ಕುಳದ ಸಂಗಾತ ಕವನ ಸಂಕಲನ ಬಿಡುಗಡೆ

| Published : Oct 28 2025, 12:37 AM IST

ಸಾರಾಂಶ

ವರ್ತಮಾನದ ಬದುಕನ್ನು ತೀವ್ರವಾಗಿ ವಿಡಂಬಿಸುತ್ತಲೇ ಅಚ್ಚರಿ ಹುಟ್ಟಿಸುವ ಚಂಸು ಕಾವ್ಯ ಎಚ್ಚರದ ಘಂಟೆಯಾಗಿಯೂ ಮಾರ್ದನಿಸುತ್ತದೆ ಎಂದು ಸಾಹಿತಿ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಹೇಳಿದರು.

ರಾಣಿಬೆನ್ನೂರು: ವರ್ತಮಾನದ ಬದುಕನ್ನು ತೀವ್ರವಾಗಿ ವಿಡಂಬಿಸುತ್ತಲೇ ಅಚ್ಚರಿ ಹುಟ್ಟಿಸುವ ಚಂಸು ಕಾವ್ಯ ಎಚ್ಚರದ ಘಂಟೆಯಾಗಿಯೂ ಮಾರ್ದನಿಸುತ್ತದೆ ಎಂದು ಸಾಹಿತಿ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಹೇಳಿದರು. ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸ್ಥಳೀಯ ಮಾತೋಶ್ರೀ ಮಹದೇವಕ್ಕ ಮಂಗಳವಾದ್ಯ ಮತ್ತು ತರಬೇತಿ ಸಂಸ್ಥೆ, ಮೆಡ್ಲೇರಿ ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕವಿ ಚಂ.ಸು. ಪಾಟೀಲ ವಿರಚಿತ ಕುಳದ ಸಂಗಾತ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಕಾಲೀನ ಜಗತ್ತಿನ ಎಲ್ಲ ಆಗುಹೋಗುಗಳನ್ನು ಸಾಮಾನ್ಯನೊಬ್ಬನ ಕಣ್ಣಿನಿಂದ ನೋಡಿ, ಜನಪರವಾಗಿ ಪ್ರತಿನುಡಿಯುವ ಧಾವಂತ ಕುಳದ ಸಂಗಾತದ ಕವಿತೆಗಳಲ್ಲಿದೆ. ಕೃಷಿ ಸಮಸ್ಯೆಗಳೂ ಸೇರಿದಂತೆ, ಜನಸಾಮಾನ್ಯರ ದೈನಂದಿನ ನಿಟ್ಟುಸಿರನ್ನೆ ಪಿಸುಗುಡುವಂತೆ ಇಲ್ಲಿನ ಕವಿತೆಗಳು ಎದೆ ತಟ್ಟುತ್ತವೆ. ಕಾವ್ಯದ ವಿನ್ಯಾಸದಲ್ಲಿ ಹೊಸ ಪ್ರಯೋಗ ಹಾಗೂ ವಸ್ತುವಿಷಯ ವೈವಿಧ್ಯತೆಗಳಿಂದ ಕುಳದ ಸಂಗಾತ'''''''' ವಿಶೇಷ ಎನಿಸುತ್ತದೆ ಎಂದರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿದ್ಯಮಾನಗಳ ಜೊತೆ ಸ್ಥಳೀಯ ಘಟನಾವಳಿಗಳೂ ಇಲ್ಲಿ ಕಾವ್ಯಕ್ಕೆ ವಸ್ತು ಆಗಿವೆ. ಚಂಸು ಅವರ ಕವಿತೆಗಳು ಸಮಕಾಲೀನ ರಾಜಕೀಯದ ಬಗ್ಗೆ ಮಾತನಾಡುತ್ತಲೇ ಬಂಡವಾಳಶಾಹಿಯ ಧೋರಣೆಗಳ ಬಗ್ಗೆ ಎಚ್ಚರಿಸುತ್ತವೆ. ಅವರ ಕವಿತೆಗಳನ್ನು ಒಂದು ಚೌಕಟ್ಟಿನಲ್ಲಿ ಇಟ್ಟು ಮಾತನಾಡುವುದೇ ಅಸಾಧ್ಯ. ಚಂಸು ವಿಶಾಲ ವ್ಯಾಪ್ತಿಯ ಕವಿ. ಅವನೊಳಗೊಬ್ಬ ಪತ್ರಕರ್ತ ಇರುವಂತೆ, ತನ್ನ ಜನರನ್ನು ಪ್ರೀತಿಸುವ ರೈತನೂ ಇದ್ದಾನೆ ಎಂದರು.ಅಧ್ಯಕ್ಷತೆ ವಹಿಸಿದ್ದ ವೈದ್ಯ ಡಾ. ಗಿರೀಶ ಕೆಂಚಪ್ಪನವರ ಮಾತನಾಡಿ, ಚಂಸು ಅವರ ವೈಚಾರಿಕ ಕವಿತೆಗಳಿಗಿಂತ ಅವರ ಪರಿಸರ ಕಾಳಜಿ, ಬದುಕಿನ ಪ್ರೇಮದ ಭಾವಗೀತೆಗಳೆ ನನಗೆ ಇಷ್ಟವಾಗುತ್ತವೆ. ಸೈದ್ಧಾಂತಿಕ ಸಂಘರ್ಷದಲ್ಲಿ ಅವರು ಕಳೆದು ಹೋಗದಿರಲಿ ಎಂದರು.ಪಿಎಲ್‌ಡಿ ಬ್ಯಾಂಕಿನ ಮಾಜಿ ನಿರ್ದೇಶಕ ಶಿವಪುತ್ರಪ್ಪ ಕೊಪ್ಪದ ಪುಸ್ತಕ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಪಿಎಚ್‌ಡಿ ಪುರಸ್ಕೃತರಾದ ಡಾ. ಮಂಜಪ್ಪ ಚಲವಾದಿ, ಡಾ. ಗುರು ಎಸ್. ಚಲವಾದಿ ಹಾಗೂ ಕಲಾವಿದರುಗಳಾದ ಮೈಲಾರಪ್ಪ ಚಲವಾದಿ, ಸಂಜೀವಪ್ಪ ದೊಡ್ಡಕಾಳೇರ, ಹನುಮಂತಪ್ಪ ದೊಡ್ಡಕಾಳೇರ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಸಂಗೀತ ಕಲಾವಿದರುಗಳಾದ ರುದ್ರೇಶ ಬಡಿಗೇರ, ಕರಬಸಪ್ಪ ಬೇವಿನಹಳ್ಳಿ, ರಾಮಣ್ಣ ಕೂಸಗೂರ, ಮನೋಜ ಹುಲ್ಮನಿ ಭಾವಗೀತೆ, ಭಕ್ತಿಗೀತೆ ಹಾಗೂ ವಾದ್ಯಗೋಷ್ಠಿ ನಡೆಸಿಕೊಟ್ಟರು.ಕಸಾಪ ತಾಲೂಕು ಅಧ್ಯಕ್ಷ ಪ್ರಭಾಕರ ಶಿಗ್ಲಿ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್., ಮಾದೇವಮ್ಮ ಸಾವಕ್ಕನವರ, ಕಸಾಪ ಮೇಡ್ಲೇರಿ ಗ್ರಾಮ ಘಟಕದ ಅಧ್ಯಕ್ಷ ಮಾರುತಿ ತಳವಾರ, ಸಂಗೀತ ತರಬೇತಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಸಾವಕ್ಕನವರ, ಚಂಸು ಪಾಟೀಲ, ದೇವರಾಜ ಹುಣಸೀಕಟ್ಟಿ, ಮಲ್ಲೇಶಪ್ಪ ಮದ್ಲೇರ, ಮಂಜುಳಾ ಹಿರೇಬಿದರಿ, ದ್ರಾಕ್ಷಾಯಿಣಿ ಉದಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.