ಸಾರಾಂಶ
ತಾಲೂಕಿನ ಜನರು ಹೆಚ್ಚಾಗಿ ಅವಲಂಬಿಸಿರುವುದೇ ಅಡಿಕೆ ಬೆಳೆಯ ಮೇಲೆ. ಶರಾವತಿ ನದಿಯ ಇಕ್ಕೆಲಗಳಲ್ಲಿ ವಾಸವಾಗಿರುವ ಜನರ ಮೂಲ ಕಸುಬು ಕೃಷಿ. ಆದರೆ ಅಡಿಕೆ ಬೆಳೆಯನ್ನೇ ನಂಬಿ ಕುಳಿತರೆ ಆಗದು ಎನ್ನುವ ಹಂತಕ್ಕೆ ಇಲ್ಲಿನ ಜನರು ಅದಾಗಲೇ ಬಂದಿದ್ದಾರೆ. ಕ್ಯಾನ್ಸರ್ ಕಾರಕ ಎನ್ನುವುದು ಅಡಕೆಗೆ ಅಂಟಿದ ಕಳಂಕ
ಪ್ರಸಾದ್ ನಗರೆ
ಹೊನ್ನಾವರ : ತಾಲೂಕಿನ ಜನರು ಹೆಚ್ಚಾಗಿ ಅವಲಂಬಿಸಿರುವುದೇ ಅಡಿಕೆ ಬೆಳೆಯ ಮೇಲೆ. ಶರಾವತಿ ನದಿಯ ಇಕ್ಕೆಲಗಳಲ್ಲಿ ವಾಸವಾಗಿರುವ ಜನರ ಮೂಲ ಕಸುಬು ಕೃಷಿ. ಆದರೆ ಅಡಿಕೆ ಬೆಳೆಯನ್ನೇ ನಂಬಿ ಕುಳಿತರೆ ಆಗದು ಎನ್ನುವ ಹಂತಕ್ಕೆ ಇಲ್ಲಿನ ಜನರು ಅದಾಗಲೇ ಬಂದಿದ್ದಾರೆ. ಇದಕ್ಕೆ ರೈತರು ಕಂಡುಕೊಂಡ ಕಾರಣ ಹಲವಿದೆ.
ಅದರ ಜೊತೆಯಲ್ಲಿ ಸರ್ಕಾರದ ಧೋರಣೆಗಳು ಸಹ ರೈತಾಪಿ ವರ್ಗಕ್ಕೆ ಬರೆ ಎಳೆಯುತ್ತಿವೆ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ತನ್ನ ಸಮಾವೇಶದಲ್ಲಿ ಅಡಿಕೆ ನಿಷೇಧಿಸಬೇಕು ಎಂಬ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದೆ. ಇದು ಸಹಜವಾಗಿಯೇ ಈ ಭಾಗದ ಜನರಲ್ಲಿ ಆತಂಕ ಹೆಚ್ಚಿಸಿದೆ.
ಕಳೆದ ೭ ದಶಕಗಳಿಂದ ಅಡಿಕೆ ಬಗ್ಗೆ ಒಂದಲ್ಲ ಒಂದು ತಗಾದೆ ತೆಗೆಯುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ ಕ್ಯಾನ್ಸರ್ ಕಾರಕ ನೆಪದಲ್ಲಿ ಅಡಿಕೆ ನಿಷೇಧಿಸಲು ಕರೆ ನೀಡಿದೆ. ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಆಗ್ನೇಯ ಒಕ್ಕೂಟದೊಂದಿಗಿನ ವಿಶ್ವ ಆರೋಗ್ಯ ಸಂಸ್ಥೆಯ ಸಮಾವೇಶದಲ್ಲಿ ಅಡಿಕೆಯ ಬಗ್ಗೆ ಕಠಿಣ ಕ್ರಮದ ಬಗ್ಗೆ ಮಾತನ್ನು ಆಡಿದೆ. ಪ್ರಧಾನ ಬೆಳೆಯಾಗಿ ಬೆಳೆಯುತ್ತಿರುವ ಅಡಿಕೆ ನಿಷೇಧಿಸಿದರೆ ಮುಂದೆ ತಮ್ಮ ಗತಿಯೇನು ಎಂಬ ಪ್ರಶ್ನೆಯನ್ನು ರೈತರು ಕೇಳಿಕೊಳ್ಳಲು ಆರಂಭಿಸಿದ್ದಾರೆ. ಅಲ್ಲದೆ ತಮ್ಮ ಜಮೀನುಗಳ ಕಥೆಯೇನು ಎಂಬ ಆತಂಕವು ಜನಸಾಮಾನ್ಯರಲ್ಲಿ ಎದ್ದಿದೆ.
ಕ್ಯಾನ್ಸರ್ ಕಾರಕ ಉತ್ಪನ್ನದ ಸಾಲಲ್ಲಿ ಅಡಿಕೆ:
ಇನ್ನು ಶ್ರೀಲಂಕಾದಲ್ಲಿ ನಡೆದಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಸಮಾವೇಶದಲ್ಲಿ ಅಡಿಕೆಯನ್ನು ಕ್ಯಾನ್ಸರ್ ಕಾರಕ ಪಟ್ಟಿಯಲ್ಲಿ ಸೇರಿಸಿರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಭಾರತ, ಬಾಂಗ್ಲಾ, ಉತ್ತರ ಕೋರಿಯಾ, ಮಯನ್ಮಾರ್, ಶ್ರೀಲಂಕಾ, ಥೈಲ್ಯಾಂಡ್ ಇತರ ದೇಶಗಳು ಈ ಸಮಾವೇಶದಲ್ಲಿ ಭಾಗಿಯಾಗಿದ್ದವು. ಇಲ್ಲಿ ಕ್ಯಾನ್ಸರ್ ಕಾರಕ ವಸ್ತುಗಳ ವಿಚಾರದಲ್ಲಿ ಸಮಾವೇಶದಲ್ಲಿ ಚರ್ಚೆ ನಡೆಸಲಾಗಿದೆ. ಒಕ್ಕೂಟದ ಎಲ್ಲಾ ದೇಶಗಳಲ್ಲಿ ಒಟ್ಟಾಗಿ ೨೮ ಕೋಟಿ ವಯಸ್ಕರು, ೧.೧ ಕೋಟಿ ಅಪ್ರಾಪ್ತರು ಹೊಗೆರಹಿತ ತಂಬಾಕು, ನಿಕೋಟಿನ್ ಮತ್ತಿತರ ವ್ಯಸನಿಗಳಿದ್ದಾರೆ. ಇದು ಕ್ಯಾನ್ಸರ್ ಕಾರಣವಾಗಿದ್ದು, ಇವುಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಈ ಉತ್ಪನ್ನಗಳ ಬಗ್ಗೆ ಚರ್ಚೆಯನ್ನು ನಡೆಸುವಾಗ ಆ ಮಾದಕ ವಸ್ತುಗಳ ಸಾಲಿನಲ್ಲಿ ಅಡಿಕೆಯನ್ನು ಕೂಡ ಸೇರಿಸಲಾಗಿದೆ.
ಹೊಗೆರಹಿತ ತಂಬಾಕು, ನಿಕೋಟಿನ್, ಅಡಿಕೆ ಉತ್ಪಾದನೆ ಹಾಗೂ ಮಾರಾಟ ಇತ್ಯಾದಿಗಳ ಮೇಲೆ ನಿಯಂತ್ರಣಕ್ಕೆ ಚೌಕಟ್ಟು, ರಾಷ್ಟ್ರೀಯ ಶಾಸನ ತರಬೇಕು. ಉತ್ಪಾದನೆ, ಮಾರಾಟ, ಜಾಹೀರಾತು, ಪ್ರಚಾರ, ಪ್ರಾಯೋಜಕತ್ವ ನಿಷೇಧಕ್ಕಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚಿಸಲಾಗಿದೆ. ಅಡಿಕೆ ಸಹಿತ ಎಲ್ಲಾ ಉತ್ಪನ್ನ ನಿಷೇಧಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ.
ಅಡಿಕೆಗೆ ಅಂಟಿದೆ ಕಳಂಕ:
ಇನ್ನು ಅಡಿಕೆಯನ್ನು ಗುಟ್ಕಾ ತಯಾರಿಕೆಗೆ ಬಳಸುತ್ತಾರೆ ಎಂಬ ಕಾರಣಕ್ಕೆ ಅದನ್ನು ಕ್ಯಾನ್ಸರ್ ಕಾರಕ ಉತ್ಪನ್ನಗಳ ಪಟ್ಟಿಗೆ ಸೇರಿಸಿದ್ದು ನಿಜಕ್ಕೂ ದುರಂತವೇ ಸರಿ. ಈ ಹಿಂದಿನ ಕಾಲದಿಂದಲೂ ಅಡಿಕೆ ಬಳಸಲಾಗುತ್ತದೆ. ತಲೆಮಾರಿನ ಹಿಂದಿನ ಜನರು ಬಳಸಿದ್ದಾರೆ. ಆದರೆ ಕೇವಲ ಅಡಿಕೆಯಿಂದ ಕ್ಯಾನ್ಸರ್ ಬರುತ್ತದೆ ಎನ್ನುವುದನ್ನು ಬೆಳೆಗಾರರು ನಂಬುವ ಪರಿಸ್ಥಿತಿಯಲ್ಲಿಲ್ಲ. ಅಲ್ಲದೆ ಧಾರ್ಮಿಕ ಆಚರಣೆಯಲ್ಲೂ ಅಡಿಕೆಯನ್ನು ಬಳಸುವುದು ಸಹ ನಡೆದುಕೊಂಡು ಬಂದಿದೆ. ಅಡಿಕೆ ಕ್ಯಾನ್ಸರ್ ತರುತ್ತದೆ ಎನ್ನುವುದು ಕೇವಲ ಅದಕ್ಕೆ ಅಂಟಿದ ಕಳಂಕವಾಗಿದೆ.
;Resize=(128,128))
;Resize=(128,128))
;Resize=(128,128))