ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಚಾಂಶುಗರ್ಸ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಈ ವರ್ಷ 10 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದೆ ಎಂದು ಕಾರ್ಖಾನೆ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆರ್.ಮಣಿ ಹೇಳಿದರು.ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಕಾರ್ಖಾನೆಯು ಪ್ರತಿದಿನ 5 ಸಾವಿರ ಮೆಟ್ರಿಕ್ ಟನ್ ಕಬ್ಬನ್ನು ನುರಿಸುವ ಸಾಮರ್ಥ್ಯ ಹೊಂದಿದೆ. ಈ ಸಾಲಿನಲ್ಲಿ 9.50 ರಿಂದ 10 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಅರೆಯುವ ಗುರಿ ಹೊಂದಲಾಗಿದೆ. ಕೇಂದ್ರ ಸರ್ಕಾರ ನಿಗದಿ ಪಡಿಸಿರುವ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ನೀಡಲು ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಸಕಾಲದಲ್ಲಿ ಕಬ್ಬು ಕಟಾವು ಮಾಡಲು ರೈತರಿಗೆ ಅನುವಾಗುವಂತೆ ಬಳ್ಳಾರಿ, ತಮಿಳುನಾಡು ಮತ್ತು ಮಹಾರಾಷ್ಟ್ರಗಳಿಂದ ಕಾರ್ಮಿಕರ ವ್ಯವಸ್ಥೆ ಮಾಡಲಾಗಿದೆ. ಸೂಕ್ತ ದರದಲ್ಲಿ ಕಬ್ಬು ಕಟಾವು ಮಾಡಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದರು.ಪ್ರಸ್ತುತ ಸಾಲಿನಲ್ಲಿ ಸರಬರಾಜು ಆಗುವ ಕಬ್ಬಿಗೆ ಸಕಾಲದಲ್ಲಿ ಹಣ ಬಟವಾಡೆ, ಕಬ್ಬು ನಾಟಿ ಮಾಡಲು ರೈತರಿಗೆ ಸಹಾಯವಾಗಲೆಂದು ಕಾರ್ಖಾನೆಯಿಂದ ಬಡ್ಡಿ ರಹಿತ ಸಾಲದ ರೂಪದಲ್ಲಿ ಎಕರೆಗೆ 2.5 ಯಿಂದ 3 ಟನ್ ಬಿತ್ತನೆ ಕಬ್ಬಿನ ಬಿತ್ತನೆ ನೀಡಲು ವ್ಯವಸ್ಥೆ ಮಾಡಲಾಗಿದೆ. ರೈತರಿಗೆ ಕಬ್ಬಿನ ಇಳುವರಿ ಹೆಚ್ಚಿಸುವ ದೃಷ್ಟಿಯಿಂದ ಕಾರ್ಖಾನೆಯಿಂದ ಉತ್ತಮ ಗುಣಮಟ್ಟದ ಬಯೋ ಕಾಂಪೋಸ್ಟ್ ಗೊಬ್ಬರವನ್ನು ರಿಯಾಯ್ತಿ ದರದಲ್ಲಿ ನೀಡಲಾಗುತ್ತಿದೆ ಎಂದರು.
ಬೇಸಿಗೆ ಕಬ್ಬಿನ ಬೆಳೆಯಲ್ಲಿ ಇಳುವರಿ ಹೆಚ್ಚಿಸಲು ಕಾರ್ಖಾನೆಯಿಂದ ಡ್ರೋಣ್ ಮೂಲಕ ಲಘು ಪೋಷಕಾಶಗಳ ಸಿಂಪರಣೆ ಮಾಡಲು ಅಗತ್ಯ ಕ್ರಮ ಕೈಗೊಂಡು ರೈತರಿಗೆ ಕೃಷಿ ತಾಂತ್ರಿಕತೆ ಬಗ್ಗೆ ಅರಿವು ಮೂಡಿಸಲು ವಿಭಾಗಗಳ ಮಟ್ಟದಲ್ಲಿ ವಿಸಿ ಫಾರಂ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಹಯೋಗದಲ್ಲಿ ರೈತರಿಗೆ ತರಬೇತಿ ಏರ್ಪಡಿಸಲಾಗುತ್ತಿದೆ ಎಂದರು.ಇದಕ್ಕೂ ಮುನ್ನ ಗಣಪತಿ ಹೋಮ, ಚಾಮುಂಡೇಶ್ವರಿ ಪೂಜೆ ನಡೆಸಿ ಪೂರ್ಣಹೂತಿ ನೀಡಿದ ನಂತರ ಕಾರ್ಖಾನೆಗೆ ಚಾಲನೆ ನೀಡಿ ತದ ನಂತರ ಪ್ರಸಾದ ವಿನಿಯೋಗ ನಡೆಯಿತು. ಮೊದಲು ಕಬ್ಬು ತುಂಬಿಕೊಂಡು ಬಂದಂತಹ ಎತ್ತಿನಗಾಡಿ, ಟ್ರ್ಯಾಕ್ಟರ್, ಲಾರಿಗೆ ಬಹುಮಾನ ವಿತರಿಸಲಾಯಿತು.
ಈ ವೇಳೆ ಕಾರ್ಖಾನೆ ಹಿರಿಯ ಪ್ರಧಾನ ವ್ಯವಸ್ಥಾಪಕ ಸೆಂಥಿಲ್, ಪ್ರಧಾನ ವ್ಯಸ್ಥಾಪಕ ಎಂ.ರವಿ, ಕಬ್ಬು ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ಮಹದೇವು ಪ್ರಭು, ಸಹಾಯಕ ಪ್ರಧಾನ ವ್ಯವಸ್ಥಪಕ ಮಣಿಮಾರನ್, ಆಡಳಿತ ವಿಭಾಗದ ಅಧಿಕಾರಿಗಳಾದ ನಿತೇಶ್, ನಿಂಗಯ್ಯ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.