ಕಲ್ಕಂದೂರು ಕಾಫಿ ತೋಟಗಳಲ್ಲಿ ಸರ್ವೆ: ಗ್ರಾಮಸ್ಥರ ವಿರೋಧ

| Published : Apr 28 2025, 11:50 PM IST

ಸಾರಾಂಶ

ಕಲ್ಕಂದೂರು ಗ್ರಾಮದಲ್ಲಿ ಗ್ರಾಮಸ್ಥರಿಗೆ ಸೇರಿದ ತೋಟಗಳಲ್ಲಿ ಆರ್‌ಎಫ್‌ಓ ನೇತೃತ್ವದಲ್ಲಿ ಕಾಫಿ ತೋಟಗಳನ್ನು ಸರ್ವೆ ಮಾಡಿಸುತ್ತಿದ್ದು ರೈತ ಹೋರಾಟ ಸಮಿತಿ ತಡೆದು ಸರ್ವೆಯನ್ನು ತಾತ್ಕಾಲಿಕವಾಗಿ ಮುಂದೂಡಿದ ಘಟನೆ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಸಮೀಪದ ಕಲ್ಕಂದೂರು ಗ್ರಾಮದಲ್ಲಿ ಗ್ರಾಮಸ್ಥರಿಗೆ ಸೇರಿದ ತೋಟಗಳಲ್ಲಿ ಆರ್‌ಎಫ್‌ಓ ನೇತೃತ್ವದಲ್ಲಿ ಕಾಫಿ ತೋಟಗಳನ್ನು ಸರ್ವೆ ಮಾಡಿಸುತ್ತಿದ್ದು, ರೈತ ಹೋರಾಟ ಸಮಿತಿ ತಡೆದು, ಸರ್ವೆಯನ್ನು ತಾತ್ಕಾಲಿಕವಾಗಿ ಮುಂದೂಡಿದ ಘಟನೆ ನಡೆಯಿತು.

ಕಲ್ಕಂದೂರು ಗ್ರಾಮದಲ್ಲಿ ಬನ್ನಳ್ಳಿ ಗೋಪಾಲ್ ಎಂಬುವವರಿಗೆ ಸೇರಿದ ಕಾಫಿ ತೋಟದ ಸರ್ವೆ ನಡೆಸಲಾಗುತಿತ್ತು. ತೋಟದ ಮಾಲೀಕರಿಗೆ ಯಾವುದೇ ನೊಟೀಸ್ ನೀಡದೆ, ಸರ್ವೆ ಮಾಡುತ್ತಿರುವುದನ್ನು ತಿಳಿದು, ಸ್ಥಳಕ್ಕೆ ತೆರಳಿದ ರೈತ ಹೋರಾಟ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಜಾಗದ ಮಾಲೀಕರು ಸರ್ವೆಯನ್ನು ಮಾಡುತ್ತಿರುವುದಕ್ಕೆ ಪ್ರಬಲವಾಗಿ ವಿರೋಧಿಸಿದರು.

ರೈತ ಹೋರಾಟ ಸಮಿತಿ ಅದ್ಯಕ್ಷ ಚರ್ಕವರ್ತಿ ಸುರೇಶ್ ಮಾತನಾಡಿ, ಒತ್ತುವರಿ ತೆರವಿನ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಸಚಿವ ಈಶ್ವರಖಂಡ್ರೆ ಸೇರಿದಂತೆ ರಾಜ್ಯ ಸರ್ಕಾರದ ಕಾರ್ಯದರ್ಶಿಗಳಿಗೆ ಮನವಿ ಮಾಡಲಾಗಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಆದರೆ, ಅರಣ್ಯ ಇಲಾಖೆಯ ಸಿಬ್ಬಂದಿ, ಆಗಮಿಸಿ ಜಾಗದ ಮಾಲೀಕರಿಗೆ ಮಾಹಿತಿ ನೀಡದೆ ಸರ್ವೆ ನಡೆಸುತ್ತಿರುವುದು ಖಂಡನೀಯ, ಅರಣ್ಯ, ಕಂದಾಯ ಮತ್ತು ರೈತರು ಒಟ್ಟಾಗಿ ಸೇರಿ ಸರ್ವೇ ನಡೆಸುವಂತೆ ಮನವಿ ಮಾಡಲಾಗಿದೆ ಎಂದು ಅರಣ್ಯಾಧಿಕಾರಿಗಳಿಗೆ ಮನವರಿಕೆ ಮಾಡಲಾಯಿತು.

ಡಿಆರ್‌ಎಫ್‌ಓ ಸತೀಶ್ ಮಾತನಾಡಿ, ರೈತರು ಸರ್ಕಾರಕ್ಕೆ ಮನವಿ ಮಾಡಿದರೂ, ಇಲ್ಲಿಯವರೆಗೆ ಸರ್ವೆ ನಡೆಸದಿರುವ ಬಗ್ಗೆ ಯಾವುದೇ ಆದೇಶವಾಗಿಲ್ಲ. ರೈತರು ಹೋರಾಟ ಮಾಡಿದರೂ, ಇಲಾಖೆ ಸರ್ವೆ ಕಾರ್ಯ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ. ಸರ್ಕಾರದ ಆದೇಶ ತಂದಲ್ಲಿ ಮಾತ್ರ ಸರ್ವೆ ನಡೆಸುವುದನ್ನು ನಿಲ್ಲಿಸಲಾಗುವುದು ಎಂದು ಮತ್ತೆ ಸರ್ವೆ ನಡೆಸಲು ಮುಂದಾದಾಗ ರೈತರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಸರ್ವೆ ಕಾರ್ಯ ನಿಲ್ಲಿಸದೆ, ಮುಂದುವರೆಸಿದಲ್ಲಿ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದಾಗ ಅಧಿಕಾರಿಗಳು ಸರ್ವೆಯನ್ನು ತಾತ್ಕಾಲಿಕವಾಗಿ ಮುಂದೂಡಿದರು.

ಸಮಿತಿಯ ದಿವಾಕರ್, ದಳವಾಯಿ ರಾಜು, ಬನ್ನಳ್ಳಿ ಗೋಪಾಲ್, ಕಿಶೋರ್, ಕಲ್ಕಂದೂರು ಪ್ರಕಾಶ್, ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್ ಮತ್ತು ಅರಣ್ಯಾಧಿಕಾರಿ ವಿಶ್ವ ಸೇರಿದಂತೆ ಹಲವರು ಇದ್ದರು.