಕರು ಬಲಿಯಾಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಸಲಹೆ ನೀಡಿದರು.ಜನರಿಗೆ ಮದ್ಯಪಾನದಿಂದ ಆಗುವ ದುಷ್ಪರಿಣಾಮದ ಕುರಿತು ಜಿಲ್ಲೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಇದರ ಜತೆಗೆ ಪ್ರಜ್ಞಾವಂತರು ಹಾಗೂ ಮಹಿಳೆಯರು ಮದ್ಯಪಾನ ಮುಕ್ತ ಗ್ರಾಮಕ್ಕೆ ಮುಂದಾಗಬೇಕು ಎಂದು ಹೇಳಿದರು. ಜಿಲ್ಲಾ ಕೇಂದ್ರದಲ್ಲಿ ಮದ್ಯವ್ಯಸನಿಗಳಿಗೆ ಪುನರ್ವಸತಿ ಕೇಂದ್ರ ಸ್ಥಾಪಿಸಲು ಕೆಕೆಆರ್‌ಡಿಬಿ ಅನುದಾನದಲ್ಲಿ ಒಂದು ಕೋಟಿ ನೀಡುವುದಾಗಿ ಸಚಿವರು ತಿಳಿಸಿದರು.
ಯಾದಗಿರಿ ಜಿಲ್ಲೆಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ ಮಾತನಾಡಿ, ಯಾದಗಿರಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಮದ್ಯಪಾನ ಮತ್ತು ವ್ಯಸನ ಮುಕ್ತ ಗ್ರಾಮ ಅಭಿಯಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಆ ಮೂಲಕ ಮದ್ಯಪಾನದಿಂದ ಆಗುವ ದುಷ್ಪರಿಣಾಮದ ಕುರಿತು ಜನರಿಗೆ ಜಾಗೃತಿ ಮೂಡಿಸಲಾಗುತ್ತದೆ. ಮದ್ಯಪಾನ ಸೇವಿಸುವ ವ್ಯಕ್ತಿಗಳಿಗೆ ಕುಟುಂಬಸ್ಥರು, ಗ್ರಾಮಸ್ಥರು ಸಹ ತಿಳಿವಳಿಕೆ ಹೇಳಬೇಕು. ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಜನರು ಸ್ವಯಂ ಪ್ರೇರಿತರಾಗಿ ತಡೆಯಬೇಕಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪಿಡಿಒ ಮಡಿವಾಳಪ್ಪ ಮುದ್ನೂರು, ಗ್ರಾಮ ಪಂಚಾಯಿತಿ ಅಧ್ಯಕ್ಷ ಗೇನುಸಿಂಗ್ ರಾಠೋಡ್ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.