ಸಾರಾಂಶ
ಮುಂಡರಗಿ: 15ರಿಂದ 19ನೇ ಶತಮಾನದವರೆಗೆ ಆಳ್ವಿಕೆ ನಡೆಸಿದ್ದ ಕಲಕೇರಿ ದೇಶಗತಿ ಮನೆತನಕ್ಕೆ ತನ್ನದೇಯಾದ ಇತಿಹಾಸವಿದ್ದು, ಇದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಅಂದು ಈ ಕಲಕೇರಿ ದೇಶಗತಿ ಮನೆತನ ಬ್ರಿಟಿಷ ವಿರೋಧಿ ಚಟುವಟಿಕೆ ಕೇಂದ್ರವಾಗಿತ್ತು ಎಂದು ವಿಧಾನ ಪರಿಷತ್ ಸಭಾಪತಿ ಡಾ. ಬಸವರಾಜ ಹೊರಟ್ಟಿ ಹೇಳಿದರು.
ಅವರು ಸೋಮವಾರ ಶ್ರೀ ಜ.ಅ.ವಿದ್ಯಾ ಸಮಿತಿಯ ಶತಮಾನೋತ್ಸವ ಸಂಭ್ರಮದ ಅಡಿಯಲ್ಲಿ ಕ.ರಾ. ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗ, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಬೆಂಗಳೂರು, ಪ್ರಾದೇಶಿಕ ಕಚೇರಿ ಧಾರವಾಡ ಹಾಗೂ ದೇಶಗತಿ ಸಂಶೋಧನಾ ಸಂಸ್ಥೆ ಕಲಕೇರಿ ಇವುಗಳ ಸಹಯೋಗದಲ್ಲಿ ಜರುಗಿದ ಕಣ್ಮರೆಯಾದ ದೇಶಗತಿ ಕಲಕೇರಿ ಸಂಸ್ಥಾನದ ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಮುಂಡರಗಿ ತಾಲೂಕಿನಲ್ಲಿರುವ ಕಲಕೇರಿ ದೇಶಗತಿ ಸಂಸ್ಥಾನದ ಬಗ್ಗೆ ಮತ್ತಷ್ಟು ಇತಿಹಾಸ ಬೆಳಕಿಗೆ ಬರಬೇಕು. ಈ ಇತಿಹಾಸವನ್ನು ಬಲ್ಲವರು ಶಾಲಾ-ಕಾಲೇಜುಗಳಿಗೆ ತೆರಳಿ ಮಕ್ಕಳಿಗೆ ತಿಳಿಸುವ ಕೆಲಸ ನಿರಂತರ ನಡೆಯಬೇಕು. ಮಕ್ಕಳಲ್ಲಿ ನಮ್ಮ ಸಂಸ್ಕೃತಿ ನಶಿಸುತ್ತಿರುವ ಈ ಸಂದರ್ಭದಲ್ಲಿ ಇಂತಹ ಇತಿಹಾಸ ಪ್ರಜ್ಞೆಯನ್ನು ಬೆಳೆಸುವುದರೊಂದಿಗೆ ಅವರನ್ನು ಮುಖ್ಯ ವಾಹಿನಿಗೆ ತರುವಂತ ಕಾರ್ಯ ನಡೆಯಬೇಕು.
ಕಲಕೇರಿ ದೇಶಗತಿ ಸಂಸ್ಥಾನದ ಹಾಗೆ ರಾಜ್ಯದಲ್ಲಿರುವ ಇನ್ನು ಅನೇಕ ಸಂಸ್ಥಾನಗಳು ಬೆಳಕಿಗೆ ಬಂದಿಲ್ಲ. ಇತಿಹಾಸ ಸಂಶೋಧಕರು ಅವುಗಳನ್ನು ಬೆಳಕಿಗೆ ತರುವ ಕೆಲಸ ಮಾಡಬೇಕು. ಬ್ರಿಟಿಷರ ವಿರುದ್ಧ ಹೋರಾಡಿದ ಇಂತಹ ಎಷ್ಟೋ ಮನೆತನಗಳು ಮರೆಯಾಗಿವೆ. ಇವುಗಳು ಇತಿಹಾಸ ಪುಟಗಳಲ್ಲಿ ದಾಖಲಾಗುವ ಕೆಲಸ ನಡೆಯಬೇಕು. ಈ ದೇಶಗತಿ ಮನೆತನದಲ್ಲಿ ಹುಟ್ಟಿದವರ ಕೆಲವು ಕುಟುಂಬಗಳ ಪರಿಸ್ಥಿತಿ ಇದೀಗ ಸರಿ ಇಲ್ಲದೇ ಹೋದಲ್ಲಿ ಅಂತವರ ವಿಳಾಸವನ್ನು ಗುರುತಿಸಿ ಸರ್ಕಾರಕ್ಕೆ ಮಾಹಿತಿ ನೀಡುವ ಕಾರ್ಯವನ್ನು ಇತಿಹಾಸಕಾರರು ಮಾಡಬೇಕು. ಅಂದಾಗ ಅವರಿಗೆ ಸರ್ಕಾರದಿಂದ ಸಹಾಯ ಮಾಡಲು ಅನುಕೂಲವಾಗುತ್ತದೆ ಎಂದರು.ಈ ಸಮಾಜದಲ್ಲಿ ಯಾರ ಋಣವನ್ನಾದರೂ ತೀರಿಸಬಹುದು. ಆದರೆ, ತಾಯಿಯ ಋಣವನ್ನು ತೀರಿಸದಾಗದು. ಮಕ್ಕಳಲ್ಲಿ ಈ ಪ್ರಜ್ಞೆಯನ್ನು ಬೆಳೆಸುವ ನೀತಿ ಶಿಕ್ಷಣ ಶಾಲಾ ಕಾಲೇಜುಗಳಲ್ಲಿ ಜಾರಿಯಾಗಬೇಕು. ಈ ಕುರಿತು ತಾವು ಈಚೆಗೆ ಶಿಕ್ಷಣ ಸಚಿವರ ಗಮನಕ್ಕೆ ತಂದಿದ್ದು, ಸಚಿವರು ಬರುವ ಶೈಕ್ಷಣಿಕ ವರ್ಷದಿಂದ ಶಾಲಾ-ಕಾಲೇಜುಗಳಲ್ಲಿ ನೈತಿಕ ಶಿಕ್ಷಣವನ್ನು ಅಳವಡಿಸುವ ಭರವಸೆ ನೀಡಿದ್ದಾರೆ ಎಂದರು.
ಸಂಶೋಧಕ ಡಾ.ಆರ್.ಎಂ. ಷಡಕ್ಷರಯ್ಯ ಆಶಯ ಮಾತುಗಳನ್ನಾಡಿ, ಕರ್ನಾಟಕದ ಇತಿಹಾಸ ಇನ್ನೂ ಸಂಪೂರ್ಣವಾಗಿಲ್ಲ. ಕಲಕೇರಿ ದೇಶಗತಿ ಮನೆತನದಂತಹ ಅದೇಷ್ಟೋ ದೇಶಗತಿ ಮನೆತನಗಳು ಸರ್ಕಾರದ ದಾಖಲೆಗಳಲ್ಲಿ ಇಲ್ಲ. ಸರ್ಕಾರ ಇಂತಹ ದೇಶಗತಿ ಮನೆತನಗಳನ್ನು ಗುರುತಿಸಿ ಆ ಕುಟುಂಬದಲ್ಲಿನ ಒಬ್ಬರಿಗೆ ಸರಕಾರಿ ನೌಕರಿ ಕೊಡಬೇಕು. ಅವರಲ್ಲಿರುವ ಸಂಗ್ರಹಗಳನ್ನು ಸಂರಕ್ಷಿಸಬೇಕು ಮತ್ತು ಪುನರುಜ್ಜೀವನ ಗೊಳಿಸಬೇಕು ಎಂದರು.ವಿಚಾರ ಸಂಕಿರಣದ ಸಾನಿಧ್ಯ ವಹಿಸಿದ್ದ ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಮಾತನಾಡಿ, ಹಣ ಮತ್ತು ಬುದ್ಧಿ ಇದ್ದವರು ಇತಿಹಾಸವನ್ನು ತಮ್ಮಂತೆ ಮಾಡಿಕೊಂಡಿದ್ದಾರೆ. ಇದ್ದಂತ ಇತಿಹಾಸವನ್ನು ತಿರುಚಿ ತಾವು ಮೆರೆಯುವ ಹಾಗೆ ಮಾಡಿದ್ದಾರೆ. ಆ ಕಾಲಘಟ್ಟದಲ್ಲಿ ತಪ್ಪನ್ನು ಒಪ್ಪುವ ಹಾಗೆ ಮಾಡಿ ತಪ್ಪನ್ನೆ ಇತಿಹಾಸದ ಪುಟಗಳಲ್ಲಿ ದಾಖಲಿಸುವ ಕೆಲಸ ಮಾಡಿದ್ದಾರೆ. ಅನೇಕ ಸಾಹಿತಿಗಳು ಮತ್ತು ಲೇಖಕರೂ ಸಹ ಇತಿಹಾಸವನ್ನು ತಿರುಚಿ ದಾಖಲಿಸಿದ ಉದಾಹರಣೆಗಳಿವೆ. ಅಂತಹದರಲ್ಲಿ ಕಲಕೇರಿ ದೇಶಗತಿ ಸಂಸ್ಥಾನದ ಇತಿಹಾಸವೂ ಒಂದು. ಈ ಇತಿಹಾಸ ಮತ್ತಷ್ಟು ಬೆಳಕಿಗೆ ಬರಬೇಕು. ಕೆಲವು ಇತಿಹಾಸಕಾರರಿಂದ ಮುಂಡರಗಿ ಅನ್ನದಾನೀಶ್ವರ ಸಂಸ್ಥಾನಮಠದ ಇತಿಹಾಸವೂ ಸಹ ತಿರಚಲ್ಪಟ್ಟಿತ್ತು. ನಂತರದಲ್ಲಿ ತಾವು ಅದನ್ನು ಶ್ರೇಷ್ಠ ಇತಿಹಾಸಕಾರರಿಗೆ ಜವಾಬ್ದಾರಿ ನೀಡುವ ಮೂಲಕ ಸರಿಪಡಿಸಲಾಯಿತು ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.
ಕಾಲೇಜಿನ ಮೇಲ್ವಿಚಾರನಾ ಸಮಿತಿಯ ಕಾರ್ಯಾಧ್ಯಕ್ಷ ಆರ್.ಎಲ್. ಪೊಲೀಸಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಧಾರವಾಡ ಪತ್ರಗಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಡಾ.ಮಂಜುಳಾ ಎಲಿಗಾರ, ಡಾ.ಶಿಲಾಧರ ಮುಗಳಿ ಮತ್ತು ಡಾ.ಎಸ್.ಕೆ. ವಾಸುದೇವ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ.ಗವಿಸಿದ್ದಯ್ಯ, ನಾಗೇಶ ಹುಬ್ಬಳ್ಳಿ, ಎಂ.ಕೆ. ಲಮಾಣಿ, ಡಾ.ಬಿ.ಜಿ. ಜವಳಿ, ಎಂ.ಜಿ. ಗಚ್ಚಣ್ಣವರ, ಡಾ. ವನಜಾಕ್ಷಿ ಭರಮಗೌಡರ, ಕೊಟ್ರಪ್ಪ ದೇಸಾಯಿ, ಕಮಲಾಬಾಯಿ ದೇಸಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಕಲಕೇರಿ ದೇಶಗತಿ ಮನೆತನದ ಕೊಟ್ರಪ್ಪ ದೇಸಾಯಿ ದಂಪತಿಗಳಿಗೆ ಶ್ರಿಗಳಿಂದ ಗುರುರಕ್ಷೆ ಜರುಗಿತು.
ಪ್ರಾ.ಡಾ.ಡಿ.ಸಿ.ಮಠ ಸ್ವಾಗತಿಸಿದರು. ಕಲಕೇರಿ ದೇಶಗತಿ ಸಂಶೋಧನ ಸಂಸ್ಥೆಯ ಸಂಸ್ಥಾಪಕ ರವಿರಾಜ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಆರ್.ಎಚ್. ಜಂಗಣವಾರಿ ಮತ್ತು ಡಾ. ಸಂತೋಷ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.